ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ: ಯಾಕೆ ಗೊತ್ತೇ?
ಆರೋಗ್ಯ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಅದು ಮಾನಸಿಕವಾಗಿಯೂ ಇರಬೇಕು. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಇವತ್ತು ಬಹಳಷ್ಟು ಜನ ದೈಹಿಕವಾಗಿ ಆರೋಗ್ಯವಾಗಿದ್ದರೂ ಎಲ್ಲೋ ಒಂದು ಕಡೆ ಮಾನಸಿಕ ಅನಾರೋಗ್ಯದಿಂದ ಬಳಲುವುದು ಹೆಚ್ಚಾಗಿ ಕಾಣಿಸುತ್ತದೆ. ಅವರು ಮಾನಸಿಕವಾಗಿ ಆರೋಗ್ಯವಾಗಿಲ್ಲ ಎಂಬುದು ಅವರ ನಡೆ, ನುಡಿ, ವರ್ತನೆಗಳಲ್ಲಿಯೇ ಗೊತ್ತಾಗಿ ಬಿಡುತ್ತದೆ. ಇದೆಲ್ಲ ಏಕೆ ಆಗುತ್ತಿದೆ ಎನ್ನುವುದನ್ನು ನೋಡಿದ್ದೇ ಆದರೆ ಇವತ್ತಿನ ಆಹಾರ ಪದಾರ್ಥಗಳು, ಕೆಲಸ ಕಾರ್ಯಗಳ ಒತ್ತಡಗಳು ಆ ರೀತಿ ಮಾಡುತ್ತಿವೆ.
ನಾವು ನಾಗಾಲೋಟದಲ್ಲಿ ಓಡುತ್ತಿದ್ದೇವೆ. ನಮಗೆ ಸಾಕು ಎಂಬ ತೃಪ್ತಿಯಿಲ್ಲ. ನೆಮ್ಮದಿಯೂ ಬೇಕಾಗಿಲ್ಲ. ಏನಾದರೊಂದು ಮಾಡಬೇಕು. ಅದರಿಂದ ಒಂದಷ್ಟು ಹಣವನ್ನು ಸಂಪಾದಿಸಬೇಕು. ಎಲ್ಲರಂತೆ ನಾನು ಕೂಡ ಬಂಗಲೆ ಕಟ್ಟಿಸಬೇಕು, ಮನೆ ಮುಂದೆ ವಾಹಗಳನ್ನು ನಿಲ್ಲಿಸಬೇಕು, ನಾನು ಯಾರಿಗೂ ಕಡಿಮೆಯಾಗಿರಬಾರದು ಎಂಬ ತೋರಿಕೆಯ ಸಿರಿತನದ ಚಕ್ರವ್ಯೂಹದಲ್ಲಿ ಸಿಲುಕಿ ತಮಗೆ ಸಹಿಸಿಕೊಳ್ಳಲಾರದ ಭಾರಗಳನ್ನು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಹಿರಿಯ ಮಾತನ್ನು ಬದಿಗೊತ್ತಿ ಹೊರುತ್ತಿದ್ದೇವೆ. ಇದರ ಪರಿಣಾಮಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿವೆ.

ಮನೋಶಾಸ್ತ್ರಜ್ಞರು ಹೇಳುವಂತೆ ಒಬ್ಬ ಮನುಷ್ಯನಿಗೆ ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲವಂತೆ. ಮೆದುಳಿನಲ್ಲಿ ಶೇಖರಣೆಯಾಗುವ ಅಸಂಖ್ಯ ವಿಷಯಗಳನ್ನು ಮೆದುಳು ಹೊರ ಹಾಕಲು ಸದಾ ಯತ್ನಿಸುತ್ತದೆ. ಮರೆವು ಎನ್ನುವುದು ಒಂದು ರೀತಿಯ ಮೆದುಳಿನ ಡಿಫೆನ್ಸಿವ್ ಮೆಕಾನಿಸಮ್ನಂತೆ. ಇಲ್ಲಿ ಮರೆವು ಚಿಕ್ಕ ಚಿಕ್ಕ ವಿಷಯಗಳಿಗಾಗಿಯೇ ಆಗುತ್ತಿದ್ದರೂ ಅದು ತರುವ ಆವೇಶ, ಉದ್ರೇಕ, ಭಯ ನಮ್ಮ ಮೇಲೆ ಪರಿಣಾಮ ಬೀರುತ್ತದೆ.
ಖುಷಿಯಾಗಿದ್ದಷ್ಟೂ ಮಾನಸಿಕ ಆರೋಗ್ಯ ವೃದ್ಧಿ
ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಹೊಟ್ಟೆ ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನೂರೆಂಟು ವ್ಯವಹಾರಗಳಿಂದ ಯೋಚನೆಗಳೇ ಜಾಸ್ತಿಯಾಗಿ ನಿದ್ದೆ ಕಡಿಮೆಯಾಗುತ್ತದೆ. ಇದರಿಂದ ಕ್ರಿಯಾಶೀಲತೆ ಸತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಸುಸ್ತು ಕಾಡುತ್ತದೆ. ಹಾಗಾದರೆ ಒತ್ತಡದ ಬದುಕಿನಲ್ಲಿ ನಾವು ಮಾಡಿಕೊಂಡಿರುವ ಯಡವಟ್ಟುಗಳಿಗೆ ಪರಿಹಾರ ಇಲ್ಲವೆ? ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ ಅದಕ್ಕೆ ಮನಶಾಸ್ತ್ರಜ್ಞರು ಒಂದಷ್ಟು ಸಲಹೆಗಳನ್ನು ನಮ್ಮ ಮುಂದಿಡುತ್ತಾರೆ.

ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿರುವುದರಿಂದ ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು. ಏಕೆಂದರೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯ ಪರಿಸ್ಥಿತಿಯಿಂದ ಮಾಡಲೇ ಬೇಕಾಗುತ್ತದೆ. ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ.
ಒತ್ತಡಗಳಿಂದ ಹೊರ ಬರಲು ಪ್ರಯತ್ನಿಸಿ
ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ನಮ್ಮಲ್ಲೇ ಸಿಗುವ ಸಾಧ್ಯತೆಯಿರುತ್ತದೆ. ಕೆಲವು ಸಮಸ್ಯೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಆದರೆ ಆಗಲೂ ಎಚ್ಚರವಾಗಿರಬೇಕು. ತೀರಾ ವೈಯಕ್ತಿಕ ವಿಚಾರವಾದರೆ ಕೇಳುವ ವ್ಯಕ್ತಿ ನಂಬಿಕಸ್ತನಾಗಿರಬೇಕು ಇಲ್ಲದೆ ಹೋದರೆ ಸಮಸ್ಯೆ ಹೇಳಿ ಮತ್ತಷ್ಟು ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶ ಸೃಷ್ಠಿಯಾಗಬಹುದು. ಚರ್ಚಿಸುವಾಗ, ಅಥವಾ ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಹೇಳಿ ಹಗುರವಾದರೂ ಅದು ಬೇರೆಯದ್ದೇ ಪರಿಣಾಮ ಬೀರಬಹುದು.

ಏನೇನೋ ಮಾತನಾಡಿ ಮನನೋಯಿಸುವ ಅಥವಾ ವಿವಾದಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಜಾಣ್ಮೆ ನಮ್ಮಲಿರಬೇಕು. ಗಾಳಿ ಸುದ್ದಿಯನ್ನು ನಿಜವೆಂಬಂತೆ ಮಾತನಾಡುವುದನ್ನು ಬಿಟ್ಟು ಬಿಡಬೇಕು. ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಮೋಜು ಮಸ್ತಿ, ಪಾರ್ಟಿಗಳಿಂದ ದೂರವಿದ್ದರೆ ಉತ್ತಮ.












Click it and Unblock the Notifications