Yugadi Recipe: ಯುಗಾದಿ ಹಬ್ಬದ ಸವಿ ಹೆಚ್ಚಿಸಲು ಈ ತಿಂಡಿಗಳನ್ನ ಮಾಡಿ..
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಯುಗಾದಿ ಎಂದರೆ ಹೊಸ ಯುಗದ ಆರಂಭ, ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯನ್ನು ಹಿಂದೂಗಳು ಹೊಸವರ್ಷವೆಂದು ಕರೆಯುತ್ತಾರೆ. ಯುಗಾದಿ ಹೊಸತಕ್ಕೆ ಹಾದಿ ಹಾಗೂ ಸಂಭ್ರಮವನ್ನು ಹೆಚ್ಚಿಸುವ ಕೆಲಸ ಸಾಂಪ್ರದಾಯಿಕ ತಿಂಡಿ ತಿನಿಸುಗಳು. ಹೊಸ ವರ್ಷಕ್ಕೆ ಬೇವು-ಬೆಲ್ಲವನ್ನು ಮಾಡಲಾಗುತ್ತದೆ. ಯುಗಾದಿಯನ್ನು ಆಚರಿಸಲು ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮತ್ತೆ ಪಾಕವಿಧಾನಗಳು ಅಥವಾ ಪಾಕಪದ್ಧತಿಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ.
ಯುಗಾದಿಯ ಸಂಭ್ರಮವನ್ನು ಸವಿಯಲು ಜನರು ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ದೇವಾಲಯಗಳನ್ನು ತಾಜಾ ಹೂವುಗಳು ಮತ್ತು ತಾಜಾ ಮಾವಿನ ಎಲೆಗಳಿಂದ ಅಲಂಕರಿಸುವ ಮೂಲಕ ಯುಗಾದಿಯನ್ನು ಆಚರಿಸಲಾಗುತ್ತದೆ. ಇನ್ನೂ ಯುಗಾದಿಯಂದು ತಮ್ಮ ತಮ್ಮ ಮನೆಗಳಲ್ಲಿ ಜನರು ತಮ್ಮ ಮನೆ ಮತ್ತು ಪೂಜಾ ಕೋಣೆಗಳನ್ನು ಹೂವುಗಳು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಇನ್ನು, ಹಬ್ಬದ ಸಂಭ್ರಮವನ್ನ ಹೆಚ್ಚಿಸಲು ಮಾಡಬೇಕಾದ ತಿಂಡಿ ತಿನಿಸುಗಳ ಪಟ್ಟಿ ಇಲ್ಲಿದೆ ನೋಡಿ.

ಯುಗಾದಿ ವಿಶೇಷ: ಹೋಳಿಗೆ
ಯಾವುದೇ ಹಬ್ಬಗಳಿರಲಿ ಮನೆಯಲ್ಲಿ ಹೋಳಿಗೆ ಮಾಡಿದ್ರೆನೇ ಚಂದ. ವರ್ಷದ ಮೊದಲ ಹಬ್ಬ ಯುಗಾದಿ ವಿಶೇಷಕ್ಕೆ ಹೋಳಿಗೆ ಇರಲೇ ಬೇಕು. ಮೊದಲಿಗೆ ಮೈದಾ ಹಿಟ್ಟು ಅಥವಾ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿ, ಚಿಟಿಕೆ ಉಪ್ಪು, ಅರಿಶಿಣ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ, ಸ್ವಲ್ಪವೇ ನೀರು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ಜಿಗುಟಾಗಿರುವುದನ್ನ ಖಚಿತಪಡಿಸಿಕೊಳ್ಳಿ. ಬಳಿಕ ಹಿಟ್ಟು ಎಣ್ಣೆಯಲ್ಲಿ ಮುಳುಗಿಸುವಷ್ಟು ಎಣ್ಣೆಯನ್ನು ಹಾಕಿ. ಬಳಿಕ ಹಿಟ್ಟನ್ನು 2 ಗಂಟೆ ಮುಚ್ಚಿಟ್ಟು, ನೆನೆಯಲು ಬಿಡಿ.
ನಂತರ ಪ್ರೆಶರ್ ಕುಕ್ಕರ್ ನಲ್ಲಿ ಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆಯನ್ನು ಹಾಕಿ. 2 ಕೂಗು ಕೂಗಿಸಿಕೊಳ್ಳಿ. ನಂತರ ಪ್ರೆಶರ್ ಕುಕ್ಕರ್ ತಣ್ಣದಾದ ಬಳಿಕ ನೀರನ್ನು ಬಸಿದುಕೊಳ್ಳಿ. ಬಳಿಕ ಬೇಳೆಯನ್ನು ದೊಡ್ಡ ಪಾತ್ರೆಗೆ ವರ್ಗಾಯಿಸಿಕೊಂಡು, ಮರಳಿ ಬೇಳೆಯನ್ನು ಒಲೆಯ ಮೇಲಿಟ್ಟು ಅದಕ್ಕೆ, 2 ಬಟ್ಟಲು ಬೆಲ್ಲ ಸೇರಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ದಪ್ಪಗಾಗುವವರೆ, ತಳ ಹತ್ತದಂತೆ ಕೈಯಾಡಿಸುತ್ತಾ ನೋಡಿಕೊಳ್ಳಿ.
ಮಿಶ್ರಣ ಗಟ್ಟಿಯಾದ ಬಳಿಕ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಕೊಬ್ಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಒರಳಿನಲ್ಲಿ ಹಾಕಿ ರುಬ್ಬಿಕೊಳ್ಳಿ ಅಥವಾ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಿ
ನಂತರ ಸಿದ್ಧಪಡಿಸಿಕೊಂಡಿದ್ದ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಕೈಯಿಂದ ಚಪ್ಪಟೆ ಮಾಡಿ, ಮಧ್ಯೆ ಬೇಳೆಯ ಊರಣವನ್ನು ಇಟ್ಟು ಎಲ್ಲಾ ಬದಿಗಳನ್ನೂ ಹಿಟ್ಟಿನಿಂದ ಮುಚ್ಚಿ. ಬಳಿಕ ಈ ಉಂಡೆಯನ್ನು ಚಪಾತಿಯಂತೆ ತಟ್ಟಿಕೊಳ್ಳಿ. ಒಲೆಯ ಮೇಲೆ ತವಾ ಇಟ್ಟು, ಕಾದ ನಂತರ ಒಬ್ಬಟ್ಟನ್ನು ತವಾ ಮೇಲೆ ಹಾಕಿ, ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಬೇಯಿಸಿಕೊಂಡರೆ, ರುಚಿಕರವಾದ ಬೇಳೆ ಹೋಳಿಗೆ ಸವಿಯಲು ಸಿದ್ಧವಾಗಿರುತ್ತದೆ.
ಮಾವಿನಕಾಯಿ ಚಿತ್ರಾನ್ನ- ಚಟ್ನಿ
ಯುಗಾದಿ ಹಬ್ಬ ಬಂತು ಅಂದ್ರೆ ಮನೆಯಲ್ಲಿ ಮಾವಿನಕಾಯಿ ಚಿತ್ರಾನ್ನ ಹಾಗೂ ಚಟ್ನಿ ಮಾಡ್ಲೇ ಬೇಕು ಅಲ್ವಾ? ಮಾವಿನಕಾಯಿ ಚಿತ್ರಾನ್ನ ತುಂಬಾ ಟೇಸ್ಟಿ ಮತ್ತು ಆರೋಗ್ಯಕರ ಊಟದ ವಿಧಾನವಾಗಿದೆ. ಈ ಮಾವಿನಕಾಯಿ ಚಿತ್ರಾನ್ನ ತಯಾರಿಸುವುದು ತುಂಬಾ ಸುಲಭ. ಚಿತ್ರಾನ್ನ ಮಾಡುವ ವಿಧಾನದಲ್ಲಿ ಮಾವಿನಕಾಯಿ ಚಿತ್ರಾನ್ನವನ್ನ ಮಾಡಬೇಕು. ಚಿತ್ರಾನ್ನಕ್ಕೆ ಮಾವಿನಕಾಯಿ ಸಣ್ಣ ಕಟ್ ಮಾಡಿ ಹಾಕಿದರೇ ಮಾವಿನ ಕಾಯಿ ಚಿತ್ರಾನ್ನ ರೆಡಿಯಾಗುತ್ತದೆ. ಈ ಮಾವಿನಕಾಯಿ ಚಟ್ನಿ ಮಾಡುವುದು ಸಹ ತುಂಬಾ ಸುಲಭ. ಹಸಿ ಮಾವಿನಕಾಯಿ ಚಟ್ನಿಯನ್ನು ಹಸಿ ಮಾವಿನಕಾಯಿ, ತೆಂಗಿನಕಾಯಿ, ಹುರಿದ ಕೆಂಪು ಮೆಣಸಿನಕಾಯಿ ಮತ್ತು ಹುರಿದ ಉದ್ದಿನಬೇಳೆ ಬಳಸಿ ತಯಾರಿಸಲಾಗುತ್ತದೆ. ಹಸಿ ಮಾವು, ತೆಂಗಿನಕಾಯಿ ಮತ್ತು ಹಸಿರು ಮೆಣಸಿನಕಾಯಿಯನ್ನು ರುಬ್ಬುವ ಮೂಲಕ ಮಾವಿನಕಾಯಿ ಚಟ್ನಿಯನ್ನು ತಯಾರಿಸಬಹುದು.
ಹಾಲು ಹೋಳಿಗೆ
ಯುಗಾದಿ ಅಂದ್ರೆನೇ ವಿಶೇಷ. ವಿಧವಿಧವಾದ ತಿಂಡಿ ತಿನಿಸುಗಳು ಇರಲೇ ಬೇಕು. ಬೆಳೆ ಹೋಳಿಗೆಯ ಜೊತೆಗೆ ಹಾಲ್ ಒಬ್ಬಟ್ಟನ್ನ ಮೈದಾ, ಗಸಗಸೆ, ಗೋಡಂಬಿ, ಬಾದಾಮಿ, ತೆಂಗಿನಕಾಯಿ, ಹಾಲು ಮತ್ತು ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ. ಹಾಲು ಹೋಳಿಗೆಯನ್ನು ತಯಾರಿಸಲು ಗರಿಗರಿಯಾದ ಪೂರಿಗಳನ್ನು ಗಸಗಸೆ ಬೀಜಗಳಲ್ಲಿ ನೆನೆಸಲಾಗುತ್ತದೆ. ಈ ಹಾಲು ಹೋಳಿಗೆ ಅಥವಾ ಹಾಲ್ ಒಬ್ಬಟ್ಟು ಕರ್ನಾಟಕದ ಸಾಂಪ್ರದಾಯಿಕ ಸಿಹಿ ಪಾಕವಿಧಾನವಾಗಿದೆ.












Click it and Unblock the Notifications