ಕನ್ನಡ ಸಾಯುವುದಿಲ್ಲ , ಇಂಗ್ಲೀಷನ್ನು ಅರಗಿಸಿಕೊಳ್ಳುತ್ತದೆ- ಕೆ.ವಿ.ನಾರಾಯಣ
ಚಿತ್ರದುರ್ಗ : ಆರ್ಥಿಕ ಕ್ಷೇತ್ರದ ಅಭಿವೃದ್ಧಿಯ ಮೇಲೆ ಜಾಗತೀಕರಣ ಪರಿಣಾಮ ಬೀರಬಹುದೇ ಹೊರತು ಭಾಷೆಗಳ ಮೇಲಲ್ಲ ಎಂದು. ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿ , ವಿಮರ್ಶಕ ಹಾಗೂ ಭಾಷಾ ತಜ್ಞ ಕೆ.ವಿ. ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಬಹುಭಾಷಾ ದೇಶಗಳು ಹಾಗೂ ಆಲ್ಲಿನ ರಾಜಕೀಯ ವಲಯ ಜಾಗತೀಕರಣ ಕುರಿತು ಆತಂಕ ಪಡಬೇಕಿಲ್ಲ . ಅದರಲ್ಲೂ ಕನ್ನಡ ಭಾಷೆ ಜಾಗತೀಕರಣ ಪ್ರಕ್ರಿಯೆಗೆ ಹೆದರಬೇಕಾಗಿಲ್ಲ ಎಂದು ಕೆ.ವಿ.ನಾರಾಯಣ ಹೇಳಿದರು. ‘ಕನ್ನಡದ ಮೇಲೆ ಜಾಗತೀಕರಣದ ಪರಿಣಾಮ’ ಎಂಬ ವಿಷಯದ ಬಗೆಗೆ ಅಭಿರುಚಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡುತ್ತಿದ್ದರು.
ಕಳೆದ 10 ವರ್ಷಗಳಿಂದ ಜಾಗತೀಕರಣ ಪ್ರಕ್ರಿಯೆ ಮುಂದುವರೆಯುತ್ತಲೇ ಬಂದಿದೆ. ಈಗದು ಎರಡನೇ ಹಂತಕ್ಕೆ ತಲುಪಿದ್ದು, ಪ್ರಾದೇಶಿಕ ಭಾಷೆಗಳ ಮೇಲೆ ಇದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಬದುಕು ಮತ್ತು ಭಾಷೆಯ ನಡುವೆ ನೇರ ಸಂಬಂಧವಿರುವುದ ನಿಜ. ವೈವಿಧ್ಯಗಳೇ ಇಲ್ಲದ ಬದುಕಿನಲ್ಲಿ ಪ್ರತಿಗಾಮಿತನದ ಭಾವನೆ ಹುಟ್ಟುವುದೂ ಸಹಜ. ಅಮೆರಿಕ ಮತ್ತು ಯೂರೋಪ್ ದೇಶಗಳು ಇಂಗ್ಲಿಷನ್ನೇ ಮುಖ್ಯ ವ್ಯವಹಾರ ಭಾಷೆಯನ್ನಾಗಿ ರೂಪಿಸಲು ಯತ್ನಿಸುತ್ತಿವೆ. ಯಾಕೆಂದರೆ ದೇಶಗಳ ಸಮರ್ಥ ಅಭಿವೃದ್ಧಿಗೆ ಪ್ರಾದೇಶಿಕ ಭಾಷಯೇ ಒಂದು ತೊಡಕು ಎಂಬ ಭ್ರಮೆ ಅವರಿಗಿದೆ ಎಂದು ನಾರಾಯಣ್ ಪ್ರಾದೇಶಿಕ ಭಾಷೆಗಳನ್ನು ಸಮರ್ಥಿಸಿಕೊಂಡರು.
2003 ರೊಳಗೆ ಶೇ.60 ಭಾಷೆಗಳ ಸಾವು
ಭಾಷೆ, ದೇಶದ ಅನನ್ಯತೆಯನ್ನು ಪ್ರತಿನಿಧಿಸುತ್ತದೆ ಎಂದ ಅವರು ಕೆಲವು ಭಾಷೆಯ ನಿಷ್ಠುರತೆ ಮತ್ತು ಸಂಕುಚಿತತೆಯಿಂದಾಗಿ ಜಗತ್ತಿನ ಸುಮಾರು ಶೇ 60ರಷ್ಟು ಭಾಷೆಗಳು 2003ನೇ ಇಸವಿಯ ವೇಳೆಗೆ ಸಾಯಬಹುದು. ಆದರೆ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯಾದ್ದರಿಂದ ಅದು ಸಾಯುವುದು ಸಾಧ್ಯವಿಲ್ಲ. ಅದು ಆಂಗ್ಲ ಪದಗಳನ್ನು ತನ್ನೊಳಗೆ ಅರಗಿಸಿಕೊಳ್ಳಬಹುದೇ ವಿನಃ ಅದು ಸಾಯುವುದು ಸಾಧ್ಯವೇ ಇಲ್ಲ ಎಂದು ಅವರು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದ ಹೊಸ ಸಾಫ್ಟ್‌ವೇರ್ ಬಗ್ಗೆ ಮಾತನಾಡುತ್ತಾ, ಸಾಫ್ಟ್‌ವೇರ್‌ನ ಬಳಕೆ ಆರಂಭವಾದ ಮೇಲೆಯಷ್ಟೇ ಇದರ ಸ್ವರೂಪದ ಬಗ್ಗೆ ಹೇಳಬಹುದು. ಯಾಕೆಂದರೆ ಸಾಫ್ಟ್‌ವೇರ್ ತಯಾರಿಸಿದ ತಂತ್ರಜ್ಞರು ಕನ್ನಡದ ಬಗ್ಗೆ ಪೂರ್ತಿ ಜ್ಞಾನ ಉಳ್ಳವರೇನೂ ಅಲ್ಲ. ಆದ್ದರಿಂದ ಅದರಲ್ಲಿ ಹೆಚ್ಚು ಕಡಿಮೆಯಾಗಿರುವ ಸಾಧ್ಯತೆಯೂ ಇದೆ . ಕನ್ನಡ ಭಾಷಾ ಸಂರಕ್ಷಣೆಯ ಬಗ್ಗೆ ಹೇಳಬೇಕೆಂದರೆ, ಇಂಗ್ಲಿಷ್ ಭಾಷೆಯನ್ನೂ ಕನ್ನಡದಲ್ಲಿಯೇ ಕಲಿಸುವುದರಿಂದ ಹೆಚ್ಚು ಉಪಯೋಗವಿದೆ ಎಂದು ಕೆವಿಎನ್ ಹೇಳಿದರು.
(ಇನ್ಫೋ ವಾರ್ತೆ)












Click it and Unblock the Notifications