Papaya Benefits:ಖಾಲಿ ಹೊಟ್ಟೆಗೆ ತಿಂದರೆ ಪಪ್ಪಾಯ ಜೀವಕ್ಕಿಲ್ಲ ಅಪಾಯ... ತ್ವಚೆಯ ಅಂದಕ್ಕೆ, ಹೃದಯದ ಆಯೋಗ್ಯಕ್ಕೆ ಈ ಹಣ್ಣು ಯಾಕೆ?
ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಹೆಚ್ಚುವರಿ ಪೋಷಕಾಂಶಗಳನ್ನು ಒದಗಿಸುತ್ತದೆ. ಹೀಗಾಗಿ ನಿತ್ಯ ನಾವು ಸೇವಿಸುವ ಆಹಾರದ ಜೊತೆಗೆ ಹಣ್ಣುಗಳ ಸೇವನೆಯೂ ತುಂಬಾ ಮುಖ್ಯ. ನಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಹಣ್ಣುಗಳು ಬಹಳಷ್ಟು ಸಹಾಯ ಮಾಡುತ್ತವೆ. ಹಣ್ಣುಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಪ್ರತಿಯೊಂದೂ ವಿಭಿನ್ನ ರೀತಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ವರ್ಷವಿಡೀ ಕಡಿಮೆ ಬೆಲೆಗೆ ಸಿಗುವ ಹಣ್ಣು.
ಈ ಪಪ್ಪಾಯಗಳು ಕಣ್ಣಿಗೆ ಕಟ್ಟುವ ಬಣ್ಣ ಮತ್ತು ಸಿಹಿ ರುಚಿಯೊಂದಿಗೆ ವಿಶಿಷ್ಟವಾದ ಪರಿಮಳವನ್ನು ಹೊಂದಿರುತ್ತವೆ. ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳು ಸಮೃದ್ಧವಾಗಿವೆ. ಮುಖ್ಯವಾಗಿ ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇದೆ. ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಗೆ ಈ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ಹಾಗಾದರೀಗ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

ತೂಕ ನಷ್ಟ
ದೇಹದ ಹೆಚ್ಚುವರಿ ತೂಕ ಬಹುತೇಕರಿಗೆ ಕಾಡುವ ದೊಡ್ಡ ಸಮಸ್ಯೆ. ಇದನ್ನು ಕಡಿಮೆ ಮಾಡಿಕೊಳ್ಳಲು ಜನ ಸಾಕಷ್ಟು ಪ್ರಯತ್ನ ಪಡುತ್ತಾರೆ. ನೀವು ಕೂಡ ಇದೇ ಪ್ರಯತ್ನದಲ್ಲಿ ಇದ್ದರೆ ಇದಕ್ಕೆ ಪರಿಹಾರ ಇಲ್ಲಿದೆ. ನಿಮ್ಮ ದೈನಂದಿನ ಆಹಾರದ ಜೊತೆಗೆ ಪಪ್ಪಾಯವನ್ನು ಸೇರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೌಲ್ ಪಪ್ಪಾಯಿಯನ್ನು ತಿಂದರೆ, ಅದರ ಕಡಿಮೆ ಕ್ಯಾಲೋರಿ ಅಂಶ ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ಅದು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ದೀರ್ಘಕಾಲ ಹಸಿವಿನಿಂದ ನಿಮ್ಮನ್ನು ತಡೆಯುತ್ತದೆ. ಹೀಗೆ ಅದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಒಳ್ಳೆಯದು
ನಾವು ಎಷ್ಟೇ ಆರೋಗ್ಯಕರ ಆಹಾರ ಸೇವನೆ ಮಾಡಿದರೂ ಕೆಲವೊಮ್ಮೆ ಹೃದಯವನ್ನು ಕಾಪಾಡುವ ಪೋಷಕಾಂಶಗಳು ಸಿಗುವುದಿಲ್ಲ. ಆದರೆ ಪಪ್ಪಾಯಿಯಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಇವು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ. ಈ ಪೋಷಕಾಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಪರಿಚಲನೆ ಸುಧಾರಿಸುತ್ತವೆ. ಪರಿಣಾಮವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ. ಮುಖ್ಯವಾಗಿ ಪಪ್ಪಾಯಿಯಲ್ಲಿ ಸಕ್ಕರೆ ಕಡಿಮೆ ಮತ್ತು ನಾರಿನಂಶ ಹೆಚ್ಚಿರುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮ
ಪ್ರತಿಯೊಬ್ಬರು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆಯ ಹೊಳಪಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದ್ದರಿಂದ ಪ್ರತಿದಿನ ಪಪ್ಪಾಯವನ್ನು ಸೇವಿಸಿ. ಏಕೆಂದರೆ ಪಪ್ಪಾಯದಲ್ಲಿರುವ ಶಕ್ತಿಯುತವಾದ ರೋಗ ನಿರೋಧಕಗಳು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅಲ್ಲದೆ ಚರ್ಮದ ಸುಕ್ಕುಗಳನ್ನು ತಡೆಗಟ್ಟಿ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಮಲಬದ್ಧತೆ ನಿವಾರಣೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನುವ ಪ್ರಮುಖ ಪ್ರಯೋಜನವೆಂದರೆ ಕರುಳಿನ ಚಲನೆಯು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿದೆ. ಹೀಗಾಗಿ ನೀವು ಮಲಬದ್ಧತೆಯಿಂದ ತುಂಬಾ ಬಳಲುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯವನ್ನು ಸೇವಿಸಿ.
ಕ್ಯಾನ್ಸರ್ ತಡೆಗಟ್ಟುವಿಕೆ
ಪಪ್ಪಾಯಯು ಲೈಕೋಪೀನ್ ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಹಿಳೆಯರ ಆರೋಗ್ಯವನ್ನು ಸುಧಾರಿಸಲು ಪಪ್ಪಾಯ ತುಂಬಾ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಕ್ಯಾರೋಟಿನ್ ಗರ್ಭಾಶಯದ ಆರೋಗ್ಯವನ್ನು ಸುಧಾರಿಸುತ್ತದೆ. ಋತುಚಕ್ರವನ್ನು ನಿಯಂತ್ರಿಸುತ್ತದೆ ಮತ್ತು ಮುಟ್ಟಿನ ಸೆಳೆತವನ್ನು ಕಡಿಮೆ ಮಾಡುತ್ತದೆ.
(ಗಮನಿಸಬೇಕಾದ ಮಾಹಿತಿ: ಪಪ್ಪಾಯ ಆರೋಗ್ಯಕ್ಕೆ ಒಳ್ಳೆಯದೇ ಆಗಿದ್ದರೂ ಕೆಲ ಬಾರಿ ಕೆಲವರಿಗೆ ಸಮಸ್ಯೆಯಾಗಬಹುದು. ಹೀಗಾಗಿ ಇದನ್ನು ಹೆಚ್ಚುವರಿಯಾಗಿ ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಅಲ್ಲದೆ ಯಾವುದೇ ಗಂಭೀರ ಕಾಯಿಲೆ ಇರುವವರು, ಗರ್ಭಿಣಿಯರು, ಪುಟ್ಟ ಮಕ್ಕಳು ಇದನ್ನು ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು)












Click it and Unblock the Notifications