ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆಯಲ್ಲಿ ಇವತ್ತು

By Super
|
Google Oneindia Kannada News

ಬಾಗಲಕೋಟೆ: ಸಮ್ಮೇಳನದ ಕೊನೆಯ ದಿನವಾದ ಸೋಮವಾರ ನಡೆದದ್ದು ಮೂರು ಗೋಷ್ಠಿಗಳು. ನಾಟಕ, ಕವಿಗೋಷ್ಠಿ ಹಾಗೂ ಸಂಕೀರ್ಣ ಎನ್ನುವ ಮೂರು ಪ್ರಕಾರಗಳಲ್ಲಿ ಗೋಷ್ಠಿಗಳು ನಡೆದವು.

ಕರ್ನಾಟಕದಲ್ಲಿ ಹುಲುಸಾಗಿರುವ ರಂಗಭೂಮಿ ಬೆಳವಣಿಗೆ : ಇಡೀ ಭಾರತದಲ್ಲಿ ಹವ್ಯಾಸಿ ರಂಗಭೂಮಿ ಅಪರೂಪವೆಂಬಷ್ಟು ಬೆಳೆದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಪ್ರಸಿದ್ಧ ರಂಗಕರ್ಮಿ ಬಿ.ವಿ. ಕಾರಂತ ಅಭಿಪ್ರಾಯಪಟ್ಟರು. ಬೇರೆಡೆಗಳಲ್ಲಿ ರಂಗಭೂಮಿಯು ಆಮೆ ವೇಗದಲ್ಲಿ ಸಾಧನೆಗೈಯುತ್ತಿದ್ದರೆ, ನಮ್ಮಲ್ಲಿ ವೃತ್ತಿ, ಹವ್ಯಾಸಿ ಹಾಗೂ ಜಾನಪದ ರಂಗಭೂಮಿಗಳಿಗೆ ಸ್ವತಂತ್ರ ಅಸ್ತಿತ್ವ ದೊರೆತಿದೆ. ಇದು ಮುಂದುವರೆಯುತ್ತಲೂ ಇದೆ ಎಂದು ನಾಟಕ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾರಂತರು ಹೇಳಿದರು. ಸಾಹಿತ್ಯ- ರಂಗಭೂಮಿ ಸಂಬಂಧ, ಬದಲಾಗುತ್ತಿರುವ ಜನರ ಅಭಿರುಚಿ ಕುರಿತು ಕಾರಂತರು ಪ್ರಸ್ತಾಪಿಸಿದರು.

ರಂಗಭೂಮಿಯನ್ನು ಸವಾಲಾಗಿ ಸ್ವೀಕರಿಸಿ ದುಡಿಯುವಂಥ ಅವಕಾಶ ನಮ್ಮಲ್ಲಿ ಸೃಷ್ಟಿಯಾಗದ ಕಾರಣ ರಂಗಭೂಮಿ ಅನಾಸ್ಥೆಗೆ ಗುರಿಯಾಗಿದೆ. ರಂಗಪ್ರಯೋಗಗಳನ್ನು ಅರ್ಥೈಸಿಕೊಂಡು ಆನಂದಿಸುವ ಮಟ್ಟದಲ್ಲಿ ಜನರಿಲ್ಲ . ಇದರಿಂದಾಗಿಯೇ ನಾವು ಅತ್ಯುತ್ತಮ ನಟನನ್ನು ಇನ್ನೂ ನಿರೀಕ್ಷಿಸುತ್ತಲೇ ಇದ್ದೇವೆ ಎಂದರು. ಸಿನಿಮಾ ಮಾಧ್ಯಮ ಅತ್ಯುತ್ತಮ ನಟನನ್ನು ರೂಪಿಸಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿಗಳಿಗೆ ಮಾನ್ಯತೆ ದೊರೆಯದಿರುವ ಬಗೆಗೆ ಕಾರಂತರು ವಿಷಾದ ವ್ಯಕ್ತಪಡಿಸಿದರು. ನಾವು ನಾಟಕ ಸಾಹಿತಿಗಳನ್ನು ಗುರ್ತಿಸಿದ್ದೇವೆಯೇ ಹೊರತು ರಂಗಕರ್ಮಿಗಳನ್ನಲ್ಲ ಎಂದರು. ಕುಮಾರವ್ಯಾಸ ಭಾರತವನ್ನು ನಟನೆ ಅಭ್ಯಾಸಕ್ಕೆ ಬಳಸುವ ತಮ್ಮ ಇಚ್ಛೆಯನ್ನು ಕಾರಂತರು ಪ್ರಕಟಿಸಿದರು. ಕಾರಂತರ ಭಾಷಣದ ಹೊರತು ಗೋಷ್ಠಿಯ ಇತರ ಪ್ರಬಂಧಗಳು ಜನರಿಗೆ ನಿರಾಶೆ ಉಂಟುಮಾಡಿದವು.

ಆಕಾಶವಾಣಿ ನಾಟಕ ನಾಟಕವೇ ಅಲ್ಲ : ಆಕಾಶವಾಣಿ ನಾಟಕ ನಾಟಕವೇ ಅಲ್ಲ . ಶ್ರವ್ಯ ಮಾಧ್ಯಮದ ಮೂಲಕವೇ ಭ್ರಮೆ ಸೃಷ್ಟಿಸುವುದನ್ನು ಅಬ್ಬಬ್ಬಾ ಎಂದರೆ ಅರೆ ನಾಟಕ ಎನ್ನಬಹುದು ಎಂದು ಹಿರಿಯ ಸಾಹಿತಿ ಕ.ವೆಂ. ರಾಜಗೋಪಾಲ ಅಭಿಪ್ರಾಯಪಟ್ಟರು. ಲಂಕೇಶ್‌- ಚಂಪಾ- ಕಾರ್ನಾಡರ ನಾಟಕಗಳ ಬಗೆಗೆ ರಾಜಗೋಪಾಲ್‌ ಮಾತಾಡ ಹೊರಟಾಗ, ಜನರು ಗಲಭೆ ಎಬ್ಬಿಸಿ ರಾಜಗೋಪಾಲ್‌ ಮಾತು ನಿಲ್ಲಿಸಿದರು. ಮತ್ತೊಬ್ಬ ಭಾಷಣಕಾರ ರಂಗಕರ್ಮಿ ಆರ್‌. ನಾಗೇಶ್‌ ಸಂಸ- ಶ್ರೀರಂಗ- ಕೈಲಾಸಂ ನಾಟಕಗಳ ಬಗೆಗೆ ಮಾತನಾಡಿದರು.

ಭಾವನೆಗಳನ್ನು ಕಾಡದ ಕವಿಗೋಷ್ಠಿ : ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿದ್ದ ಕವಿ ಡಾ. ಬುದ್ಧಣ್ಣ ಹಿಂಗಮಿರೆ ಹಾಗೂ ಗೋಷ್ಠಿಯನ್ನು ಉದ್ಘಾಟಿಸಬೇಕಿದ್ದ ಶೈಲಜಾ ಉಡುಚಣ ಗೈರು ಹಾಜರಾದದ್ದು ಎರಡನೇ ಕಂತಿನ ಕವಿಗೋಷ್ಠಿಯ ವಿಶೇಷ.

ಮೊದಲನೇ ಕಂತಿನ ಕವಿಗೋಷ್ಠಿಯಲ್ಲಿ ಸಭಿಕರ ವಿರೋಧದಿಂದ ಕೆಲವು ಕವಿಗಳಿಗೆ ಕವಿತೆ ಓದಲೇ ಅವಕಾಶ ದೊರೆತಿರಲಿಲ್ಲ . ಆದರೆ ಸೋಮವಾರದ ಗೋಷ್ಠಿಯಲ್ಲಿ ಸಭಿಕರು ಶಾಂತರೀತಿಯಿಂದ ವರ್ತಿಸಿದರು. ಭಾಷಣ ರಹಿತವಾದ, ಕೇವಲ ಕವಿತೆಗಳ ವಾಚನಕ್ಕಷ್ಟೇ ಮೀಸಲಾದ ಗೋಷ್ಠಿಗೆ ನಿರೂಪಣೆಯೂ ಇರಲಿಲ್ಲ . ಕವಿತೆ ಓದಿದ ಬಹುತೇಕರು ಹೊಸಮುಖಗಳು. ಆ ಹೊಸತನ ಕವಿತೆಗಳಲ್ಲಿ ಮಾತ್ರ ಕಂಡುಬರಲಿಲ್ಲ . ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಾರ್ಕಂಡಪುರ ಶ್ರೀನಿವಾಸ, ಕಾವ್ಯ ಸದಾ ಪ್ರವಹಿಸುವ ನದಿ ಎಂದು ಅಭಿಪ್ರಾಯಪಟ್ಟರು.

ಸರಳ ವಿಷಯಗಳ ಚರ್ಚೆಗೆ ಮೀಸಲಾದ ಸಂಕೀರ್ಣ ಗೋಷ್ಠಿ : ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಜಾನಪದ ಮತ್ತು ಆಧುನಿಕ ವೈದ್ಯ ವಿಜ್ಞಾನಗಳ ಬಗೆಗಿನ ವಿಷಯಗಳು ಸಂಕೀರ್ಣ ಗೋಷ್ಠಿಯಲ್ಲಿ ಚರ್ಚೆಗೊಳಗಾದರೂ, ಹೊಸತನ ಎನಿಸುವ ವಿಷಯಗಳು ಪ್ರಸ್ತಾಪವಾದದ್ದು ಕಡಿಮೆಯೇ.

ಮಕ್ಕಳ ಪರಿಷತ್‌: ಮಕ್ಕಳ ಸಾಹಿತ್ಯಕ್ಕಾಗಿಯೇ ಪ್ರತ್ಯೇಕ ಪರಿಷತ್‌ ಇರಬೇಕು, ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆಯೇ ಪ್ರತ್ಯೇಕ ಗೋಷ್ಠಿ ಇರಬೇಕು ಎಂದು ಮಕ್ಕಳ ಸಾಹಿತ್ಯದ ಬಗೆಗೆ ಮಾತನಾಡಿದ ಸಾಹಿತಿ ಶ.ಗು. ಬಿರಾದಾರ ಹೇಳಿದರು. ಮಕ್ಕಳಿಗೆ ಒಳ್ಳೆಯ ಪುಸ್ತಕ ಓದಲು ಕೊಟ್ಟರೆ ಪೊಲೀಸರಿಗೆ ಲಾಠಿ- ಕೋವಿಗಳ ಅಗತ್ಯವೇ ಬೀಳುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.

ಸಾಹಿತ್ಯ ಕ್ಷೇತ್ರದಲ್ಲಿನ್ನು ಹೆಣ್ಣೇ ಮೊದಲು : ಪುರುಷರು ಸಾಫ್ಟ್‌ವೇರ್‌ ಯುಗದತ್ತ ಹೊರಳಿರುವುದರಿಂದ ಮುಂದೆ ಸಾಹಿತ್ಯ ಸೃಷ್ಟಿಯಲ್ಲಿ ತೊಡಗುವವರು ಮಹಿಳೆಯರೇ ಎಂದು ಮಹಿಳಾ ಸಾಹಿತ್ಯದ ಬಗೆಗೆ ಅಭಿಪ್ರಾಯ ಮಂಡಿಸಿದ ಡಾ. ಉಷಾದೇವಿ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯದ ಬಗೆಗಿನ ಮುನ್ನೋಟಗಳ ಸುಳಿವನ್ನು ನೀಡಿದ ಉಷಾದೇವಿ, ಮಹಿಳಾ ಸಾಹಿತಿಗಳನ್ನು ಸಾಮಾನ್ಯ ವರ್ಗಕ್ಕೆ ತರಬೇಕೆಂದು ಕೆಲವರು ಭಯದಿಂದ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಶೋಧನಾ ಕ್ಷೇತ್ರಕ್ಕೆ ಸಾರ್ವಜನಿಕ ಆಕರ್ಷಣೆ ಇಲ್ಲ : ಸಂಶೋಧನಾ ಕ್ಷೇತ್ರವು ಸಾರ್ವಜನಿಕ ಆಕರ್ಷಣೆಯನ್ನು ಹೊಂದಿಲ್ಲ ಎಂದು ಸಂಶೋಧನೆ ಬಗೆಗೆ ಮಾತನಾಡಿದ ಡಾ. ಬಿ.ಆರ್‌. ಹಿರೇಮಠ ಅಭಿಪ್ರಾಯಪಟ್ಟರು. ಕನ್ನಡ ಸಂಶೋಧನೆಯ ಪ್ರವರ್ತಕರು ಮುಖ್ಯವಾಗಿ ವಿದೇಶೀ ಸಂಶೋಧಕರೇ. ಇತ್ತೀಚೆಗೆ ಓದುಗರು ಮತ್ತು ಸಂಶೋಧಕರ ನಡುವೆ ಅಂತರ ಕಡಿಮೆಯಾಗುತ್ತಿದೆ ಎಂದರು.

ರ್ಯಾಪ್‌ನಿಂದ ಜಾನಪದದ ಬೆಳವಣಿಗೆಗೆ ಅಡ್ಡಿಯಿಲ್ಲ : ವಿಜ್ಞಾನದಷ್ಟೇ ಜಾನಪದ ಗಟ್ಟಿಯಾಗಿದೆ, ತೀವ್ರವಾಗಿದೆ. ರ್ಯಾಪ್‌, ಪಾಶ್ಚಾತ್ಯ ಸಂಗೀತಕ್ಕಿಂತ ಕನ್ನಡ ಜಾನಪದ ಭಿನ್ನವಾಗಿರುವುದರಿಂದ ಅದರ ಸ್ವಂತಿಕೆಗೇನೂ ತೊಂದರೆಯಿಲ್ಲ ಎಂದು ಜಾನಪದ ವಿಷಯದ ಬಗೆಗೆ ಅಭಿಪ್ರಾಯ ಮಂಡಿಸಿದ ಕೆ. ರಾಮೇಶ್ವರಪ್ಪ ಹೇಳಿದರು.

ವೈದ್ಯಕೃತಿ ಪ್ರಕಟಣೆಗೆ ಸಲಹೆ : ರಾಜೀವ್‌ ಗಾಂಧಿ ಆರೋಗ್ಯ ವಿವಿ, ಸಾಹಿತ್ಯ ಪರಿಷತ್‌ ಹಾಗೂ ವೈದ್ಯ ಕಾಲೇಜುಗಳು ವರ್ಷಕ್ಕೆ ಒಂದಾದರೂ ವೈದ್ಯ ಕೃತಿಯನ್ನು ಪ್ರಕಟಿಸುವಂತೆ ಆಧುನಿಕ ವೈದ್ಯ ವಿಜ್ಞಾನ ಸಾಹಿತ್ಯದ ಬಗೆಗೆ ಮಾತನಾಡಿದ ಡಾ. ಎಸ್‌.ಜಿ. ನಾಗಲೋಟಿ ಮಠ ಹೇಳಿದರು. ರೋಗಗಳ ಬಗೆಗೆ ಜನರಿಗೆ ಅರಿವು ಮೂಡಿಸಲು ವೈದ್ಯ ಸಾಹಿತ್ಯ ಅತ್ಯಗತ್ಯ ಎಂದವರು ಅಭಿಪ್ರಾಯಪಟ್ಟರು.

English summary
Kannada Sahitya Sammelana - Drama will not vanish in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X