ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಭೂಕಂಪ ಆಗಿದ್ದಿದ್ದರೆ ಈ ಸನ್ಮಾನ ನಡೆಯುತ್ತಿರಲಿಲ್ಲ

By Super
|
Google Oneindia Kannada News

ಬಾಗಲಕೋಟೆ : ಈ ಕಾಲದಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವವರಿಲ್ಲ ಅನ್ನುವ ಗೋಳು ಬಾಗಲಕೋಟೆ ಸಮ್ಮೇಳನದಲ್ಲಿ ಸುಳ್ಳಾಗಿದೆ. ಸಮ್ಮೇಳನದ ಪುಸ್ತಕದಂಗಡಿಗಳಲ್ಲಿ ಪೇರಿಸಿಟ್ಟ ಪುಸ್ತಕಗಳನ್ನು ಆಯ್ದುಕೊಳ್ಳುವ, ಒಳಗೇನಿದೆ....ಎಂದು ಒಂದೆರಡು ಪುಟಗಳನ್ನು ತಿರುವಿ ನೋಡುವ, ಇಂಥಾ ಪುಸ್ತಕ ಇದೆಯಾ...ಎಂದು ಪುಸ್ತಕದ ಅಟ್ಟಿಗಳನ್ನು ಅಗೆದು ನೋಡುವ ಮಂದಿ ಪುಸ್ತಕ ಮಳಿಗೆಗಳ ಮುಂದೆ ಸಾಕಷ್ಟು ಇದ್ದರು.

ಮಳೆ ಬರಬಹುದು, ಗಲಾಟೆಯಾಗಬಹುದು ಅಂತ ಹೆದರಿಕೊಂಡೇ ಒಂದಷ್ಟು ಪುಸ್ತಕಗಳನ್ನು ಗಂಟುಕಟ್ಟಿಕೊಂಡು ಅರೆ ಮನಸ್ಸಿನ ಸಪ್ಪೆ ಮೋರೆಯಾಂದಿಗೆ ಬಾಗಲಕೋಟೆಗೆ ಬಂದು ಕುಳಿತ ಮಾರಾಟಗಾರರ ಹೆದರಿಕೆ , ಶುರುವಿನ ದಿನವೇ ಹಾರಿ ಹೋಯಿತು. ಸಮ್ಮೇಳನದಲ್ಲಿದ್ದ 200 ಪುಸ್ತಕ ಮಳಿಗೆಗಳಲ್ಲಿ ಜನರಿಲ್ಲದ ವೇಳೆಯಿರಲಿಲ್ಲ. 'ಪುಸ್ತಕ ಕೊಳ್ಳುವುದಕ್ಕೆ ಸಾಲುಗಟ್ಟಿ ನಿಂತ ಜನರನ್ನು ನಿಭಾಯಿಸುವುದೇ ದುಸ್ತರವಾಗಿದೆ ಸ್ವಾಮಿ...’ ಅಂತ ಬೆಂಗಳೂರಿನ ಸ್ವಪ್ನ ಬುಕ್‌ ಸ್ಟಾಲ್‌ನ ಮಳಿಗೆಯಲ್ಲಿರುವವರು ಹೇಳಿದರೆ, ಕೆಲವರು ಮೊದಲ ದಿನದಲ್ಲಿಯೇ ಒಳ್ಳೆಯ ಬೋಣಿಯಾಗಿದೆ, ನೋಡಬೇಕು ಸಾರ್‌ ಅಂತ ಹೇಳುತ್ತಿದ್ದರು. ಕನಕಪುರ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಪುಸ್ತಕಾಭಿಮಾನಿಗಳು ಪುಸ್ತಕದಂಗಡಿಯಾಳಗೆ ತಲೆ ತೂರಿಸಿದ್ದು ಕೊನೆಯದಿನ ಮಾತ್ರ. ಮೊದಲೆರಡು ದಿನ ಪುಸ್ತಕ ಕಾಯುತ್ತಾ ತೂಕಡಿಸಿ ಕುಳಿತವರು ಕೊನೆಯ ದಿನ ಕೈಗೆ ಬಂದ ಆರು ಕಾಸನ್ನು ಹಿಡಿದುಕೊಂಡು, ಉಳಿದ ಪುಸ್ತಕದೊಂದಿಗೆ ಊರಿಗೆ ಹೊರಟಿದ್ದರು. ಆದರೆ ಬಾಗಲಕೋಟೆಯಲ್ಲಿ ಟೆಂಟ್‌ ಸರಿಮಾಡಿ ಪುಸ್ತಕ ಜೋಡಿಸಿಡುವ ಮುನ್ನವೇ 'ಇದಕ್ಕೆಷ್ಟು ಡಿಸ್ಕೌಂಟ್‌.... ’ ಅಂತ ಪುಸ್ತಕಾಭಿಮಾನಿಗಳು ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ಕೇಳಲಾರಂಭಿಸಿದ್ದರು.

ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಲಘು ಸಾಹಿತ್ಯ ಮಾರಾಟಗಾರರಿಗೆ ಹೋಲಿಸಿದರೆ ಗಂಭೀರ ಸಾಹಿತ್ಯ ಪ್ರಕಟಣೆಗಾರರಿಗೆ ಹೇಳುವಂತ ಖುಷಿಯಾಗಿಲ್ಲ . ಲಘು ಸಾಹಿತ್ಯ ಮಾರುವವರ ಅಂಗಡಿ ಜನ ಮುಂದೆ ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಜನ ಕಾಣ ಬರುತ್ತಿದ್ದರೆ, ಗ್ರಂಥ, ಲೇಖನ ಮಾಲೆಯಂಥ ದಪ್ಪ ಪುಸ್ತಕಗಳ ಅಟ್ಟಿ ಇರಿಸಿಕೊಂಡ ಅಂಗಡಿಗಳಲ್ಲಿ ಅಂಥ ರಶ್‌ ಇರಲಿಲ್ಲ. ಹಾಗೆಂದು ಅವರ ವ್ಯಾಪಾರ ಕುಸಿದಿದೆ ಎಂದಲ್ಲ. 'ಪರವಾಗಿಲ್ಲ, ಲಾಸ್‌ ಆಗಲಿಕ್ಕಿಲ್ಲ’ ಅಂತ ಒಂದೆರಡು ಅಂಗಡಿಯ ಮಾಲಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಳೆಗನ್ನಡ, ನಡುಗನ್ನಡ ಕಾವ್ಯವಾಚನದ ಕ್ಯಾಸೆಟ್‌ಗಳು, ವಚನ ಗಾಯನದ ಧ್ವನಿ ಸುರುಳಿ, ಕುಮಾರ ವ್ಯಾಸ ಭಾರತ ಗಾಯನಗಳ ಕ್ಯಾಸೆಟ್‌ನ್ನು ಮಾರುತ್ತಿದ್ದ ಅಂಗಡಿಗಳ ಮುಂದೆಯೂ ಜನರ ಗುಂಪು ಇತ್ತು. ಪಾಕ ಶಾಸ್ತ್ರ ಪುಸ್ತಕಗಳ ಮಾರಾಟ ಹೇಗಿದೆ ನೋಡೋಣ ಅಂತ ಕೇಳಿಕೊಂಡು ಹೊರಟಾಗ, ಅಂತಹ ವಿಶೇಷವೇನೂ ಕಂಡು ಬರಲಿಲ್ಲ. ಸಮ್ಮೇಳನದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿಯಿದ್ದರೂ ಶಾಂತಾದೇವಿಯವರ ರಸಪಾಕ ಎಲ್ಲಿಯೂ ಕಾಣಲಿಲ್ಲ . ಕುವೆಂಪು, ತೇಜಸ್ವಿ, ಕಾರಂತ, ಕೆಎಸ್‌ನ ರಂತಹವರ ಕೃತಿಗಳಿಗಾಗಿ ಮಂದಿ ಹುಡುಕಾಡುತ್ತಿದ್ದರು. ಭೈರಪ್ಪನವರ ಕಾದಂಬರಿಗಳಿಗೆ ಭಾರೀ ಬೇಡಿಕೆ ಇತ್ತು. ಹಂಪೆಯ ಕನ್ನಡ ವಿಶ್ವ ವಿದ್ಯಾಲಯ ಮೊದಲ ದಿನದಂದೇ 22 ಸಾವಿರ ರೂಪಾಯಿಯ ಪುಸ್ತಕಗಳನ್ನು ಮಾರಿದ್ದರೆ, ಮೈಸೂರು ಪ್ರಸಾರಾಂಗ ಮಳಿಗೆ 10 ಸಾವಿರ ರೂಪಾಯಿಯ ಪುಸ್ತಕಗಳನ್ನು ಖಾಲಿಮಾಡಿಕೊಂಡಿತು. 400 ಪ್ರತಿ ಇಂಗ್ಲಿಷ್‌-ಕನ್ನಡ ನಿಘಂಟುಗಳನ್ನು ತರಿಸಿಕೊಂಡಿದ್ದ ಪ್ರಸಾರಾಂಗ ಮಳಿಗೆಯಲ್ಲಿ 200 ಪ್ರತಿಗಳು ಮೊದಲ ದಿನವೇ ಖಾಲಿಯಾದವು. ಪುಸ್ತಕ ಕೊಳ್ಳುವುದಕ್ಕೂ ಜನ , ಹೆಸರು ಮಾಡಿರುವ ಪುಸ್ತಕ ಪ್ರಕಾಶನದ ಅಂಗಡಿಗಳತ್ತಲೇ ಹೆಚ್ಚಾಗಿ ಹೋಗುತ್ತಿದ್ದು ಕಂಡು ಬಂತು. ಬ್ರಾಂಡ್‌ ಮೇನಿಯಾ ಇಲ್ಲಿಯೂ ಇದೆ ಎಂದಾಯಿತು.

ರಂ.ಶ್ರೀ. ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ತೀನಂಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆ ಪುಸ್ತಕಗಳಿಗೆ ಜನರು ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಹುಡುಕಾಡುತ್ತಿದ್ದಾರೆ. ಆದರೆ ಈ ಎರಡು ಪುಸ್ತಕಗಳ ಪ್ರತಿಗಳು ಎಲ್ಲಿಯೂ ಲಭ್ಯವಿಲ್ಲ. ಒಟ್ಟಿನಲ್ಲಿ ಎಂದಿನಂತೆ ಹಾರು ಹೊಡೆಯುತ್ತಿರುವ ಪುಸ್ತಕ ಮಳಿಗೆಗಳ ಗೋಳು ಈ ಬಾರಿ ಕಂಡು ಬರಲಿಲ್ಲ. ಕಂಪ್ಯೂಟರ್‌, ಇಂಟರ್‌ನೆಟ್‌ಗಳು ಪುಸ್ತಕ ಓದುವ ಪ್ರವೃತ್ತಿಯನ್ನು ಕುಂಠಿತಗೊಳಿಸುತ್ತವೆ ಎನ್ನುವ ವಾದಕ್ಕೆ ಬಾಗಲಕೋಟೆ ಸಮ್ಮೇಳನ ಪುರಾವೆ ಒದಗಿಸಲಿಲ್ಲ . ಆದರೆ ಈ ಪುಸ್ತಕದ ಗೀಳಿನ ಹಿಂದೆ ನಿಜವಾಗಿ ಓದಿನ ದಾಹ ಇದೆಯೇ ಎನ್ನುವುದು ಗೊತ್ತಾಗುವುದಿಲ್ಲ. ಯಾಕೆಂದರೆ ಮನೆಯ ಶೋಕೇಸಿನಲ್ಲಿ ಶ್ರೀ ರಾಮಾಯಣದರ್ಶನಂ, ಪರ್ವ, ಲೋಹಿಯಾ ವಿಚಾರವಾದದಂತಹ ಪುಸ್ತಕಗಳನ್ನಿಟ್ಟುಕೊಂಡು ಕುವೆಂಪು ಯಾರೆನ್ನುವುದನ್ನು ತಿಳಿಯದ ಮನೆ, ಮನೆ ಮಂದಿ ಕರ್ನಾಟಕದಲ್ಲಿದ್ದಾರೆ ಎನ್ನುವುದನ್ನು ನಾವು ಮರೆಯಬಾರದು.

English summary
Kannada Sahitya Sammelana - Still there are readers for Kannada books
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X