Walking: ಈ ದೊಡ್ಡ ದೊಡ್ಡ ಕಾಯಿಲೆಗಳ ನಿರ್ಮೂಲನೆಗೆ ಸೂಕ್ತ ಮದ್ದೇ ವಾಕಿಂಗ್..!
ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋದಾಗ ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ ಎಂದು ಹೇಳುವುದು ಸಹಜ. ಇವತ್ತಿನ ಲೈಫ್ ಸ್ಟೈಲ್ ನಲ್ಲಿ ಬಹಳಷ್ಟು ಮಂದಿಗೆ ಶ್ರಮದ ಕೆಲಸ ಮಾಡಿಯೇ ಗೊತ್ತಿಲ್ಲ. ಇನ್ನು ಕೆಲವರು ಶ್ರಮದ ಕೆಲಸ ಮಾಡುವುದಿರಲಿ, ಸ್ವಲ್ಪವೂ ಶ್ರಮಪಡಲು ತಯಾರಿಲ್ಲ. ಹೀಗಿರುವಾಗ ಅವರಿಗೆ ಬೆಳಗ್ಗೆ ಎದ್ದು ವ್ಯಾಯಾಮ ಮಾಡಿ, ವಾಕಿಂಗ್ ಮಾಡಿ ಎಂದರೆ ಅವರು ಮಾಡುತ್ತಾರಾ? ಖಂಡಿತಾ ಸಾಧ್ಯವಿಲ್ಲ. ಅವರೆಲ್ಲರೂ ಅಂತಹದೊಂದು ತೀರ್ಮಾನಕ್ಕೆ ಬರುವುದು ಬೊಜ್ಜು, ಇನ್ನಿತರ ಕಾಯಿಲೆ ಬಂದಾಗ ಮಾತ್ರ.
ನಾವೆಲ್ಲರೂ ಆರೋಗ್ಯವಾಗಿರ ಬೇಕಾದರೆ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಅಗತ್ಯ. ಆದರೆ ಅದನ್ನು ಬಹಳಷ್ಟು ಮಂದಿ ಮಾಡುವುದೇ ಇಲ್ಲ. ಒಂದು ವೇಳೆ ಮಾಡುತ್ತೇನೆ ಎನ್ನುವುದು ಕಾಯಿಲೆ ಬಂದು ವೈದ್ಯರ ಬಳಿಗೆ ಹೋದಾಗ ಅವರು ಸಲಹೆ ನೀಡಿದಾಗ ಮಾತ್ರ. ನಾವು ನಮ್ಮ ಕೆಲಸಗಳನ್ನು ಮಾಡಿಕೊಂಡರೆ ಸಾಕು ನಮ್ಮ ದೇಹಕ್ಕೆ ಒಂದಷ್ಟು ವ್ಯಾಯಾಮ ಆಗಿ ಬಿಡುತ್ತದೆ.

ಇವತ್ತು ವಾಕಿಂಗ್ ಕಡಿಮೆಯಾಗಿದೆ. ಬಹಳಷ್ಟು ಮಂದಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ವಾಹನವನ್ನೇ ಬಳಸುತ್ತಾರೆ. ಇನ್ನು ತಾವು ಮಾಡುವ ಕೆಲಸವೂ ಅಷ್ಟೆ. ಕೈಕಾಲು, ದೇಹಕ್ಕೆ ಶ್ರಮವಿಲ್ಲದೆ ಕೇವಲ ಮೆದುಳಿಗಷ್ಟೆ ಕೆಲಸವನ್ನು ನೀಡುತ್ತಿರುವುದರಿಂದ ನಮಗರಿವಿಲ್ಲದಂತೆ ಮಾನಸಿಕ ಆಯಾಸ ಕಾಣಿಸಿಕೊಳ್ಳುತ್ತಿದೆ. ದೇಹ ಸದಾ ಶ್ರಮವನ್ನು ಬಯಸುತ್ತದೆ. ಅದು ಸಾಧ್ಯವಾಗದಿದ್ದಾಗ ನಮಗೆ ಗೊತ್ತಿಲ್ಲದಂತೆಯೇ ಕಾಯಿಲೆಗಳು ಅಂಟಿಕೊಳ್ಳುತ್ತವೆ.
ಮಧುಮೇಹ ನಿಯಂತ್ರಣಕ್ಕೆ ವಾಕಿಂಗ್
ನಮ್ಮನ್ನು ಕಾಡುವ ಕೆಲವು ಕಾಯಿಲೆಗಳಿಗೆ ಔಷಧಿ ನೀಡಿ ಮತ್ತೆ ಬಾರದಂತೆ ವಾಸಿ ಮಾಡಬಹುದು ಆದರೆ ಮಧುಮೇಹ ಹಾಗಲ್ಲ. ಅದು ಒಮ್ಮೆ ಬಂತೆಂದರೆ ಮತ್ತೆ ನಮ್ಮನ್ನು ಬಿಟ್ಟು ದೂರ ಸರಿಯುವುದೇ ಇಲ್ಲ. ಹೀಗಾಗಿ ಅದು ನಮ್ಮ ದೇಹದಲ್ಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದನ್ನು ನಿಯಂತ್ರಿಸಿಕೊಳ್ಳುವುದಷ್ಟೆ ನಮಗೆ ಇರುವ ಒಂದೇ ಒಂದು ಮಾರ್ಗವಾಗಿರುತ್ತದೆ.

ಮಧುಮೇಹ ಇರುವ ವ್ಯಕ್ತಿಗಳು ಔಷಧಿಯೊಂದಿಗೆ ಕೆಲವೊಂದು ಆಹಾರ ಕ್ರಮಗಳನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ವೈದ್ಯರು ಯಾವುದನ್ನು ತ್ಯಜಿಸ ಬೇಕೆಂದು ಹೇಳುತ್ತಾರೋ ಅದನ್ನು ತ್ಯಜಿಸುವುದು ಅನಿವಾರ್ಯ. ಅದರ ಜೊತೆಗೆ ವ್ಯಾಯಾಮ ಮಾಡುವುದು ಅಷ್ಟೇ ಅಗತ್ಯ. ಮುಂಜಾನೆ ಸವಿ ನಿದ್ದೆಯನ್ನು ತ್ಯಜಿಸಿ ಹೊರಗೆ ವಾಕಿಂಗ್ ಮಾಡುವುದು ಹೆಚ್ಚಿನವರಿಗೆ ಕಷ್ಟವಾಗಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಅದನ್ನು ಮಾಡಲೇ ಬೇಕಾಗಿದೆ.
ವೈದ್ಯರು ನೀಡುವ ಸಲಹೆಗಳೇನು?
ಮಧುಮೇಹ ಪೀಡಿತರು ವ್ಯಾಯಾಮ ಹೇಗೆ ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದು ಏನೆಂದರೆ? ಪ್ರತಿದಿನ ಕನಿಷ್ಠ ಮೂವತ್ತು ನಿಮಿಷಗಳಾದರೂ ವ್ಯಾಯಾಮ ಮಾಡಲೇ ಬೇಕಂತೆ. ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ದೈನಂದಿನ ಚಟುವಟಿಕೆಗಳಾದ ನಡಿಗೆ ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುವುದು ಒಳ್ಳೆಯದು.
ವಾರಕ್ಕೆ ಕನಿಷ್ಠ ಮೂರು ದಿನವಾದರೂ ಸುಮಾರು 30 ನಿಮಿಷಗಳ ನಡಿಗೆಯನ್ನು ಮಾಡಿ. ಇದಕ್ಕೊಂದು ಗುರಿಯಿರಲಿ. ಮನೆಯಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ವ್ಯಾಯಾಮ ಶಾಲೆಗೆ ಸೇರಿಕೊಳ್ಳುವುದು ಒಳ್ಳೆಯದು. ಅಲ್ಲಿ ತರಬೇತಿದಾರರು ಇರುವುದರಿಂದ ಅವರಿಂದ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಇನ್ನು ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವೊಂದು ಸಮಸ್ಯೆ, ರಗಳೆಗಳನ್ನು ಸಹಿಸಿಕೊಳ್ಳಲೇ ಬೇಕು. ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ಹೇಗಪ್ಪಾ ವ್ಯಾಯಾಮ, ವಾಕಿಂಗ್ ಮಾಡುವುದು ಎಂದು ಯೋಚಿಸುತ್ತಾ ಕೂರದೆ ಅದಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಒಳಿತು. ಆರೋಗ್ಯ ಇದ್ದರೆ ತಾನೆ ಇತರೆ ಎಲ್ಲವನ್ನು ಮಾಡಲು ಸಾಧ್ಯ ಎಂಬುವುದನ್ನು ಮರೆಯಬಾರದು.












Click it and Unblock the Notifications