Ugadi Festival: ಯುಗಾದಿ ಹಬ್ಬಕ್ಕೆ ಮಾಡಿ ಈ ರುಚಿಕರವಾದ ಖಾದ್ಯಗಳು
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಯುಗಾದಿ ಹಬ್ಬ ಸಡಗರ ಜೋರಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯನ್ನು ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಜನತೆ ಹಬ್ಬದ ಸಡಗರಕ್ಕೆ ಸಜ್ಜಾಗುತ್ತಿದ್ದಾರೆ. ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತುರರಾಗಿದ್ದಾರೆ
ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತೇವೆ. ಯುಗಾದಿ ಹಬ್ಬದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು ಮನೆಯಲ್ಲಿ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸುವುದು ವಾಡಿಕೆಯಾಗಿದೆ. ಇನ್ನೂ ಯುಗಾದಿ ಹಬ್ಬದಂದು ವಿಭಿನ್ನ ಭಕ್ಷ್ಯಗಳನ್ನು ತಯಾರಿಸು ಮೂಲಕ ಮನೆಯ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಿ. ಹಾಗಾದ್ರೆ ಯುಗಾದಿ ಹಬ್ಬದಂದು ಈ ಅಡುಗೆಯನ್ನ ರುಚಿಕರವಾಗಿ ಮಾಡಿ.

ಬೇವು ಬೆಲ್ಲ
ಯುಗಾದಿ ಹಬ್ಬಕ್ಕೆ ಬೇವು ಬೆಲ್ಲ ತುಂಬಾನೇ ಮುಖ್ಯ. ಕರ್ನಾಟಕ ಶೈಲಿಯ ಬೇವು-ಬೆಲ್ಲ ತಯಾರಿಸಲು 1 ಚಮಚ ಬೇವಿನ ಹೂವುಗಳು, ನಾಲ್ಕು ಟೇಬಲ್ ಚಮಚ ಬೆಲ್ಲ, ನಾಲ್ಕು ಟೇಬಲ್ ಚಮಚ ತೆಂಗಿನ ತುರಿ, ಹಾಗೂ ಅರ್ಧ ಕಪ್ ಪುಟಾಣಿ ಕಡಲೆಯನ್ನ ತೆಗೆದುಕೊಳ್ಳಿ. ಮೊದಲು ಪುಟಾಣಿ ಕಡಲೆಯನ್ನ ಮಿಕ್ಸಿಯನ್ನ ಹಾಕಿ ಸಣ್ಣಗೆ ಪೌಡರ್ ಮಾಡಿಕೊಳ್ಳಿ, ನಂತರ ಬೆಲ್ಲ ಹಾಗೂ ಒಣ ತೆಂಗಿನ ಕಾಯಿಯನ್ನ ಮಿಕ್ಸಿ ಮಾಡಿಕೊಳ್ಳಿ. ನಂತರ ಬೇವಿನ ಹೂವನ್ನ ಮಿಕ್ಸ್ ಮಾಡಿದರೆ ಹೊಸ ವರ್ಷದ ಬೇವು ಬೆಲ್ಲ ರೆಡಿಯಾಗುತ್ತದೆ.
ಯುಗಾದಿ ಪಚಡಿ
ಯುಗಾದಿ ಪಚಡಿ ದಕ್ಷಿಣ ಭಾರತೀಯ ಪಾಕಪದ್ಧತಿಯ ಸಾಂಪ್ರದಾಯಿಕ ಖಾದ್ಯವಾಗಿದ್ದು, ಇದು 6 ವಿಭಿನ್ನ ರುಚಿಗಳ ಮಿಶ್ರಣದೊಂದಿಗೆ ಜೀವನದ ಸಾರವನ್ನು ತಿಳಿಸುತ್ತದೆ. ಸಿಹಿ, ಹುಳಿ, ಉಪ್ಪು, ಕಹಿ, ಕಟುವಾದ ಮತ್ತು ಖಾರವನ್ನ ಹೊಂದಿರುತ್ತದೆ. ಯುಗಾದಿ ಹಬ್ಬದ ಸಮಯದಲ್ಲಿ ತಯಾರಿಸಲಾಗುವ ಪಚಡಿಯಲ್ಲಿ ಬೆಲ್ಲ, ಹುಣಸೆಹಣ್ಣು, ಬೇವಿನ ಹೂವುಗಳು, ಕರಿಮೆಣಸು, ಮಾವಿನ ಕಾಯಿ ಮತ್ತು ಉಪ್ಪು ಸೇರಿಸಿ ತಯಾರಿಸಲಾಗುತ್ತದೆ.
ಮೊಸರನ್ನ
ದಕ್ಷಿಣ ಭಾರತದ ಭಾಗದಲ್ಲಿ ಮೊಸರನ್ನ ಪ್ರಮುಖ ಖಾದ್ಯವಾಗಿದೆ. ಮೊಸರನ್ನ ಆರೋಗ್ಯಕ್ಕೂ ತುಂಬಾ ಮುಖ್ಯವಾಗಿದ್ದು, ಬೇಸಿಗೆಯಲ್ಲಿ ವಿಪರೀತ ಬಿಸಿಲಿನಿಂದಾಗಿ, ಉಷ್ಣತೆಯ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಇನ್ನೂ ಮೊಸರನ್ನ ತಯಾರಿಸಲು ಮೊದಲಿಗೆ ಒಂದು ಬಟ್ಟಲಿನಲ್ಲಿ ಅನ್ನವನ್ನು ಮೊಸರಿನ ಜೊತೆ ಕಲಸಿಕೊಂಡು ಪಕ್ಕದಲ್ಲಿ ಇಟ್ಟುಕೊಂಡಿರಿ. ಒಂದು ತಳ ಆಳವಿರುವ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಆಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ ಉದ್ದಿನಬೇಳೆ, ಸಾಸಿವೆ ಹಾಗೂ ಕರಿಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ತಯಾರಾದ ಒಗ್ಗರಣೆಯನ್ನು ಮೊಸರು ಅನ್ನದ ಮಿಶ್ರಣದ ಮೇಲೆ ಸುರಿದು ರುಚಿಗೆ ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಮೊಸರನ್ನ ರೆಡಿಯಾಗುತ್ತದೆ.
ಹೋಳಿಗೆ
ವರ್ಷದ ಮೊದಲ ಹಬ್ಬ ಯುಗಾದಿ ವಿಶೇಷಕ್ಕೆ ಹೋಳಿಗೆ ಇರಲೇ ಬೇಕು. ರುಚಿಕರವಾದ ಹೋಳಿಗೆ ಮಾಡಲು ಮೊದಲಿಗೆ ಮೈದಾ ಹಿಟ್ಟು ಅಥವಾ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿ, ಚಿಟಿಕೆ ಉಪ್ಪು, ಅರಿಶಿಣ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ, ಸ್ವಲ್ಪವೇ ನೀರು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಬಳಿಕ ಹಿಟ್ಟು ಎಣ್ಣೆಯಲ್ಲಿ ಮುಳುಗಿಸುವಷ್ಟು ಎಣ್ಣೆಯನ್ನು ಹಾಕಿ. ಬಳಿಕ ಹಿಟ್ಟನ್ನು 2 ಗಂಟೆ ಮುಚ್ಚಿಟ್ಟು, ನೆನೆಯಲು ಬಿಡಿ. ನಂತರ ಪ್ರೆಶರ್ ಕುಕ್ಕರ್ ನಲ್ಲಿ ಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆಯನ್ನು ಹಾಕಿ. 2 ಕೂಗು ಕೂಗಿಸಿಕೊಳ್ಳಿ. ನಂತರ ಪ್ರೆಶರ್ ಕುಕ್ಕರ್ ತಣ್ಣದಾದ ಬಳಿಕ ಬೇಳೆಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು, ಮರಳಿ ಬೇಳೆಯನ್ನು ಒಲೆಯ ಮೇಲಿಟ್ಟು ಅದಕ್ಕೆ, 2 ಬಟ್ಟಲು ಬೆಲ್ಲ ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಕೊಬ್ಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಒರಳಿನಲ್ಲಿ ಹಾಕಿ ರುಬ್ಬಿಕೊಳ್ಳಿ ಅಥವಾ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಿ
ನಂತರ ಸಿದ್ಧಪಡಿಸಿಕೊಂಡಿದ್ದ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಕೈಯಿಂದ ಚಪ್ಪಟೆ ಮಾಡಿ, ಮಧ್ಯೆ ಬೇಳೆಯ ಊರಣವನ್ನು ಇಟ್ಟು ಎಲ್ಲಾ ಬದಿಗಳನ್ನೂ ಹಿಟ್ಟಿನಿಂದ ಮುಚ್ಚಿ. ಬಳಿಕ ಈ ಉಂಡೆಯನ್ನು ಚಪಾತಿಯಂತೆ ತಟ್ಟಿಕೊಳ್ಳಿ. ಒಲೆಯ ಮೇಲೆ ತವಾ ಇಟ್ಟು, ಕಾದ ನಂತರ ಒಬ್ಬಟ್ಟನ್ನು ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿಕೊಂಡರೆ, ರುಚಿಕರವಾದ ಹೋಳಿಗೆ ಸಿದ್ಧವಾಗಿರುತ್ತದೆ.
ಸಿಹಿ ಪೊಂಗಲ್
ತಮಿಳುನಾಡಿನಲ್ಲಿ ಸಕ್ಕರೆ ಪೊಂಗಲ್ ಅಥವಾ ಸಿಹಿ ಪೊಂಗಲ್ ವಿಶೇಷವಾದ ಖಾದ್ಯವಾದಿದೆ. ಸಿಹಿ ಪೊಂಗಲ್ ತಯಾರಿಸಲು ಅನ್ನ ಮತ್ತು ಹೆಸರು ಬೇಳೆಯನ್ನು ಬೆರೆಸಿ ಬೆಲ್ಲ ಮತ್ತು ತುಪ್ಪದ ಮಿಶ್ರಣದಲ್ಲಿ ಪರಿಪೂರ್ಣವಾಗಿ ಬೇಯಿಸಲಾಗುತ್ತದೆ. ಇದು ಕೃತಜ್ಞತೆ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ಇದನ್ನು ಹೆಚ್ಚಾಗಿ ಸುಗ್ಗಿಯ ಹಬ್ಬ ಪೊಂಗಲ್ ಸಮಯದಲ್ಲಿ ಸಮೃದ್ಧ ಫಸಲಿಗೆ ಕೃತಜ್ಞತೆ ಸಲ್ಲಿಸಲು ತಯಾರಿಸಲಾಗುತ್ತದೆ.
ಪಾನಕ
ದಕ್ಷಿಣ ಭಾರತದ ಒಂದು ಆರೋಗ್ಯಕರ ಪಾನೀಯವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಯುಗಾದಿ ಅಥವಾ ರಾಮ ನವಮಿಯಂತಹ ಹಬ್ಬಗಳ ಸಮಯದಲ್ಲಿ ತಯಾರಿಸಲಾಗುತ್ತದೆ. ಬೆಲ್ಲ, ನೀರು, ನಿಂಬೆ ರಸ ಮತ್ತು ಏಲಕ್ಕಿ ಮತ್ತು ಒಣ ಶುಂಠಿಯ ಸೇರಿಸಿ ತಯಾರಿಸಲಾಗುತ್ತದೆ. ಇದು ಬಿಸಿ ವಾತಾವರಣಕ್ಕೆ ಸೂಕ್ತವಾದ ನೈಸರ್ಗಿಕ ಪಾನಕವಾಗಿದೆ.












Click it and Unblock the Notifications