Almond: ಬಾದಾಮಿ ಸೇವಿಸುವುದರಿಂದ ಏನೆಲ್ಲ ಪ್ರಯೋಜನವಿದೆ..?
ನಮ್ಮ ಆರೋಗ್ಯದ ಹಿಂದೆ ನಾವು ಸೇವಿಸುವ ಆಹಾರದ ಪಾತ್ರವಿರುವುದನ್ನು ತಳ್ಳಿಹಾಕಲಾಗದು. ನಮ್ಮ ದೇಹಕ್ಕೆ ಬೇಕಾದ ಪೋಷಕ ಶಕ್ತಿ, ಚರ್ಮಕ್ಕೆ ಬೇಕಾದ ಜೀವಸತ್ವ ಹೀಗೆ ಎಲ್ಲವನ್ನೂ ನಾವು ನಮ್ಮ ಸುತ್ತಮುತ್ತಲಿನ ಹಣ್ಣು, ತರಕಾರಿ, ಕಾಳು, ಸೊಪ್ಪು ಮುಂತಾದವುಗಳಿಂದ ಪಡೆಯಬೇಕಾಗಿದೆ. ಆದ್ದರಿಂದ ನಮ್ಮ ಆರೋಗ್ಯಕ್ಕೆ ಹೊಂದು ಪದಾರ್ಥಗಳನ್ನು ಸೇವಿಸಿ ಆ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ.
ಮನುಷ್ಯನನ್ನು ಸೃಷ್ಟಿ ಮಾಡಿದ ದೇವರು ಅವನ ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯ ಪೋಷಕಾಂಶಗಳನ್ನು ಪ್ರಕೃತಿ ಮೂಲಕ ನೀಡಿದ್ದಾನೆ. ನಾವು ದಿನ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳು ಒಂದಲ್ಲ ಒಂದು ಕಾರಣದಿಂದ ನಮ್ಮ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತಲೇ ಬಂದಿವೆ. ಆದರೆ ಯಾವುದನ್ನು ಸೇವಿಸಬೇಕು? ಹೇಗೆ ಸೇವಿಸಬೇಕು ಎನ್ನುವುದು ನಮ್ಮ ವಿವೇಚನೆಯಲ್ಲಿರಬೇಕಷ್ಟೆ.

ಆಹಾರ ತಜ್ಞರು ನಮ್ಮ ಸುತ್ತಮುತ್ತ ದೊರೆಯುವ ಹಣ್ಣು, ತರಕಾರಿ ಎಲ್ಲದರ ಬಗ್ಗೆ ಸಂಶೋಧಿಸಿ ಯಾವುದರಲ್ಲಿ ಏನೇನಿದೆ? ಯಾವುದಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಅದರಂತೆ ನಮ್ಮ ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿಯನ್ನು ಬೆಳೆಸುವಂತಹ ಪೋಷಕ ಶಕ್ತಿಯನ್ನು ಹೊಂದಿರುವ ಹಣ್ಣು, ತರಕಾರಿ, ಇನ್ನಿತರ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.
ಆರೋಗ್ಯ ಕಾಪಾಡುವ ಬಾದಾಮಿ
ಇತ್ತೀಚೆಗಿನ ದಿನಗಳಲ್ಲಿ ಒಣ ಹಣ್ಣುಗಳ ಸೇವನೆಯನ್ನು ಹೆಚ್ಚಿನವರು ಮಾಡುತ್ತಾರೆ. ವೈದ್ಯರು ಕೂಡ ಸಲಹೆಗಳನ್ನು ನೀಡುತ್ತಾರೆ. ಆದರೆ ಇವುಗಳು ದುಬಾರಿಯಾಗಿರುವುದರಿಂದ ಎಲ್ಲರಿಗೂ ಎಲ್ಲವನ್ನು ಸೇವಿಸುವುದು ಕಷ್ಟವಾಗಬಹುದು ಆದರೂ ಒಣ ಹಣ್ಣುಗಳನ್ನು ಸೇವಿಸುವ ಪ್ರಯತ್ನ ಮಾಡಿದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಾದರೆ ಏನನ್ನು ಸೇವಿಸಿದರೆ ಒಳ್ಳೆಯದು ಎಂಬ ಪ್ರಶ್ನೆಗೆ ಬಾದಾಮಿ ಎಂದು ಸಲಹೆ ನೀಡಬಹುದು.

ಬಾದಾಮಿಯನ್ನು ಕೊಂಡುಕೊಳ್ಳುವಾಗ ದುಬಾರಿಯಾಗಿ ಕಂಡರೂ ಬೆಲೆಗೆ ತಕ್ಕ ಪೌಷ್ಠಿಕಾಂಶಗಳನ್ನು ದೇಹಕ್ಕೆ ಒದಗಿಸಿ ಆರೋಗ್ಯವನ್ನು ಕಾಪಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾಯಿಗೆ ರುಚಿಯಾಗಿರುವ ಬಾದಾಮಿಯನ್ನು ಹಾಗೆಯೇ ಅಥವಾ ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು. ಇತರೆ ಖಾದ್ಯಗಳಲ್ಲಿ ಬಳಸಬಹುದು. ಹೆಚ್ಚಿನವರು ಬಾದಾಮಿ ತಿಂದರೆ ಒಳ್ಳೆಯದು ಎಂದು ಮಾತ್ರ ಗೊತ್ತು ಆದರೆ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ಆರೋಗ್ಯ ಎಂಬುವುದು ಗೊತ್ತಿಲ್ಲ.
ಬಾದಾಮಿಯಲ್ಲಿ ಏನೆಲ್ಲ ಪೋಷಕಾಂಶವಿದೆ?
ಬಾದಾಮಿ ಆರೋಗ್ಯಕ್ಕೆ ಏಕೆ ಒಳ್ಳೆಯದೆಂದರೆ ಅದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಹೇರಳವಾಗಿವೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇನ್ನು ಇದು ಓಮೆಗಾ 6 ಆಸಿಡ್ ಮಿಶ್ರಿತ ಕೊಬ್ಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಬಾದಾಮಿ ಎಣ್ಣೆಯನ್ನೂ ಬಳಸಬಹುದಾಗಿದೆ. ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಅತ್ಯುತ್ತಮ ಡಯಟ್ಗೂ ಸಹಕಾರಿ. ಇನ್ನು ಬಾದಾಮಿಯನ್ನು ಸೇವಿಸುವುದರಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸುಗಮವಾಗುತ್ತದೆ. ರೈಬೋಪ್ಲೇವಿನ್ ಮತ್ತು ಎಲ್-ಕಾರ್ನಿಟೈನ್ ಎಂಬ ಪೌಷ್ಠಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ.
ಅನಿಮಿಯಾ ಕಾಯಿಲೆಗೆ ರಾಮ ಬಾಣ
ಆಂಟಿ-ಆಕ್ಸಿಡಾಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯುಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುತ್ತದೆ. ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ.
ರಾತ್ರಿ ವೇಳೆ ಮೂರ್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು. ನಾವು ದಿನನಿತ್ಯ ಹಲವು ರೀತಿಯ ಆಹಾರ ಸೇವಿಸುತ್ತೇವೆ. ಇದರ ನಡುವೆ ದೇಹಕ್ಕೆ ಪೋಷಕಾಂಶ ಒದಗಿಸುವ ಬಾದಾಮಿಯನ್ನು ಬಳಸುವುದರಿಂದ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications