ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 28ರಂದು ದೇವನೂರಿನಲ್ಲಿ ಕವಿ ಲಕ್ಷ್ಮೀಶನ ಪ್ರತಿಮೆ ಸ್ಥಾಪನೆ

By Staff
|
Google Oneindia Kannada News

ಚಿಕ್ಕಮಗಳೂರು : ಕ್ರಿ.ಶ. 1550ರ ಸುಮಾರಿನಲ್ಲಿ ಜೀವಿಸಿದ್ದ ಕನ್ನಡದ ಹೆಸರಾಂತ ಕವಿ ಲಕ್ಷ್ಮೀಶನ ತವರೂರಾದ ದೇವನೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಲು ಉದ್ದೇಶಿಸಿರುವ ಲಕ್ಷ್ಮೀಶ ಕವಿಯ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ.

50 ಸಾವಿರ ರುಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಕವಿಯ ಪ್ರತಿಮೆಯನ್ನು ಗುರುವಾರ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಗಳಿಂದ ಬೀಳ್ಕೊಡಲಾಯಿತು. ಕವಿ ಲಕ್ಷ್ಮೀಶನ ಪ್ರತಿಮೆಯ ಪ್ರತಿಷ್ಠಾಪನಾ ಮಹೋತ್ಸವ ದೇವನೂರಿನಲ್ಲಿ ಜುಲೈ 28ರಂದು ನೆರವೇರಲಿದೆ.

ಕಾಫಿಯ ಕಣಜವಾದ ಚಿಕ್ಕಮಗಳೂರಿನಿಂದ ಕವಿಯ ತವರಿಗೆ ಹೊರಟ ಪ್ರತಿಮೆಗೆ ಗುರುವಾರ ಬೀಳ್ಕೊಡಲೆಂದೇ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಚ್‌. ಗೋಪಾಲಕೃಷ್ಣೇಗೌಡ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅಜ್ಜಂಪುರ ಸೂರಿ ಪ್ರತಿಮೆಗೆ ಹೂ ಮಾಲೆ ಹಾಕಿ ಬೀಳ್ಕೊಟ್ಟರು.

ಕವಿ ಲಕ್ಷ್ಮೀಶನ ಕುರಿತು : 16ನೇ ಶತಮಾನದ ಮಧ್ಯಭಾಗದಲ್ಲಿ ಬದುಕಿದ್ದ ಎನ್ನಲಾದ ಲಕ್ಷ್ಮೀಶನು

ಜೈಮಿನಿ ಮುನಿಗಳು ಸಂಸ್ಕೃತದಲ್ಲಿ ಬರೆದಿದ್ದ ಜೈಮಿನಿ ಭಾರತವನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿದ. ಸಂಸ್ಕೃತದ 68 ಅಧ್ಯಾಯದ ಬೃಹತ್‌ ಗ್ರಂಥವನ್ನು ಕೇವಲ 34 ಸಂಧಿಗಳಲ್ಲಿ ಅಡಕವಾಗುವಂತೆ ಕನ್ನಡಕ್ಕೆ ಅನುವಾದಿಸಿದ ಈತನ ಚಾತುರ್ಯ ಅತ್ಯದ್ಭುತ.

ಎಲ್ಲಿಯೂ ರಸಾಭಾಸವಾಗದಂತೆ ಲಕ್ಷ್ಮೀಶನು ಅನುವಾದಿಸಿದ ಈ ಕೃತಿ ಇಂದಿಗೂ- ಎಂದೆಂದಿಗೂ ಸರ್ವಶ್ರೇಷ್ಠ. ಲಕ್ಷ್ಮೀಶ ಕವಿಯ ಛಂದಸ್ಸು, ಶೈಲಿ, ಪಾತ್ರಪೋಷಣೆ, ಹಾಸ್ಯ, ಶೃಂಗಾರ, ಅಲಂಕಾರ, ಚಮತ್ಕಾರಗಳು ಓದುಗರನ್ನು ಮಂತ್ರಮುಗ್ಧಗೊಳಸುತ್ತದೆ.

ಅಶ್ವಮೇಧಯಾಗ ಈ ಕೃತಿಯ ಮುಖ್ಯ ವಿಷಯವೇ ಆದರೂ, ಲಕ್ಷ್ಮೀಶನ ಕಥೆಯಲ್ಲಿ ಪ್ರಾಸಂಗಿಕವಾಗಿ ಬರುವ ನೂರಾರು ರಂಜನೀಯ ಕಥೆಗಳಿವೆ. ಹೀಗಾಗೇ ಲಕ್ಷ್ಮೀಶನಿಗೆ ಉಪಮಾಲೋಲ ಎಂಬ ಬಿರುದು. ಈತನ ಪದಲಾಲಿತ್ಯ, ರಂಜನೀಯ ಕಲೆಗಾರಿಕೆಯನ್ನು ಮೆಚ್ಚಿ ಲಕ್ಷ್ಮೀಶನಿಗೆ ಕರ್ಣಾಟ ಕವಿ ಚೂತವನ ಚೈತ್ರ ಎಂದೂ ಬಿರುದು ನೀಡಲಾಗಿತ್ತು. ವಾರ್ಧಕ ಷಟ್ಪದಿಗಳಲ್ಲಿ ಈತ ರಚಿಸಿದ ಕಾವ್ಯ ಹಾಡಲು - ಕೇಳಲು ಬಲು ಇಂಪು.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X