ದುರಾಸೆಗಳು ನಮ್ಮನ್ನು ಯಾವತ್ತೂ ಸುಖವಾಗಿಡುವುದಿಲ್ಲ..ಯಾಕೆ ಗೊತ್ತಾ..?
ಆಸೆ ಎನ್ನುವುದು ನಮ್ಮನ್ನು ಸುಖದ ಭ್ರಮೆಯಲ್ಲಿ ತೇಲಿಸುವ ಆದರೆ ಸುಖಕೊಡದ ಮತ್ತು ಇನ್ನು ಬೇಕೆನ್ನುವ ಹುಚ್ಚು ಹೆಚ್ಚಿಸುವ ನಮ್ಮ ದೌರ್ಬಲ್ಯ. ಕೆಲವೊಮ್ಮೆ ಆಸೆಗಳು ಈಡೇರುತ್ತಾ ಹೋದಂತೆಲ್ಲ ದುರಾಸೆಗಳು ಹುಟ್ಟಲಾರಂಭಿಸುತ್ತದೆ. ಇದನ್ನು ಆರಂಭದಲ್ಲಿಯೇ ಮಟ್ಟ ಹಾಕದೆ ಹೋದರೆ ಮುಂದೆ ಬದುಕನ್ನು ಅಧಃಪತನಕ್ಕೆ ತಳ್ಳಿದರೂ ಅಚ್ಚರಿಪಡಬೇಕಾಗಿಲ್ಲ. ಅದಕ್ಕೆ ಹೇಳುವುದು ಮನುಷ್ಯನಿಗೆ ಆಸೆಗಳು ಇರಬೇಕು ದುರಾಸೆಗಳು ಇರಬಾರದೆಂದು.
ಇಷ್ಟಕ್ಕೂ ಆಸೆ ಪಡದವರಾರು? ಪ್ರತಿಯೊಬ್ಬರು ಏನಾದರೊಂದು ಪಡೆಯಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅದು ಮಗುವಿನಿಂದ ಆರಂಭಗೊಂಡು ವೃದ್ಧರವರೆಗೂ ಇರುತ್ತದೆ. ಆಸೆ ಪಡುವುದು ಮನುಷ್ಯನ ಸಹಜಗುಣ. ಈ ಆಸೆಗಳು ಕೂಡ ಕೈಗೆ ಎಟಕುವಂತಿರಬೇಕು.

ಆ ವ್ಯಾಪ್ತಿಯಲ್ಲಿ ಆಸೆಪಟ್ಟು ಅದನ್ನು ಗಳಿಸಿ ಅನುಭವಿಸುವ ಸುಖವೇ ಬೇರೆ. ಕೈಗೆಟುಕದರ ಬಗ್ಗೆ ಆಸೆ ಪಟ್ಟು ಅದು ಸಿಗದೆ ನಿರಾಸೆಪಡುವ ನೋವೇ ಬೇರೆ. ತನ್ನ ಸಾಮರ್ಥ್ಯದ ಪರಿಧಿಯಲ್ಲಿ ಆಸೆ ಪಡುವ ವ್ಯಕ್ತಿ ಅದನ್ನು ಪಡೆಯಲು ಶ್ರಮಪಡುತ್ತಾನೆ. ಮತ್ತು ಪಡೆದ ದಿನ ತುಂಬಾ ಸುಖ ಅನುಭವಿಸುತ್ತಾನೆ. ಆದರೆ ಅತಿ ಆಸೆ ಮತ್ತು ದುರಾಸೆಯನ್ನು ಮೈಯಲ್ಲಿ ತುಂಬಿಕೊಂಡ ವ್ಯಕ್ತಿ ಸುಖಿಯಾಗಿರಲು ಸಾಧ್ಯವಿಲ್ಲ. ಸದಾ ಏನಾದರೊಂದು ಸಮಸ್ಯೆಯಲ್ಲಿ ಸಿಕ್ಕಿ ಪರದಾಡುತ್ತಲೇ ಇರುತ್ತಾನೆ. ಮನುಷ್ಯನ ಆಸೆಗಳು ಹೀಗೆಯೇ ಇರುತ್ತದೆ ಎನ್ನಲಾಗುವುದಿಲ್ಲ.
ಆಸೆ ಅದುಮಿ ಬದುಕುವುದನ್ನು ಕಲಿಯೋಣ
ಪ್ರತಿಯೊಬ್ಬನಿಗೂ ತನ್ನದೇ ಆದ ಆಸೆಗಳಿರುತ್ತವೆ. ಕೆಲವರಿಗೆ ಹಣ, ಆಸ್ತಿ, ಒಡವೆಗಳದ್ದಾದರೆ ಮತ್ತೆ ಕೆಲವರಿಗೆ ಅಧಿಕಾರದ ಆಸೆ ಹೀಗೆ ಮುಂದುವರೆಯುತ್ತಲೇ ಹೋಗುತ್ತದೆ. ತನ್ನ ಸ್ವಸಾಮರ್ಥ್ಯದಿಂದ ಎಲ್ಲವನ್ನೂ ಪಡೆಯಬೇಕೆಂಬ ಆಸೆ ಒಳ್ಳೆಯದೇ. ಆದರೆ ಮತ್ತೊಬ್ಬರನ್ನು ಏನಾದರು ಮಾಡಿ ಸೋಲಿಸಿ ತಾನು ಗೆಲ್ಲಬೇಕೆಂಬ ಆಸೆ ಇದೆಯಲ್ಲ ಅದು ಮಾತ್ರ ನಿಜಕ್ಕೂ ಒಳ್ಳೆಯದಲ್ಲ.
ಆಸೆಗಳು ಹುಟ್ಟವುದು ಸಹಜ. ಆದರೆ ಆಸೆಗಳನ್ನು ಅದುಮಿ ಬದುಕುವುದನ್ನು ಕಲಿಯಬೇಕು. ಯಾವ ಆಸೆಗಳು ನಮಗೆ ಒಳಿತನ್ನು ನೀಡಬಹುದೋ ಅದಕ್ಕೆ ಮಾತ್ರ ಪ್ರಾಮುಖ್ಯತೆ ನೀಡಬೇಕು. ಬೇರೆಯವರನ್ನು ನೋಡಿ ಅವರಂತೆ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಆಸೆ ಪಡುವುದು ಒಳ್ಳೆಯದಾದರೂ ಅವನಂತೆ ಕಾರಿನಲ್ಲಿ ಓಡಾಡಬೇಕೆಂದು ಆಸೆ ಪಡುವುದು ತಪ್ಪು. ಅವನು ಕಾರಿನಲ್ಲಿ ಓಡಾಡುತ್ತಿದ್ದಾನೆ ಎನ್ನುವುದೇ ಆದರೆ ಆತನ ಬದುಕಿನ ಬಗ್ಗೆಯೂ ಅವಲೋಕಿಸಬೇಕು.

ಆಸೆ ಪಡುವ ಮುನ್ನ ಎಚ್ಚರವಿರಬೇಕು
ಅವನು ಹೇಗಿದ್ದಾನೆ? ಎಷ್ಟು ಸಂಪಾದಿಸುತ್ತಿದ್ದಾನೆ. ನಿಜಕ್ಕೂ ಅವನು ಕಾರು ಕೊಂಡುಕೊಳ್ಳುವಷ್ಟು ಶಕ್ತಿವಂತನೇ ಎಲ್ಲವನ್ನು ತಿಳಿದುಕೊಳ್ಳಬೇಕು. ಜೊತೆಗೆ ಅವನ ನೋಡಿ ಅವನಂತೆ ನಾನು ಕಾರು ತೆಗೆದುಕೊಳ್ಳಬೇಕೆಂದು ಆಸೆ ಪಡುವ ಮುನ್ನ ಅವನಲ್ಲಿರುವ ಸಾಮರ್ಥ್ಯ ನನ್ನಲಿದೆಯಾ ಎಂಬುವುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ನಾವು ಆಸೆ ಪಡಬಹುದು.
ಕೇವಲ ಅವನಲ್ಲಿದೆ ಎಂಬ ಒಂದೇ ಕಾರಣಕ್ಕೆ ನನಗೂ ಬೇಕೆಂದು ಆಸೆ ಪಡುವುದರಲ್ಲಿ ಅರ್ಥವಿಲ್ಲ. ಅದಕ್ಕಿಂತ ಹೆಚ್ಚಾಗಿ ಅಂಥ ಆಸೆಗಳು ನಮ್ಮನ್ನು ಸುಖವಾಗಿಡುವುದಿಲ್ಲ. ಆಸೆಗಳ ಗೋಪುರ ಕಟ್ಟಿಕೊಂಡು ಬದುಕುವ ಮಂದಿ ಅದು ಪೂರೈಸದೆ ಹೋದಾಗ ಮಾನಸಿಕವಾಗಿಯೂ ತೊಂದರೆ ಅನುಭವಿಸುತ್ತಾರೆ. ಅಷ್ಟೇ ಅಲ್ಲ ತನ್ನ ಆಸೆ ಪೂರೈಸಿಕೊಳ್ಳುವುದಕ್ಕೋಸ್ಕರ ಅಡ್ಡದಾರಿ ಹಿಡಿದು ಅಪರಾಧಿಗಳಾಗಿ ಬಿಡುತ್ತಾರೆ. ಆದ್ದರಿಂದ ಆಸೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಸಮಸ್ಯೆಗಳಿಗೆ ಆಸೆಯೇ ಕಾರಣವಾಗದಿರಲಿ
ಆಸೆಯಿಲ್ಲವ ಬಿಟ್ಟು, ರಾಶಿ ಕರ್ಮವ ಸುಟ್ಟು, ದೋಷವ ಕಳೆದು ನಿಂದವ ಲೇಸಾಗಿ ಇರುವನೆಂದು ಸರ್ವಜ್ಞ ಹೇಳಿದ್ದಾನೆ. ನಾವು ಪಂಚೇಂದ್ರಿಯಗಳ ಆಸೆಗಳನ್ನು ಮನಸ್ಸಿನ ಮೂಲಕ ಕಡಿವಾಣ ಹಾಕಿದ್ದೇ ಆದರೆ ನಿಜಕ್ಕೂ ಒಂದು ಸುಖೀ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇವತ್ತಿಗೂ ನಾವೆಲ್ಲರೂ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದ್ದರೆ ಅದಕ್ಕೆ ನಮ್ಮ ಆಸೆಯೇ ಕಾರಣ ಎನ್ನುವುದನ್ನು ತಳ್ಳಿ ಹಾಕಲಾಗದು.
ನಮ್ಮ ಬದುಕಿನಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ ಆಸೆಗಳಲ್ಲಿಯೂ ಹಲವು ತೆರೆನಾದ ಆಸೆಗಳಿವೆ. ಆದರೆ ಬದುಕಿಗೆ ಒಳಿತಾಗುವ ಆಸೆಗಳತ್ತ ಗಮನಹರಿಸಿ ಅದನ್ನು ಪಡೆಯುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ದುರಾಸೆಗೆ ಮಣೆ ಹಾಕಿದರೆ ಕೆಲವೊಮ್ಮೆ ಆಸೆಯಿಂದ ಕಷ್ಟಪಟ್ಟು ಗಳಿಸಿದ ಆಸ್ತಿ, ಅಂತಸ್ತು, ಗೌರವ ಕೀರ್ತಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿ ಬರಬಹುದು. ಆದ್ದರಿಂದ ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ.












Click it and Unblock the Notifications