New Year 2025: ಹೊಸವರ್ಷಕ್ಕೆ ಸಿಗರೇಟ್ ಬಿಟ್ಟು ಬಿಡುವ ಸಂಕಲ್ಪ ಮಾಡಿ
ಹೊಸವರ್ಷದ ಆಚರಣೆ ಜೊತೆಗೆ ಏನಾದರೊಂದು ಒಳ್ಳೆಯ ಸಂಕಲ್ಪ ಮಾಡುತ್ತೇನೆ ಎಂದು ಹೇಳು ಧೂಮಪಾನಿಗಳು ಮೊದಲಿಗೆ ಸಿಗರೇಟ್ ಸೇದೋದನ್ನು ಬಿಟ್ಟು ಬಿಡುವ ಸಂಕಲ್ಪ ಮಾಡಿಬಿಡಿ. ಏಕೆ ಗೊತ್ತಾ? ಇದೊಂದನ್ನು ಮಾಡಿದರೆ ಬರಲಿರುವ ಹೊಸ ವರ್ಷ ನಿಮಗೆ ಆಶಾದಾಯಕವಾಗಿರಲಿದೆ. ಏಕೆಂದರೆ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ. ಹೊಸ ವರ್ಷದಲ್ಲಿ ಹೊಸತಾಗಿ ಏನಾದರೂ ಮಾಡಬೇಕೆನ್ನುವ ಮುನ್ನ ಇದನ್ನು ಮಾಡಿ ಬಿಡಿ.
ನಾವೆಲ್ಲರೂ ಆರೋಗ್ಯವಂತರಾಗಿರಬೇಕೆಂದು ಬಯಸುತ್ತೇವೆ ಮತ್ತು ಸದಾ ಆರೋಗ್ಯದತ್ತ ಕಾಳಜಿಯನ್ನು ವಹಿಸುತ್ತಿರುತ್ತೇವೆ. ಹೀಗಿರುವಾಗ ಸಿಗರೇಟ್ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟೊಂದು ಹಾನಿ ಮಾಡುತ್ತದೆ ಎಂಬುದು ಗೊತ್ತಿರುವ ವಿಚಾರವೇ.. ಅದನ್ನು ಬಿಟ್ಟು ಬಿಡುವ ಸಂಕಲ್ಪ ಮಾಡಿದ್ದೇ ಆದರೆ ಹೊಸವರ್ಷ ನಿಮ್ಮ ಪಾಲಿಗೆ ಒಂದೊಳ್ಳೆಯ ವರ್ಷವಾಗುವುದರಲ್ಲಿ ಎರಡು ಮಾತಿಲ್ಲ. ಸಿಗರೇಟಿನಿಂದ ಏನೆಲ್ಲ ತೊಂದರೆಯಿದೆ ಎಂಬುದನ್ನು ನೋಡಿದ ಮೇಲೆ ನಿಮ್ಮಲ್ಲೊಂದು ಬದಲಾವಣೆ ಆದರೆ ಒಳ್ಳೆಯದು.

ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಸಿಗರೇಟ್, ಬೀಡಿ ಸೇದುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇವರು ಕೆಮ್ಮು, ಅಸ್ತಮಾ ಮೊದಲಾದ ರೋಗಗಳಿಂದ ಬಳಲುತ್ತಿದ್ದರೂ ಧೂಮಪಾನವನ್ನು ಮಾತ್ರ ತ್ಯಜಿಸುವುದಿಲ್ಲ. ಪರಿಣಾಮ ಆರೋಗ್ಯ ಕ್ಷೀಣಗೊಂಡು ಅವರು ಮಾತ್ರ ಹಾಳಾಗುವುದಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತಾರೆ.
ಸಿಗರೇಟ್ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಮಾರಕ
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಬೀಡಿ ಸಿಗರೇಟಿನ ಬೆಲೆ ಗಗನಕ್ಕೇರಿದ್ದರೂ ಅದರ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಬದುಕುವವರು ಕಡಿಮೆಯೇ. ಕೆಲವರನ್ನು ಮಾತನಾಡಿಸಿದರೆ ಸಿಗರೇಟ್ ಸೇದುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟೆನ್ಷನ್ ದೂರವಾಗುತ್ತದೆ ಎನ್ನುತ್ತಾರೆ.
ಮತ್ತೆ ಕೆಲವರು ಖುಷಿಗೆ ಸೇದುತ್ತಿರುವುದಾಗಿ ಹೇಳುತ್ತಾರೆ. ತಮ್ಮ ಸಂಪಾದನೆಯಲ್ಲಿ ಕಾಲು ಭಾಗವನ್ನು ಸಿಗರೇಟಿಗೆ ಸುರಿಯುತ್ತಾರೆ. ಇನ್ನು ಧೂಮಪಾನ ಚಟವನ್ನು ಮೈಗೆ ಅಂಟಿಸಿಕೊಂಡ ವ್ಯಕ್ತಿ ಅದು ಇಲ್ಲದೆ ಹೋದರೆ ವಿಚಿತ್ರವಾಗಿ ವರ್ತಿಸುತ್ತಾನೆ. ಏನೋ ಕಳೆದುಕೊಂಡಂತೆ ಒದ್ದಾಡುತ್ತಾನೆ. ವಿದ್ಯಾರ್ಥಿಗಳು ಈ ಚಟಕ್ಕೆ ಹೆಚ್ಚಾಗಿ ಒಳಗಾಗುತ್ತಾರೆ. ಮುಂದುವರಿದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಸಿಗರೇಟ್ ಸೇದುವ ಚಟವನ್ನು ರೂಢಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಸಿಗರೇಟ್ ಹೊಗೆ ಗಂಡಸರಿಗಿಂತಲೂ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಕ್ಯಾನ್ಸರ್‌ಗೆ ಆಹ್ವಾನ ನೀಡುವ ಸಿಗರೇಟ್
ಇಷ್ಟಕ್ಕೂ ಸಿಗರೇಟ್ ಸೇದಿದರೆ ಅದರಿಂದ ಏನೋ ಒಂದು ಮಜಾ ಸಿಗುತ್ತೆ ಎಂಬ ಭ್ರಮೆಯಲ್ಲಿರುತ್ತಾರೆ ಇದಕ್ಕೆ ಸಿಗರೇಟಿನಲ್ಲಿರುವ ನಿಕೋಟಿನ್ ಕಾರಣವಂತೆ ಇದು ಸಿಗರೇಟ್ನ್ನು ಮತ್ತೆ ಮತ್ತೆ ಸೇದುವಂತೆ ಮಾಡುತ್ತದೆ. ಇದರಿಂದ ಮುಂದೆ ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಸದ ತೊಂದರೆ, ಕ್ಯಾನ್ಸರ್, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಸಿಗರೇಟ್ ಸೇದುವುದರಿಂದ ತಮ್ಮ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಅದನ್ನು ಬಿಡುವ ಆಲೋಚನೆ ಮಾಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಆರೋಗ್ಯವಿದ್ದಾಗ ಸಿಗರೇಟ್ ಸೇದುವುದರಿಂದಾಗುವ ಪರಿಣಾಮಗಳು ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನುಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ದುಶ್ಚಟ ಬಿಟ್ಟವರು ಬದುಕಿಕೊಳ್ಳಬಲ್ಲರು.
ಸಿಗರೇಟ್ ಬಿಟ್ಟ ನಂತರ ಏನು ಮಾಡಬೇಕು?
ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ಬಹಳಷ್ಟು ಮಂದಿ ಇವತ್ತು ಧೂಮಪಾನ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ.

ಸಿಗರೇಟ್ ಸೇವನೆ ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರಂತೆ ಅಲ್ಲದೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಹೊಸವರ್ಷಕ್ಕೆ ಕೊಡುವ ಕೊಡುಗೆಯಾಗಲಿ
ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ 'ಇ' ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಹೇಳಿದ್ದಾರೆ. ದುಶ್ಚಟಗಳಿಂದ ಮುಕ್ತಿ ಹೊಂದಬೇಕಾದರೆ ಬೇರೆಯವರ ಸಲಹೆಗಳೊಂದಿಗೆ ತಾನು ಬಿಟ್ಟೇ ಬಿಡುತ್ತೇನೆ ಎಂಬ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು ಆಗ ಮಾತ್ರ ಸಾಧ್ಯ.
ಇದೆಲ್ಲವನ್ನು ಗಮನಿಸಿದ ಮೇಲೆ ಸಿಗರೇಟ್ ಸಹವಾಸ ಬೇಡವೇ ಬೇಡ ಎಂದೆನಿಸಿದರೆ ಬಿಟ್ಟು ಬಿಡುವ ಪ್ರಯತ್ನ ಮಾಡಿಬಿಡಿ. ಮನಸ್ಸಿದ್ದರೆ ಮಾರ್ಗ ಎಂಬಂತೆ ಸಿಗರೇಟ್ ಬಿಟ್ಟವರು ನೆಮ್ಮದಿಯಿಂದ ಇದ್ದಾರೆ. ಈ ಪಟ್ಟಿಯಲ್ಲಿ ನೀವು ಸೇರ್ಪಡೆಯಾಗಿ, ನೀವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸವರ್ಷಕ್ಕೆ ಕೊಡಬಹುದಾದ ಕೊಡುಗೆ ಇದಾಗಿರಲಿ ಎಂದು ಬಯಸುತ್ತೇವೆ.












Click it and Unblock the Notifications