• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ನಮ್ಮ ಕಾಲದ ಕಷ್ಟಗಳೂ

By Super
|

ಶಾಂತಾದೇವಿ ಮಾಳವಾಡ, ಕನ್ನಡ ಸಾಹಿತ್ಯಾಸಕ್ತರಿಗೆ ಚಿರ ಪರಿಚಿತವಾದ ಹೆಸರೇನಲ್ಲ . ಅವರು ಕಾದಂಬರಿಯಿಂದ ಹಿಡಿದು ಶರಣ ಸಾಹಿತ್ಯದ ತನಕ ಎಲ್ಲಾ ವಿಭಾಗಗಳಲ್ಲೂ ಕೃತಿ ರಚನೆ ಮಾಡಿದ್ದರೂ ಎಂದೂ ಜನಪ್ರಿಯರಾಗಿರಲಿಲ್ಲ. ಅವರ ಕೃತಿಗಳು ಜನರನ್ನು ತಲುಪಲಿಲ್ಲ ಅನ್ನುವಷ್ಟೇ ಬಲವಾದ ಕಾರಣ ಇನ್ನೊಂದಿದೆ. ಅವರೆಂದೂ ತಮ್ಮ ಬಗ್ಗೆ ಹೇಳಿಕೊಳ್ಳಲಿಲ್ಲ. ಡಂಗುರ ಬಾರಿಸಲಿಲ್ಲ. ಬಾಜಾ ಬಜಂತ್ರಿ ಜೊತೆ ಭೋಪರಾಕು ಮಂಡಿಸಲಿಲ್ಲ. ಇಂಥವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಹಲವರಿಗಾದ ಸಮಾಧಾನವೂ ಇದೇ. ಮಹಾನ್‌ ಲೇಖಕಿಗೆ ಆ ಪಟ್ಟ ಸಿಗದೇ ಇರಬಹುದು, ಆದರೆ ಅಪ್ರಾಪ್ತರಿಗೆ ಸಿಕ್ಕಿಲ್ಲವಲ್ಲ ! ಸಾಹಿತ್ಯದ ಮಾತು ಬಂದಾಗ ಸಜ್ಜನಿಕೆ, ವಿನಯ ಸಂಪನ್ನತೆ ಮುಖ್ಯವಾಗುತ್ತದೋ, ಸೃಜನ ಶೀಲತೆಯೋ ಎನ್ನುವುದು ಬೇರೆ ಪ್ರಶ್ನೆ.

ಹಾಗೆ ನೋಡಿದರೆ ಶಾಂತಾದೇವಿ ಮಾಳವಾಡ ಅವರು ಸಾಹಿತಿಯೋ ಶರಣೆಯೋ ಹೇಳುವುದು ಕಷ್ಟ, ಶಿವ ಶರಣೆಯ ಪ್ರತಿರೂಪದಂತಹ ನಿಲುವು, ಕೊರಳಿನಲ್ಲೊಪ್ಪುವ ರುದ್ರಾಕ್ಷಿ ಸರ, ಮುಖದಲ್ಲಿ ನಲಿದಾಡುವ ನೆಮ್ಮದಿ , ಶರಣ ಸಾಹಿತ್ಯವನ್ನು ಕರತಲಾಮಲಕ ಮಾಡಿಕೊಂಡಂತೆ ಕಾಣುವ ನೀಲಾಂಜನ ನೋಟದ ಶಾಂತಾದೇವಿ, ಡಿಸೆಂಬರ್‌ 10, 1922ರಂದು ಬಾಗಲಕೋಟೆಯ ಬಾದಾಮಿ ತಾಲೂಕಿನ ಗೋವಲ ಕೊಪ್ಪದಲ್ಲಿ ಜನಿಸಿದರು. 15 ನೆಯ ವಯಸ್ಸಿನಲ್ಲಿಯೇ ಸಂಗಪ್ಪ ಸ. ಮಾಳವಾಡರನ್ನು ಮದುವೆಯಾದ ಶಾಂತಾ, ನಂತರ ಮನೆಯಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮುಂದುವರೆಸಿದರು. 1940ರಲ್ಲಿ ‘ಜಾಣ’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕನ್ನಡ ಸಾಹಿತ್ಯ ಲಲಿತ ಕಲೆಗಳ ಅಧ್ಯಯನದಲ್ಲೂ ತೊಡಗಿಕೊಂಡರು. ಅವರ ಮೊದಲ ಕೃತಿ ‘ಮೊಗ್ಗೆಯ ಮಾಲೆ’. ಮದುವೆಯಾಗಿ ನಾಲ್ಕು ವಷ ರ್ಗಳ ನಂತರ, 1941ರಲ್ಲಿ ಹೊರಬಂದ ಕೃತಿ ಇದು. ಈ ಕೃತಿಯ ಬೆನ್ನಿಗೇ ಕುಂಕುಮ ಬಲ, ಕನ್ನಡ ತಾಯಿ, ಮಹಿಳೆಯರ ಆತ್ಮ, ಶ್ರೀ ಹರಿಹರ-ನ ಪ್ರಾರ್ಥನೆ, ಬಸವ ಪ್ರಕಾಶ, ಅಕ್ಕನ ಭಾವ ಸೌಧ, ಬೆಳವಡಿ ಮಲ್ಲಮ್ಮ , ಭಾರತದ ಮಾನಸ ಪುತ್ರಿಯ-ರು, ಶಿವಯೋಗಿಣಿ, ಪುರಾತನ ಶರಣರು, ಕೆಳದಿಯ ಚೆನ್ನಮ್ಮ , ಹಚ್ಚೇವು ಕನ್ನಡದ ದೀಪ..., ಹೀಗೆ ಸುಮಾರು ನಲವತ್ತು ಸಾಹಿತ್ಯ ಕೃತಿಗಳನ್ನು ರಚಿಸಿದರು.

ಶಾಂತಾದೇವಿ 1939ರಲ್ಲಿ ಅಖಿಲ ಭಾರತ ಮಹಿಳಾ ಪರಿಷತ್ತಿನ ಧಾರವಾಡ ಘಟಕದ ಸದಸ್ಯರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದವರು, ಮುಂದೆ ಅನೇಕ ಸ್ತರಗಳಲ್ಲಿ , ಸ್ಥಾನ ಮಾನಗಳಲ್ಲಿ ಅವರು ದುಡಿದಿದ್ದಾರೆ. ಅಲ್ಲೆಲ್ಲಾ ರಚನಾತ್ಮಕ ಸೇವೆ ಸಲ್ಲಿಸಿದ್ದಾರೆ ಅನ್ನುತ್ತವೆ ಅವರ ಕುರಿತು ಬರೆದಿರುವ ಬರಹಗಳು. ಅನೇಕ ಸನ್ಮಾನಗಳಿಗೆ ಇವರು ‘ಬಾಧ್ಯ’ ರಾ ದದ್ದು ಉಂಟು. 1975ರಲ್ಲಿ ಧಾರವಾಡ ಜಿಲ್ಲಾ ಪರಿಷತ್ತಿನಿಂದ ಮಹಿಳಾ ವರ್ಷ ಸನ್ಮಾನ , ರಾಜ್ಯೋತ್ಸವ, ಮಹಿಳಾ ಮಂಡಳಿಗಳಿಂದ ಮನ್ನಣೆ, ಸಾರ್ವಜನಿಕ ಷಷ್ಟ್ಯಬ್ಧಿ ಸಮಾರಂಭ- ಹೀಗೆ ಅನೇಕ ಗೌರವ ಭಾಜನ ರಾದ ಶಾಂತಾದೇವಿ, ಜ.ಚ.ನಿ. ಪೀಠಾರೋಹಣ ರಜತ ಮಹೋತ್ಸವ ಸಮಾರಂಭದಲ್ಲಿ ಸಾಹಿತ್ಯ ಸುಮ ಬಿರುದಾಂಕಿತರಾಗಿ ಬಂಗಾರದ ಪದಕ ಗೆದ್ದರು. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಇವರನ್ನು ಅಲಂಕರಿಸಿದವು. ಇತರ ಪ್ರಶಸ್ತಿಗಳ ಪೈಕಿ ಸಾವಿತ್ರಮ್ಮ ದೇಜಗೌ, ಚಿತ್ರದುರ್ಗ ಬೃಹನ್ಮಠದ ಸಾಹಿತ್ಯ ರತ್ನ, ಸ್ವರ ಲಿಪಿ ಪ್ರತಿಷ್ಠಾನದ ಲಿಪಿ ಪ್ರಾಜ್ಞೆ, ಕರ್ನಾಟಕ ಸರಕಾರದ ಅತ್ತಿಮಬ್ಬೆ ಪ್ರಶಸ್ತಿ, ಬಸವ ಸಮಿತಿಯ ಶತಮಾನದ ಶರಣ -ಹೆಸರಿಸಬಹುದಾದವು. ಕನ್ನಡಿಗರು ಓದದ ಲೇಖಕಿ, ಶರಣ ಸಾಹಿತ್ಯದ ಕುರಿತು ಮಹತ್ವದ ಕೊಡುಗೆಯನ್ನೇನೂ ನೀಡದ ಕವಿ, ಕೇವಲ ಜಾತಿ ಆಧಾರದ ಮೇಲೆ ಸಾಹಿತ್ಯ ಸಮ್ಮೇಳನದ ಪಟ್ಟಿ ಗೆದ್ದುಕೊಂಡವರು ಎಂಬಿತ್ಯಾದಿ ದೂರುಗಳು ಚದುರಿದಂತೆ ಕೇಳಿಬರುತ್ತಿದೆ. ಬೆಂಗಳೂರಿನ ಪ್ರಕಾಂಡ ಸಾಹಿತಿಗಳಿಗೆ ಶಾಂತಾದೇವಿ ಮಾಳವಾಡ ಅವರು ಸ.ಶ. ಮಾಳವಾಡರ ಪತ್ನಿ ಎಂದಷ್ಟೇ ಗೊತ್ತು . ಈ ‘ಸಾಹಿತ್ಯ ಅಕಾಡೆಮಿ ಅದೆಲ್ಲಿಂದ ಅಧ್ಯಕ್ಷರನ್ನು ಹಿಡಿದುಕೊಂಡು ಬರ್ತಾರೆ ಕಣ್ರೀ ’ ಅಂತ ಖಾಸಗಿ ಸಮಾರಂಭವೊಂದರಲ್ಲಿ ಕವಿಯಾಬ್ಬರು ತಮಾಷೆ ಮಾಡಿ ನಕ್ಕಿದ್ದಾರೆ. ಇದೆಲ್ಲ ಬಹಿರಂಗವಾಗಿ ವ್ಯಕ್ತವಾಗಿಲ್ಲ ಅನ್ನುವುದು ಕನಿಷ್ಠ ಶಾಂತಾದೇವಿಯವರಿಗಾದರೂ ನೆಮ್ಮದಿಕೊಡುವ ಸಂಗತಿ.

ಸಾಹಿತ್ಯ ಕ್ಷೇತ್ರ ಎಷ್ಟು ಅಧಃಪತನಗೊಂಡಿದೆ ಎಂದರೆ , ಇನ್ನೊಬ್ಬ ಅರ್ಹ ಅಭ್ಯರ್ಥಿಯನ್ನು ತೋರಿಸಿ ಎಂದರೆ ಬೆಚ್ಚಿ ಬೀಳಬೇಕಾಗಿದೆ. ಹೀಗಿರುವಾಗ ಅನಗತ್ಯ ವಾದ ವಿವಾದಕ್ಕೆ ಅವಕಾಶ ಮಾಡಿಕೊಡುವ ಬದಲು, ಶಾಂತಾದೇವಿ ಮಾಳವಾಡ ಅವರ ಪ್ರತಿಭೆಯನ್ನು ಗುರುತಿಸುವುದು ಒಳ್ಳೆಯದು. ಬೆಂಗಳೂರಿನ ಸಾಹಿತಿಗಳಿಗೂ ಧಾರವಾಡದ ಸಾಹಿತಿಗಳಿಗೂ ಇರುವ ಹಳೆಯ ಜಗಳ ಮರುಕಳಿಸಲು ಇದು ನೆಪವಾಗುವುದು ಬೇಡ. ಅಷ್ಟಕ್ಕೂ ಈಗ ಜಗಳ ಆಡುವವರು ಯಾರಿದ್ದಾರೆ ? ಲಂಕೇಶ್‌ ಇದ್ದಿದ್ದರೆ ಒಂದೆರಡು ಸಾಲು ಬರೆದು ತಮ್ಮ ವಿರೋಧ ವ್ಯಕ್ತ ಪಡಿಸುತ್ತಿದ್ದರು.

ಆದರೆ ಈ ನಿರಾಸೆಯ ಮಬ್ಬುಗತ್ತಲಲ್ಲಿ ನಿಂತು ನೋಡುತ್ತಿರುವ ನಮಗೆ ಭವಿಷ್ಯದಷ್ಟೇ ಭೂತವೂ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಪರಂಪರೆ ಹಿನ್ನೆಲೆ ,ಪರಾಮರ್ಶೆಯ ಮುನ್ನೆಲೆ ಎರಡೂ ಇಲ್ಲದ ಮೇಲೆ ನೆಲೆ ಬೆಲೆಯ ಮಾತೇಕೆ ಬೇಕು ?

ಈಗ ನಡೆಯುತ್ತಿರುವ ಊಹಾಧಾರಿತ ನಿರ್ಲಕ್ಷ್ಯ ಹಾಗೂ ಬೆಂಬಲಗಳಿಗೆ ಸೈದ್ಧಾಂತಿಕ ನೆಲೆಗಟ್ಟಿಲ್ಲ. ಈ ಸಾಹಿತ್ಯ ಸಮ್ಮೇಳನದ ನೆಪದಲ್ಲಾದರೂ ಶಾಂತಾದೇವಿ ಮಾಳವಾಡರ ಬರಹಗಳ ಮೌಲ್ಯ ಮಾಪನ ನಡೆಯಲಿ. ಅದು ಎಲ್ಲ ಕನ್ನಡ ಮನಸುಗಳ ಆಸೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sahitya sammelana president and contemporary problems
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more