Ragi Ottu Shavige Recipe: ಸುಲಭ ಮತ್ತು ಆರೋಗ್ಯಕರ ರಾಗಿ ಒತ್ತು ಶಾವಿಗೆ ಮಾಡಿ ಸವಿಯಿರಿ
ಈ ವರ್ಷ ಬೇಸಿಗೆಯಲ್ಲಿ ದೇಹಕ್ಕೆ ಎಷ್ಟು ತಂಪಿನ ಆಹಾರಗಳನ್ನು ತೆಗೆದುಕೊಂಡರೂ ಕೂಡ ಕಡಿಮೆಯೇ. ಸಾಧ್ಯವಾದಷ್ಟು ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಬೇಕಿರುವುದು ನಮ್ಮ ಮೊದಲ ಕರ್ತವ್ಯ. ವೈದ್ಯರು ಮತ್ತು ತಜ್ಞರು ಕೂಡ ಇದೇ ಸಲಹೆಗಳನ್ನು ನೀಡುತ್ತಾರೆ.
ದೇಹಕ್ಕೆ ಆರೋಗ್ಯ ಮತ್ತು ತಂಪು ನೀಡುವ ಆಹಾರಗಳಲ್ಲಿ ಮೊದಲ ಸ್ಥಾನದಲ್ಲಿದೆ ರಾಗಿ. ರಾಗಿಯನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಮುದ್ದೆ, ದೋಸೆ, ಸಿಹಿ ಉಂಡೆ, ಇಡ್ಲಿ, ಹಾಲು, ಗಂಜಿ ಹೀಗೆ ಹಲವು ರೀತಿಯಲ್ಲಿ ರಾಗಿಯನ್ನು ಬಳಸಲಾಗುತ್ತಿದೆ. ಇದೇ ವೇಳೆ ರಾಗಿ ಶಾವಿಗೆ ಕೂಡ ಒಂದು. ಮಾಮೂಲಿ ಶಾವಿಗೆ ಮತ್ತು ರಾಗಿ ಒತ್ತು ಶಾವಿಗೆ ಎರಡು ಕೂಡ ಮಾಡಬಹುದು.

ರಾಗಿ ಶಾವಿಗೆಯನ್ನು ಸಿಹಿ ಅಥವಾ ಖಾರದ ಜೊತೆಗೆ ಮಾಡಬಹುದು. ಇದನ್ನು ಎರಡು ರೀತಿಯಲ್ಲಿಯೂ ಕೂಡ ತಿನ್ನಬಹುದು. ರಾಗಿ ಶಾವಿಗೆಯನ್ನು ರಾಗಿ ಹಿಟ್ಟು, ಉಪ್ಪು, ಸ್ವಲ್ಪ ಎಣ್ಣೆ ಮತ್ತು ನೀರನ್ನು ಬಳಸಿ ತಯಾರಿಸಲಾಗುತ್ತದೆ. ಇದು ಅತ್ಯಂತ ಟೇಸ್ಟಿ ಮತ್ತು ಹೆಲ್ತಿ ಕುಡ ಹೌದು.ಸಿಹಿ ಶಾವಿಗೆಗೆ ಉಪ್ಪನ್ನು ಅತಿ ಕಡಿಮೆ ಬಳಸಲಾಗುತ್ತದೆ. ಕೇವಲ ಅರ್ಧ ಗಂಟೆಯಲ್ಲಿ ಈ ತಿಂಡಿ ತಯಾರಾಗುತ್ತದೆ.
ರಾಗಿ ಒತ್ತು ಶಾವಿಗೆ ಮಾಡಲು ಬೇಕಾದ ಪದಾರ್ಥಗಳು
* ಒಂದು ಕಪ್ ರಾಗಿ ಹಿಟ್ಟು
* ಒಂದೂವರೆ ಲೋಟ ನೀರು
* ಒಂದು ಟೀಸ್ಪೂನ್ ಅಡುಗೆ ಎಣ್ಣೆ
* ರುಚಿಗೆ ತಕ್ಕಂತೆ ಉಪ್ಪು
* ಸಿಹಿ ಒತ್ತು ಶಾವಿಗೆ ಬೇಕ್ಕಿದ್ದವರು ಉಪ್ಪು ಬಿಡಬಹುದು.
ರಾಗಿ ಒತ್ತು ಶಾವಿಗೆ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ತೆಗೆದುಕೊಂಡು ನೀರು ಹಾಕುತ್ತಾ ಗಂಟುಗಳಿಲ್ಲದೇ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಸ್ಟೌವ್ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸುರಿಯಿರಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ. ಜೊತೆಗೆ ಒಂದು ಚಮಚ ಎಣ್ಣೆ ಕೂಡ ಬೆರೆಸಿ. ಮಧ್ಯಮ ಉರಿಯಲ್ಲಿ ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

ಗಂಟುಗಳಾಗದಂತೆ ಕಲಕುತ್ತಾ ಇರು. ಇದು ಮೃದುವಾದ ಮುದ್ದೆಯಾದ ಬಳಿಕ ಸ್ಟವ್ ಆಫ್ ಮಾಡಿ. ಹಿಟ್ಟು ಸ್ವಲ್ಪ ಬಿಸಿ ಇರುವಾಗಲೇ ಕೈಗಳಿಗೆ ಎಣ್ಣೆಯನ್ನು ಹಚ್ಚಿಕೊಂಡು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಬಳಿಕ ಅದನ್ನು ಚಕ್ಕುಲಿ ಮಾಡುವ ರೀತಿಯಲ್ಲಿ ಉದ್ದನೆಯ ಶೇಪ್‌ನಲ್ಲಿ ಇಟ್ಟುಕೊಳ್ಳಿ. ಅದನ್ನು ಶಾವಿಗೆ ಮಣೆ ಅಥವಾ ಶಾವಿಗೆ ಮಾಡುವ ಮೌಲ್ಡ್‌ಗೆ ಹಾಕಿ ಒತ್ತಿಕೊಳ್ಳಿ. ಇದನ್ನು ಇಡ್ಲಿ ಪಾತ್ರೆ ಅಥವಾ ಸ್ಟೀಮ್‌ನಲ್ಲಿ ಹತ್ತು ನಿಮಿಷ ಬೇಯಿಸಿಕೊಳ್ಳಿ. ಈಗ ಬಿಸಿ ಬಿಸಿಯಾದ ಒತ್ತು ಶಾವಿಗೆ ತಯಾರಾಗುತ್ತದೆ.
ಈ ಶಾವಿಗೆಯನ್ನು ಖಾರ ಬೇಕಿದ್ದವರು ಗ್ರೇವಿಯೊಂದಿಗೆ ಅಥವಾ ಚಟ್ನಿಯೊಂದಿಗೆ ಸವಿಯಬಹುದು. ಸಿಹಿ ಬೇಕಾದವರು ಉಪ್ಪು ಕಡಿಮೆ ಮಾಡಿ ಮಾಡಿಕೊಳ್ಳಬಹುದು. ಕಾಯಿ ಹಾಲಿನ ಜೊತೆಗೆ ತಿಂದರೆ ಇದು ತುಂಬಾ ಚೆನ್ನಾಗಿರುತ್ತದೆ. ಮಕ್ಕಳು ಕೂಡ ಹೆಚ್ಚು ಇಷ್ಟಪಟ್ಟು ಈ ರಾಗಿ ಒತ್ತು ಶಾವಿಗೆಯನ್ನು ತಿನ್ನುತ್ತಾರೆ.












Click it and Unblock the Notifications