Hypertension: ಅಧಿಕ ರಕ್ತದೊತ್ತಡ- ದೇಶದ ಅಂಕಿ ಸಂಖ್ಯೆ ಮೀರಿಸಿದ ಕರ್ನಾಟಕ

ಭಾರತದಲ್ಲಿ ಸಂಭವಿಸುತ್ತಿರುವ ಮೂರು ಸಾವಿನಲ್ಲಿ ಒಂದು ಸಾವು ಹೃದಯಘಾತ, ಸ್ಟ್ರೋಕ್‌ ಅಥವಾ ಕಿಡ್ನಿ ವೈಫಲ್ಯದಿಂದ ಸಂಭವಿಸುತ್ತಿದೆ. ಇದರ ಮೂಲ ಹೈಪರ್‌ ಟೆನ್ಷನ್. ಹೈಪರ್ ಟೆನ್ಷನ್‌ ಇಡೀ ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕವಲ್ಲದ ರೋಗ. ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ರಾಷ್ಟ್ರಗಳ ಜನರನ್ನು ಇದು ಬಾಧಿಸುತ್ತಿದೆ. ಅಚ್ಚರಿ ಏನೆಂದರೆ ಭಾರತದಲ್ಲಿ ಕರ್ನಾಟಕದ ಜನರೇ ಹೆಚ್ಚು ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿರುವ ಆಘಾತಕಾರಿ ಸಂಗತಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಸರ್ವೆ -5 ರಿಂದ ಬಹಿರಂಗಗೊಂಡಿದೆ.

ಭಾರತದಲ್ಲಿ ವಯಸ್ಕರರಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಹೈಪರ್‌ ಟೆನ್ಷನ್‌ ನಿಂದ ಬಳಲುತ್ತಿದ್ದಾರೆ. ಅದರಲ್ಲಿ ಶೇ.12 ರಷ್ಟು ಮಂದಿ ಮಾತ್ರ ತಮ್ಮ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಸರ್ವೆ -5 ರ ಪ್ರಕಾರ, ಭಾರತದಲ್ಲಿ ಒಟ್ಟಾರೆ ಜನಸಂಖ್ಯೆ ಪೈಕಿ ಪುರುಷರಲ್ಲಿ ಶೇ. 26.96, ಮಹಿಳೆಯರಲ್ಲಿ ಶೇ. 25 ರಷ್ಟು ಮಂದಿ ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದು, ಪುರುಷರಲ್ಲಿ ಶೇ. 30.7, ಮಹಿಳೆಯರಲ್ಲಿ ಶೇ. 27. 9 ಜನರು ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ.

Hypertension People of Karnataka suffer from hypertension the most in India

ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, ಇದರಲ್ಲಿ ಶೇ. 9 ರಷ್ಟು ಪುರುಷರು ಹಾಗೂ ಶೇ. 12 ರಷ್ಟು ಮಹಿಳೆಯರು ಮಾತ್ರ ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿರುವ ಸಂಗತಿಯನ್ನು ತಪಾಸಣೆ ವೇಳೆ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ದೃಢಪಡಿಸಿದ್ದಾರೆ. ಅಂದರೆ ಬಹುತೇಕರಿಗೆ ಹೈಪರ್‌ ಟೆನ್ಷನ್‌ನ ಅರಿವೇ ಇಲ್ಲ. ಹೆಚ್ಚು ಮಂದಿ ಹೈಪರ್‌ ಟೆನ್ಷನ್‌ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸದೇ ಹೃದಯ ಸಂಬಂಧಿ ಕಾಯಿಲೆ, ಲಕ್ವಾ, ಕಿಡ್ನಿ ವೈಫಲ್ಯದಂತಹ ಜೀವಹಾನಿ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಹೈಪರ್‌ ಟೆನ್ಷನ್‌ ಗುರುತಿಸುವುದು ಹೇಗೆ?

ಸಾಮಾನ್ಯವಾಗಿ ರಕ್ತದ ಒತ್ತಡವನ್ನು ಪರಿಶೀಲನೆ ಮೂಲಕ ಹೈಪರ್‌ ಟೆನ್ಷನ್‌ ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಜನರ ರಕ್ತದ ಒತ್ತಡ 120/80 ಇರಬೇಕು. 140/90 ಅಥವಾ ಇದಕ್ಕಿಂತಲೂ ಹೆಚ್ಚು ಇದ್ದರೆ, ಇದನ್ನು ಹೈಪರ್‌ ಟೆನ್ಷನ್‌ ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ರಕ್ತದ ಒತ್ತಡದಲ್ಲಿ ಏರು ಪೇರು ಕಂಡು ಬಂದಲ್ಲಿ ಒಂದು ವಾರ ಕಾಲ ನಿರಂತರ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ಆನಂತರ ಇದರ ನಿಯಂತ್ರಣಕ್ಕೆ ಚಿಕಿತ್ಸೆ ಪಡೆಯಬೇಕು.

ಹೈಪರ್‌ ಟೆನ್ಷನ್‌ ಲಕ್ಷಣಗಳು

ಹೈಪರ್‌ ಟೆನ್ಷನ್‌ ಪರಕಾಷ್ಠೆ ತಲುಪಿದರೂ ಕೆಲವೊಮ್ಮೆ ಅದರ ರೋಗ ಲಕ್ಷಣಗಳು ಅರಿವಿಗೆ ಬರುವುದಿಲ್ಲ. ಇದರ ಪತ್ತೆಗೆ ಇರುವುದೊಂದೇ ದಾರಿ, ಅದು ಬಿಪಿ ತಪಾಸಣೆ. ಹೀಗಾಗಿಯೇ ಇದನ್ನು ಸೈಲೆಂಟ್‌ ಕಿಲ್ಲರ್‌ ಎಂದೇ ಕರೆಯಲಾಗುತ್ತದೆ. ಇದರ ನಡುವೆಯೂ ಈ ಸಮಸ್ಯೆಗಳು ಕಾಣಿಸಿಕೊಂಡರೆ, ಹೈಪರ್‌ ಟೆನ್ಷನ್‌ ಇರುವುದನ್ನು ಖಚಿತಪಡಿಸಿಕೊಳ್ಳಬಹುದು.

ತಲೆನೋವು ಅಥವಾ ತಲೆಭಾರ, ದೃಷ್ಟಿ ದೋಷ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಮೂತ್ರದಲ್ಲಿ ರಕ್ತ ಹೋಗುವುದು, ಎದೆ, ಕುತ್ತಿಗೆ ಅಥವಾ ಕಿವಿಯಲ್ಲಿ ನೋವು ಕಾಣಿಸಿಕೊಂಡರೆ, ಹೈಪರ್‌ ಟೆನ್ಷನ್‌ ಇದೆ ಅಂತಲೇ ಭಾವಿಸತಕ್ಕದ್ದು.

ಹೈಪರ್‌ ಟೆನ್ಷನ್‌ ಕಂಟ್ರೋಲ್‌ ಮಾಡುವುದು ಹೇಗೆ?

*ಜೀವನ ಶೈಲಿ ಬದಲಿಸಿಕೊಳ್ಳುವ ಮೂಲಕ ಹೈಪರ್ ಟೆನ್ಷನ್‌ ನಿಯಂತ್ರಿಸಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಬಹುದು. ಒತ್ತಡದ ಬದುಕಿಗೆ ಬ್ರೇಕ್‌ ಹಾಕಿ

*ದೇಹದ ತೂಕವನ್ನು ಇಳಿಸಿಕೊಳ್ಳಬೇಕು. ಉಪ್ಪು ಸೇವನೆ ಕಡಿಮೆ ಮಾಡಬೇಕು. ಮದ್ಯಪಾನ, ತಂಬಾಕು ಸೇವನೆಗೆ ಕಡಿವಾಣ ಹಾಕಬೇಕು.

*ದಿನ ನಿತ್ಯ ಯೋಗ, ವ್ಯಾಯಾಮ, ಪುಸ್ತಕ ಓದುವ ಹವ್ಯಾಸ, ದೈಹಿಕ ಚಟುವಟಿಕೆಯ ಕೆಲಸಗಳನ್ನುಕಡ್ಡಾಯವಾಗಿ ಮಾಡುವ ಮೂಲಕ ಹೈಪರ್ ಟೆನ್ಷನ್‌ನಿಂದ ದೂರ ಉಳಿಯಬಹುದು.

*ಈಗಾಗಲೇ ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆ ಮೇರೆಗೆ ನಿರಂತರವಾಗಿ ಔಷಧಗಳನ್ನು ಸ್ವೀಕರಿಸಬೇಕು. ಪ್ರತಿ ನಿತ್ಯ ರಕ್ತದ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು.

*ವೈದ್ಯರ ಸಲಹೆ ಇಲ್ಲದೇ ಔಷಧ ತೆಗೆದುಕೊಳ್ಳುವುದನ್ನು ಬಿಡಬಾರದು, ಔಷಧ ಬದಲಾವಣೆ ಮಾಡಬಾರದು.

ಹೈಪರ್‌ ಟೆನ್ಷನ್‌ ಕುರಿತ ಈ ಸತ್ಯ ಗೊತ್ತಿರಲಿ

* ಹೈಪರ್‌ ಟೆನ್ಷನ್‌ ಪರೀಕ್ಷಿಸಿಕೊಳ್ಳದ ಹೊರತು ಗೊತ್ತಾಗುವುದಿಲ್ಲ

* ಯಾವುದೇ ರೋಗ ಲಕ್ಷಣ ಇಲ್ಲದೇ, ಕಿಡ್ನಿ ವೈಫಲ್ಯ, ಸ್ಟ್ರೋಕ್‌ ಸಂಭವಿಸಬಹುದು

* ಒತ್ತಡದ ಬದುಕಿನಿಂದ ಯುವ ಜನಾಂಗವೂ ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ.

* ಆರೋಗ್ಯ ಜೀವನ ಶೈಲಿ ರೂಢಿಸಿಕೊಳ್ಳುವುದರಿಂದ ಹೈಪರ್‌ ಟೆನ್ಷನ್‌ ನಿಯಂತ್ರಣದಲ್ಲಿಡಬಹುದು

* ಗುಣಮಟ್ಟದ ಚಿಕಿತ್ಸೆ ಮೂಲಕವೂ ಹೈಪರ್‌ ಟೆನ್ಷನ್‌ ನಿಯಂತ್ರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+