ಬೇಸಿಗೆಯಲ್ಲಿ ಅರಿಶಿನ ಬಳಸುವುದರಿಂದ ತ್ವಚೆಗೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?
ಬಿಸಿಲಿನ ಝಳ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ತಮ್ಮ ಸೌಂದರ್ಯವನ್ನು ಬಿಸಿಲಿನಿಂದ ಹೇಗಪ್ಪಾ ಕಾಪಾಡಿಕೊಳ್ಳುವುದು ಎಂದು ಚಿಂತಿಸುವವರು ಅರಿಶಿನದ ಬಳಕೆಯನ್ನು ಹೆಚ್ಚೆಚ್ಚು ಮಾಡಿಕೊಳ್ಳುವುದು ಜಾಣತನವಾಗಿದೆ. ಅರಿಶಿನವು ಆರೋಗ್ಯದ ದೃಷ್ಟಿಯಿಂದ ಹಲವು ರೀತಿಯಲ್ಲಿ ಉಪಯೋಗಕಾರಿ ಆಗಿರುವುದರಿಂದ ಅದರ ಮಹತ್ವ ಅರಿತು ದಿನ ನಿತ್ಯ ಬಳಕೆ ಮಾಡಿದರೆ ಬೇಸಿಗೆಯಲ್ಲಿ ತ್ವಚೆಯ ಸುಂದರತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ.
ಸಾಮಾನ್ಯವಾಗಿ ಮಲೆನಾಡಿನ ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಅರಿಶಿನದ ಗಿಡ ಇದ್ದೇ ಇರುತ್ತದೆ. ಇದನ್ನು ಇಲ್ಲಿನವರು ವಾಣಿಜ್ಯ ಉದ್ದೇಶಕ್ಕೆ ಬೆಳೆಯದಿದ್ದರೂ ತಮ್ಮ ಉಪಯೋಗಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಬಹಳಷ್ಟು ಮನೆ ಮದ್ದುಗಳಲ್ಲಿ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಅರಿಶಿನ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಇದರ ಮುಂದೆ ಎಲ್ಲ ಸೌಂದರ್ಯ ವರ್ಧಕಗಳು ಗೌಣವಾಗಿಬಿಡುತ್ತವೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸೌಂದರ್ಯ ವರ್ಧಕಗಳು ಬಂದಿವೆ. ಮೊದಲೆಲ್ಲ ಸೌಂದರ್ಯ ವರ್ಧಕವಾಗಿ ಮನೆಯ ಸುತ್ತ ಸಿಗುತ್ತಿದ್ದ ಗಿಡಮೂಲಿಕೆಗಳನ್ನೇ ಮಹಿಳೆಯರು ಬಳಸುತ್ತಿದ್ದರು. ಆಗ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದೇ ಅರಿಶಿನವಾಗಿದೆ. ಮದುವೆ ಶುಭಸಮಾರಂಭದಲ್ಲಿ ಅರಿಶಿನಕ್ಕೆ ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ವಧು-ವರರನ್ನು ಇಂದಿಗೂ ಅರಿಶಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಕಾರಣ ವಿವಾಹದ ಸಂದರ್ಭ ಕಾಂತಿಯುತವಾಗಿ ಕಾಣಲಿ ಎಂಬ ಉದ್ದೇಶ ಇದಾಗಿದೆ.
ಮುಖದ ಕಾಂತಿಗೆ ಸಹಕಾರಿ
ಅರಿಶಿನವನ್ನು ಉಪಯೋಗಿಸುವುದರ ಮೂಲಕ ಯಾವ ರೀತಿಯ ಉಪಯೋಗ ಪಡೆಯಬಹುದು ಮತ್ತು ಅದು ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಯುರ್ವೇದದಲ್ಲಿ ಈ ಹಿಂದೆಯೇ ವಿವರಿಸಲಾಗಿದೆ. ಅದರಂತೆ ಅರಿಶಿನವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ ಮುಖ ಕಾಂತಿಯುವಾಗುತ್ತದೆ.

ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ ಅರೆದು ಉಪಯೋಗಿಸಬಹುದು. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಮೇಲೆ ಗುರುತುಗಳು, ಕಲೆಗಳು ಮೂಡುವುದು ಸಾಮಾನ್ಯ. ಆಗ ಹಾಲಿನೊಂದಿಗೆ ಅರಿಶಿನ ಅರೆದು ಹೊಟ್ಟೆಗೆ ಹಚ್ಚಿ ಸ್ನಾನದ ಮೊದಲು ತೆಂಗಿನ ಎಣ್ಣೆಯನ್ನು ಹಚ್ಚುತ್ತಿದ್ದರೆ ಈ ಗುರುತುಗಳು ಮಾಯವಾಗುತ್ತವೆ. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ.
ಮುಖದ ಕಲೆಯೂ ಮಾಯ
ಗುಲಾಬಿ ದಳಗಳು ಮತ್ತು ಒಣಗಿಸಿ ಕುಟ್ಟಿ ಪುಡಿ ಮಾಡಿದ ಅರಿಶಿನವನ್ನು ಅತ್ಯುತ್ತಮವಾದ ಸ್ನಾನದ ಪುಡಿಯನ್ನಾಗಿ ಬಳಸಬಹುದು. ಸಾಬೂನಿನ ಬದಲಾಗಿ ಇದನ್ನೇ ಬಳಸಿದರೆ ಅನೇಕ ಬಗೆಯ ಚರ್ಮರೋಗಗಳು ಗುಣವಾಗುತ್ತವೆ. ಜತೆಗೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶ ಮಾಡದೆ ರಕ್ಷಿಸಿ ಚರ್ಮವನ್ನು ಸುಸ್ಥಿತಿಯಲ್ಲಡುತ್ತದೆ. ಸೊಳ್ಳೆ ಮುಂತಾದ ಕೀಟಗಳು ಕಚ್ಚಿದಾಗ ಉಂಟಾಗುವ ದದ್ದು ಬಾವುಗಳು ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ.

ಬಂಗು, ಚಿಬ್ಬು, ಇತ್ಯಾದಿ ಕಲೆಗಳ ನಿವಾರಣೆಗೆ ಹಾಲಿನ ಕೆನೆ, ಅಥವಾ ನಿಂಬೆ ರಸದಲ್ಲಿ ಅರಿಶಿನವನ್ನು ತೇಯ್ದು ಲೇಪಿಸಿ ಎರಡು ಗಂಟೆಗಳ ಕಾಲ ಬಿಟ್ಟು ಬಿಸಿ ನೀರಿನಿಂದ ಕಡಲೆ ಹಿಟ್ಟು ಬಳಸಿ ತೊಳೆದರೆ ಮಾಯವಾಗುತ್ತದೆ. ಅರಿಶಿವನ್ನು ಮನೆ ಬಳಿ ಒಂದಿಷ್ಟು ಜಾಗವಿದ್ದರೆ ಯಾರೂ ಬೇಕಾದರೂ ಬೆಳೆಸಿಕೊಂಡು ಉಪಯೋಗಿಸಿಕೊಳ್ಳಬಹುದಾಗಿದೆ. ಅಂಗಡಿಗಳಲ್ಲಿ ಒಣಗಿಸಿದ ಅರಿಶಿನದ ಕೊಂಬು ಅಥವಾ ಪುಡಿ ಸಿಗುತ್ತದೆಯಾದರೂ ತಾಜಾ ಅರಿಶಿನವನ್ನು ಬಳಸುವುದು ಉತ್ತಮ.












Click it and Unblock the Notifications