Life: ನಮ್ಮೊಳಗಿನ ನಿಜವಾದ ಶತ್ರು ಯಾರು ಗೊತ್ತಾ?
ಏಳಿಗೆಯನ್ನು ಸಹಿಸದವರನ್ನು, ಅಡ್ಡಗಾಲು ಹಾಕುವವರನ್ನು, ದ್ವೇಷಿಸುವವರನ್ನು, ಪೀಡಿಸುವವರನ್ನು ನಾವು ಶತ್ರುವೆಂದೇ ಪರಿಭಾವಿಸಿ ದೂರ ಇಟ್ಟು ಬಿಡುತ್ತೇವೆ. ಜೊತೆಗೆ ಹೊರಗೆ ಇರುವ ಶತ್ರುವಿನ ಮೇಲೆ ನಿಗಾವಹಿಸುವುದರೊಂದಿಗೆ ಆತನಿಂದ ಅಂತರ ಕಾಯಿದುಕೊಂಡು ಬದುಕಲು ಆರಂಭಿಸುತ್ತೇವೆ. ಅಷ್ಟೇ ಅಲ್ಲದೆ ಆತನ ತಂತ್ರಕ್ಕೆ ಪ್ರತಿ ತಂತ್ರ ಹುಡುಕಲು ಪ್ರಯತ್ನಿಸುತ್ತೇವೆ. ಜೊತೆಗೆ ಸದಾ ಎಚ್ಚರವಾಗಿರುತ್ತೇವೆ.
ನಮ್ಮ ಬದುಕಿನಲ್ಲಿ ಹೊರಗಿನ ಶತ್ರುವನ್ನು ಗುರುತಿಸಿ ಆತನನ್ನು ಎದುರಿಸಿ ಬದುಕ ಬಹುದು. ಆದರೆ ನಮ್ಮೊಳಗಿನ ಶತ್ರುವನ್ನು ಗುರುತಿಸಿ ಆತನನ್ನು ಗೆಲ್ಲದೇ ಹೋದರೆ ಬದುಕಿನಲ್ಲಿ ಮುನ್ನಡೆಯುವುದು ಸಾಧ್ಯವಾಗದ ಮಾತು. ಹಾಗಾದರೆ ನಮ್ಮೊಳಗೆ ಇರುವ ಆ ಶತ್ರು ಯಾರು? ಆ ಶತ್ರುವನ್ನು ಗುರುತಿಸುವುದು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮಲ್ಲಿ ಎದ್ದೇಳಬಹುದು.

ಅಧ್ಯಾತ್ಮಿಕ ಚಿಂತಕರು ಹೇಳುವ ಪ್ರಕಾರ ಹೊರಗಿನ ಶತ್ರುಗಳನ್ನು ಗೆಲ್ಲಬಹುದಂತೆ ಆದರೆ ನಮ್ಮೊಳಗಿರುವ ಶತ್ರುವನ್ನು ಗುರುತಿಸಿ ಆತನನ್ನು ಗೆಲ್ಲದೆ ಹೋದರೆ ಬದುಕು ಮುಂದೇ ಸಾಗುವುದೇ ಕಷ್ಟವಾಗುತ್ತದೆಯಂತೆ. ಹಾಗಾದರೆ ನಮ್ಮೊಳಗೆ ಇರುವ ಆ ಶತ್ರು ಯಾರು ಎಂಬ ಪ್ರಶ್ನೆಗೆ ಅವರು ನೀಡುವ ಒಂದೇ ಉತ್ತರ ಉದಾಸೀನತೆ... ಈ ಉದಾಸೀನತೆ ನಮ್ಮೊಳಗೆ ನುಸುಳಿತೆಂದರೆ ಜೀವನ ಕಷ್ಟಕರವಾಗಿ ಬಿಡುತ್ತದೆ.
ನಮಗೆ ಉದಾಸೀನತೆ ಹೇಗೆ ಶತ್ರು?
ಇಷ್ಟಕ್ಕೂ ಈ ಉದಾಸೀನತೆ ಹೇಗೆ ಶತ್ರುವಾಗುತ್ತದೆ ಎಂಬ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳಬಹುದು. ಆ ಪ್ರಶ್ನೆಗೆ ಉತ್ತರವಾಗಿ ಹೇಳಬೇಕೆಂದರೆ ಎಲ್ಲವನ್ನು ಮತ್ತೆ, ನಾಳೆ, ಆಮೇಲೆಗೆ ತಳ್ಳುವ ಉದಾಸೀನತೆ ನಮ್ಮನ್ನು ಹಲವು ಸಂದರ್ಭಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಈ ಉದಾಸೀನತೆಯಿಂದ ಹಲವರಿಗೆ ಹಲವು ರೀತಿಯ ಅನುಭವಗಳಾಗಿರುತ್ತವೆ. ಆದ್ದರಿಂದ ಯಾವುದೇ ವಿಚಾರದಲ್ಲಿ ಆಗಲೀ ಉದಾಸೀನತೆಗೆ ಜಾಗ ಮಾಡಿಕೊಟ್ಟರೆ ಅದರಿಂದ ಅನಾಹುತಗಳೇ ಜಾಸ್ತಿ ಜತೆಗೆ ಜೀವದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ.
ಯಾಂತ್ರಿಕವಾಗಿ ನಾವು ಕೆಲಸ ಮಾಡುತ್ತಿರುತ್ತೇವೆ. ಮನಸ್ಸು ಮತ್ತೆಲ್ಲೋ ಹರಿದಾಡುತ್ತಿರುತ್ತದೆ. ತಕ್ಷಣಕ್ಕೆ ಕೆಲಸ ಮುಗಿಯುತ್ತದೆಯಾದರೂ ಅದರಲ್ಲಾದ ಎಡವಟ್ಟು ಮತ್ತೆ ತಿಳಿಯುತ್ತದೆ. ಆಗ ಅಯ್ಯೋ ನಾನು ಮನಸ್ಸಿಟ್ಟು ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಮಗೆ ನಾವೇ ಬಹಳಷ್ಟು ಹೇಳಿಕೊಳ್ಳುತ್ತೇವೆ. ಏನನ್ನೇ ಮಾಡಬೇಕಾದರೂ ನಾವು ಅದರ ಬಗ್ಗೆ ಮನಸ್ಸನ್ನು ಕೇಂದ್ರಿಕರಿಸಿ ಮಾಡದೆ ಉದಾಸೀನತೆ ಮಾಡಿದರೆ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ.

ಉದಾಸೀನತೆ ನಿರಾಸೆಗೆ ತಳ್ಳುತ್ತದೆ
ಮೊದಲೇ ಉದಾಸೀನತೆ ತೋರುವುದರಿಂದ ಶಾಲೆಯಲ್ಲಿ ಮಕ್ಕಳು, ಕಚೇರಿಗಳಲ್ಲಿ ಸಿಬ್ಬಂದಿ ಹೀಗೆ ಎಲ್ಲರೂ ಒಂದಲ್ಲ ಒಂದು ವಿಚಾರದಲ್ಲಿ ಉದಾಸೀನತೆ ತೋರಿ ಸಂಕಷ್ಟ ಅನುಭವಿಸಿರುತ್ತಾರೆ. ಈ ಉದಾಸೀನತೆ ನಮ್ಮನ್ನು ನಿರಾಸೆಗೆ ತಳ್ಳುತ್ತದೆ. ನಿರಾಸೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಆಸಕ್ತಿಯಿಂದ ಮಾಡಿದರಷ್ಟೆ ಅದರಿಂದ ಫಲ ಪಡೆಯಲು ಸಾಧ್ಯ.
ಸಾಮಾನ್ಯವಾಗಿ ನಾವು ಕೆಲಸ ಮಾಡುತ್ತಿರುವಾಗಲೆಲ್ಲಾ ನಮ್ಮ ಮನಸ್ಸು ಎಲ್ಲೆಲ್ಲೋ ಹರಿದಾಡುತ್ತಲೇ ಇರುತ್ತದೆ. ಅದನ್ನು ಮತ್ತೆ ಎಳೆದು ತಂದು ಕೆಲಸದತ್ತ ಕೇಂದ್ರಿಕರಿಸುವುದು ಕಷ್ಟವಾಗುತ್ತದೆ. ಅದರಲ್ಲೂ ದುಶ್ಚಟವಿರುವ ವ್ಯಕ್ತಿಗಳಂತು ತುಂಬಾನೇ ಕಷ್ಟ ಅನುಭವಿಸಬೇಕಾಗುತ್ತದೆ. ನಾವು ಹಾಕಿಕೊಂಡ ಯೋಜನೆಗಳನ್ನು ಸಮರ್ಪಕವಾಗಿ ಮುಗಿಸಬೇಕಾದರೆ ನಮ್ಮಲ್ಲಿ ಅದರ ಬಗ್ಗೆ ಹೆಚ್ಚಿನ ಒಲವು, ವಿಶ್ವಾಸ, ಸದಾ ಅದರತ್ತ ಚಿತ್ತವನ್ನಿಟ್ಟಿರಬೇಕು ಹಾಗಾದರೆ ಮಾತ್ರ ಯಾವುದೇ ತೊಂದರೆಯಿಲ್ಲದೆ ಮುಗಿಸಲು ಸಾಧ್ಯ.
ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬೇಕು
ಉದಾಸೀನತೆ ನಮ್ಮ ಪಾಲಿನ ಶತ್ರು. ಅದನ್ನು ಮೆಟ್ಟಿ ನಿಲ್ಲಬೇಕು. ಮೆಟ್ಟಿ ನಿಲ್ಲಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ ಬೇಕು. ಅದು ಇಲ್ಲದೆ ಹೋದರೆ ಮುನ್ನಡೆಯುವುದು ಕಷ್ಟ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಉಪದೇಶ ಮಾಡುತ್ತಾ ತನ್ನ ದೌರ್ಬಲ್ಯಗಳನ್ನು ಮೆಟ್ಟಿ ತನ್ನಿಂದ ತಾನೇ ತನ್ನ ಉದ್ಧಾರ ಮಾಡಿಕೊಳ್ಳಬೇಕು ಎಂದು ಹೇಳಿದ್ದಾನೆ. ಇದು ನಮ್ಮ ನಿತ್ಯ ಜೀವನದಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ಅತ್ಯುನ್ನತ ಉಪದೇಶವಾಗಿದೆ.
ಕೆಲಸದಲ್ಲಿ ಶ್ರದ್ಧೆ ಮತ್ತು ಯಶಸ್ಸು ದೊರೆಯಬೇಕಾದರೆ ನಮ್ಮ ಬದುಕಿನಲ್ಲಿ ಕೆಲವೊಂದು ಅಗತ್ಯ ಸುಧಾರಣೆಗಳನ್ನು ತಂದುಕೊಳ್ಳಬೇಕೆಂದು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ನಮ್ಮ ನಡತೆಯಲ್ಲಿರುವ ಕೆಲವು ನ್ಯೂನತೆ ನಮಗೆ ಗೊತ್ತಾಗದೆ ಹೋದರೂ ಬೇರೆಯವರಿಗೆ ಗೊತ್ತಾಗಿ ಬಿಡುತ್ತದೆ. ಕೆಲವರು ತಾವು ಮಾಡಿದ ಕೆಲಸಕ್ಕೆ ಬೇರೆಯವರಿಂದ ಪ್ರಶಂಸೆಯನ್ನು ಬಯಸುತ್ತಾರೆ. ಮತ್ತೆ ಕೆಲವರು ತಾವು ಮಾಡಿದ ಕೆಲಸವನ್ನು ಬೇರೆಯವರೊಂದಿಗೆ ಹೇಳಿ ಶಬಾಸ್‌ಗಿರಿ ಪಡೆಯುವ ಯತ್ನ ಮಾಡುತ್ತಾರೆ.
ಅಹಂಕಾರಕ್ಕೆ ಉದಾಸೀನವೇ ಮದ್ದು
ನಿಜವಾದ ಕೆಲಸಗಾರರು ತನ್ನ ಕರ್ತವ್ಯ ಎಂಬಂತೆ ಮಾಡುತ್ತಿರುತ್ತಾರೆ. ಅವರು ಯಾವ ಪ್ರತಿಫಲಾಪೇಕ್ಷೆಯನ್ನು ಬಯಸುವುದಿಲ್ಲ. ಅಂಥವರು ಭವಿಷ್ಯದಲ್ಲಿ ಯಶಸ್ಸನ್ನು ಕಾಣುತ್ತಾರೆ. ಉದಾಸೀನತೆಯನ್ನು ನಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳದೆ ಅಹಂಕಾರದ ಮುಂದೆ ಅಳವಡಿಸಿಕೊಂಡರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಏಕೆಂದರೆ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಮಾತು ಇಲ್ಲಿ ಉಪಯೋಗಕ್ಕೆ ಬರುತ್ತದೆ.












Click it and Unblock the Notifications