ಪ್ರವಾಸ ಮಾಡುವಾಗ ವಾಂತಿ, ವಾಕರಿಕೆ ತಪ್ಪಿಸಲು ಸಿಂಪಲ್ ಟಿಪ್ಸ್!
ಪ್ರವಾಸ ಮಾಡಬೇಕು ಅಂತ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಆದರೆ ಪ್ರಯಾಣ ಮಾಡುವ ಸಮಯದಲ್ಲೇ ಕೆಲವರಿಗೆ ವಾಂತಿ ಬರುವುದು, ವಾಕರಿಕೆ ಹಾಗೂ ತಲೆಸುತ್ತಿದ ಅನುಭವ ಆಗುತ್ತಿರುತ್ತದೆ. ಬಸ್ ಹಾಗೂ ಕಾರುಗಳಲ್ಲಿ ಪ್ರವಾಸ ಮಾಡುವಾಗ ಹಲವರು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಇದೆ. ಈ ರೀತಿಯ ಸಮಸ್ಯೆ ಪ್ರವಾಸದ ಸುಂದರ ಅನುಭವವನ್ನೇ ಕಿತ್ತುಕೊಳ್ಳುತ್ತದೆ. ಈ ರೀತಿ ಆರೋಗ್ಯ ಸಮಸ್ಯೆ ಇರುವವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವವರಿಗೂ ಇದು ತುಸು ಕಷ್ಟದ ಕೆಲಸವೇ. ಕೆಲವು ಸರಳ ಮನೆ ಮದ್ದುಗಳನ್ನು ಬಳಸುವುದರ ಮೂಲಕ ನೀವು ಈ ಕಿರಿಕಿರಿಗಳನ್ನು ತಪ್ಪಿಸುವುದಕ್ಕೆ ಅವಕಾಶ ಇದೆ. ಅದೇನು ಎನ್ನುವ ವಿವರ ನೋಡೋಣ..
ಪ್ರವಾಸ ಮಾಡುವಾಗ ಇಲ್ಲವೇ ವಾಹನದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಸಂದರ್ಭಗಳಲ್ಲಿ ಕೆಲವರಿಗೆ ವಾಂತಿ ಬರುವುದು, ತಲೆ ಸುತ್ತುವುದು ಹಾಗೂ ವಾಕರಿಕೆಯ ಅನುಭವ ಆಗುತ್ತದೆ. ಈ ರೀತಿ ಪದೇ ಪದೇ ಆಗುವುದರಿಂದ ನಿಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ನಿರ್ಜಲೀಕರಣ (ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದು) ಆಗುತ್ತದೆ. ಪ್ರವಾಸ ಮಾಡಿ ಒಳ್ಳೆ ಎಂಜಾಯ್ ಮಾಡಬೇಕು ಎನ್ನುವ ಮೂಡ್‌ನಲ್ಲಿ ಇರುವವರಿಗೆ ಇದು ಮತ್ತೊಂದು ತಲೆನೋವು ತರುತ್ತದೆ. ಹಾಗಂತ ಇದಕ್ಕೆ ತುಂಬಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಸಿಂಪಲ್ ಮನೆ ಮದ್ದು ಬಳಸುವ ಮೂಲಕ ಇದಕ್ಕೆಲ್ಲ ಬ್ರೇಕ್ ಹಾಕುವುದಕ್ಕೆ ಸಾಧ್ಯವಿದೆ.

ಪ್ರವಾಸ ಮಾಡುವಾಗ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತೆ. ಇನ್ನು ಕೆಲವರಿಗೆ ಸಣ್ಣ ವಯಸ್ಸಿನಲ್ಲಿ ಮಾತ್ರ ಇದ್ದರೆ ಇನ್ನೂ ಕೆಲವರಿಗೆ ದೊಡ್ಡವರಾದ ಮೇಲೂ ಈ ಸಮಸ್ಯೆ ಇರುತ್ತದೆ. ಕಾರ್, ಬಸ್‌ಗಳಲ್ಲೇ ಕೆಲವರು ವಾಂತಿ ಮಾಡಿಕೊಳ್ಳುವುದು ಇದೆ. ಇದು ಉಳಿದ ಪ್ರಯಾಣಿಕರಿಗೂ, ವಾಂತಿ ಮಾಡಿಕೊಂಡವರಿಗೂ ಇರಿಸು ಮುರಿಸು ಆಗುವುದು ಇದೆ. ಈ ವಸ್ತುಗಳನ್ನು ಬಳಸಿದರೆ ನೀವು ಸುಖಕರ ಪ್ರವಾಸದ ಅನುಭವವನ್ನು ಪಡೆಯಬಹುದು.
ನಿಂಬೆ ಹಣ್ಣು: ನಿಂಬೆ ಹಣ್ಣು ಪ್ರವಾಸದ ಸಮಯದಲ್ಲಿ ಈ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುವುದಕ್ಕೆ ಸಹಕಾರಿಯಾಗಿದೆ. ಇದರಲ್ಲಿನ ವಿಟಮಿನ್ ಸಿ ಅಂಶವು ಪ್ರವಾಸ ಮಾಡುವಾಗ ವಾಕರಿಕೆ ಹಾಗೂ ವಾಂತಿ ಆಗುವುದನ್ನು ತಪ್ಪಿಸುತ್ತದೆ. ವಾಕರಿಕೆ ತಪ್ಪಿಸುವುದಕ್ಕೆ ನೀವು ಪ್ರವಾಸ ಮಾಡುವ ಅರ್ಧಗಂಟೆಯ ಮುಂಚೆ ನಿಂಬೆ ಹಣ್ಣಿನ ಜ್ಯೂಸ್ ಅಥವಾ ನೀರಿನೊಂದಿಗೆ ಬೆರೆಸಿದ ನಿಂಬೆರಸವನ್ನು ಕುಡಿಯಿರಿ.
ಲವಂಗ: ಲವಂಗ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರವಾಸ ಮಾಡುವಾಗ ವಾಂತಿ ಅಥವಾ ವಾಕರಿಕೆ ಬರುವಂತೆ ಅನಿಸಿದರೆ ನೀವು ಹಸಿ ಲವಂಗವನ್ನು ಜಿಗಿಯಬಹುದು. ಲವಂಗ ಸೇವನೆಯಿಂದ ಪ್ರಯಾಣದ ಸಮಯದಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.
ಪುದೀನ ಹಾಗೂ ಜೀರಿಗೆ: ತಾಜಾ ಪುದೀನ ಎಲೆ ಹಾಗೂ ಜೀರಿಗೆ ಸಹ ಈ ಸಮಸ್ಯೆಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಜೀರಿಗೆಯ ಪುಡಿಯನ್ನು ನೀರಿನೊಂದಿಗೆ ಸೇರಿಸಿ, ಕುದಿಸಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ ಮಾತ್ರವಲ್ಲ ಪ್ರವಾಸ ಮಾಡುವಾಗ ಆಗುವ ಆರೋಗ್ಯ ಸಮಸ್ಯೆ ತಪ್ಪಿಸುವುದಕ್ಕೂ ಸಹಕಾರಿಯಾಗಿದೆ.












Click it and Unblock the Notifications