Tricolor Idli, Dosa Recipe: ಇರಿ ಇರಿ.. ತಿಂಡಿ ಇನ್ನೂ ಮಾಡಿಲ್ಲಾ ತಾನೆ? ಗಣರಾಜ್ಯೋತ್ಸವದಂದು ತ್ರಿವರ್ಣ ದೋಸೆ, ಇಡ್ಲಿ ತಯಾರಿಸಿ
ಇಂದು ಗಣರಾಜ್ಯ ದಿನ. ದೇಶದೆಲ್ಲೆಡೆ ಗಣರಾಜೋತ್ಸವವನ್ನು ಆಚರಿಸಲಾಗುತ್ತಿದೆ. ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಆಪ್ತರೊಂದಿಗೆ ಶುಭಶಾಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಲವೆಡೆ ಕಚೇರಿಗಳಿಗೆ ರಜೆ ಇದೆ. ಬಹುತೇಕ ಜನ ಇಂದು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಮನೆಯಲ್ಲಿರಬಹುದು.
ನಿತ್ಯದ ತಿಂಡಿ ಕೂಡ ಇಂದು ತಡವಾಗಿರಬಹುದು. ಆದರೆ ಇಂದು ಎಂದಿನಂತೆ ವಡಾ, ಉಪ್ಪಿಟ್ಟು, ಅವಲಕ್ಕಿ, ಶಾವಿಗೆ ಅಂತ ಅದೇ ತಿಂಡಿನಾ ತಯಾರಿಸಬೇಡಿ. ಕೊಂಚಿ ವಿಭಿನ್ನವಾಗಿ ಯೋಚಿಸಿ. ಈ ದಿನಕ್ಕೆ ಹೊಂದಿಕೊಳ್ಳುವಂತೆ ನೀವು ಮನೆಯಲ್ಲಿ ತಿಂಡಿ ರೆಡಿ ಮಾಡಬಹುದು. ಅದು ಹೇಗೆ ಅನ್ನೋದನ್ನು ನಾವು ನಿಮಗೆ ಐಡಿಯಾ ಕೊಡುತ್ತೇವೆ ನೋಡಿ.

ಸಾಮಾನ್ಯವಾಗಿ ನಿಮ್ಮ ಮನೆಯ ಫ್ರಿಡ್ಜ್‌ನಲ್ಲಿ ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಇದ್ದೇ ಇರುತ್ತದೆ. ಅದರಿಂದ ನೀವು ಇಂದು ತ್ರಿವರ್ಣ ದೋಸೆ ಹಾಗೂ ತ್ರಿವರ್ಣ ಇಡ್ಲಿ ತಯಾರಿಸಬಹುದು. ತೆಂಗಿನಕಾಯಿ ಚಟ್ನಿ, ಸಾಂಬಾರ್ ಇತ್ಯಾದಿಗಳು ಈ ತ್ರಿವರ್ಣ ದೋಸೆಗೆ ಉತ್ತಮವಾದ ಆಯ್ಕೆ. ಅದೂ ಕೂಡ ಮನೆಯಲ್ಲಿ ಮಕ್ಕಳಿರುವಾಗ ಈ ರೀತಿಯ ದೋಸೆ ಮಾಡಿದರೆ ಮಕ್ಕಳೂ ಇಷ್ಟಪಟ್ಟು ತಿನ್ನುತ್ತಾರೆ.
ಹಾಗಾದರೆ ತ್ರಿವರ್ಣ ದೋಸೆ ಮಾಡುವುದು ಹೇಗೆಂದು ತಿಳಿಯೋಣ. ತ್ರಿವರ್ಣ ದೋಸೆ ರೆಸಿಪಿಗಾಗಿ ಸರಳವಾದ ಪಾಕವಿಧಾನವನ್ನು ಕೆಳಗೆ ನೀಡಲಾಗಿದೆ. ಇದನ್ನು ಓದಿ, ಮನೆಯಲ್ಲಿ ಒಂದು ಬಾರಿ ಟ್ರೈ ಮಾಡಿ, ರುಚಿ ನೋಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ತ್ರಿವರ್ಣ ದೋಸೆಗೆ ಅಗತ್ಯವಿರುವ ವಸ್ತುಗಳು:
*ಇಡ್ಲಿ/ದೋಸೆ ಹಿಟ್ಟು - 3 ಕಪ್
* ಚೆನ್ನಾಗಿ ಮಾಗಿದ ದೊಡ್ಡ ಟೊಮೆಟೊ - 1
* ಕಾಶ್ಮೀರಿ ಮೆಣಸಿನಕಾಯಿ - 2-3
* ಕೊತ್ತಂಬರಿ / ಪುದೀನಾ - 1 ಕಪ್
* ಹಸಿರು ಮೆಣಸಿನಕಾಯಿ - 1
*ಎಣ್ಣೆ
* ಉಪ್ಪು

ತ್ರಿವರ್ಣ ದೋಸೆ ಮಾಡುವ ವಿಧಾನ:
* ಮೊದಲು ದೋಸೆ ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಕಲಸಿ ಮೂರು ಪ್ರತ್ಯೇಕ ಬಟ್ಟಲುಗಳಲ್ಲಿ ಹಾಕಿಕೊಳ್ಳಿ.
*ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಕ್ಯಾಪ್ಸಿಕಂ ಅನ್ನು ಕೆಲವು ನಿಮಿಷ ಹುರಿದು ತಣ್ಣಗಾಗಲು ಬಿಡಿ. ನಂತರ ಇದನ್ನು ಮಿಕ್ಸರ್ ಜಾರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಬಟ್ಟಲಿನ ಹಿಟ್ಟಿಗೆ ಇದನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಹಸಿರು ಬಣ್ಣಕ್ಕೆ ಒಂದ ಪ್ರತ್ಯೇಕ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಹಸಿಮೆಣಸಿನಕಾಯಿ ಹಾಕಿ 1 ನಿಮಿಷ ಹುರಿದು ನಂತರ ಕೊತ್ತಂಬರಿ ಸೊಪ್ಪು/ಪುದೀನಾ ಹಾಕಿ ಒಂದು ನಿಮಿಷ ಹುರಿದು ತಣ್ಣಗಾಗಲು ಬಿಡಿ, ಮಿಕ್ಸಿಗೆ ಹಾಕಿ. ಇದನ್ನು ಒಂದು ಬಟ್ಟಲಿನ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ. ಈಗ ತ್ರಿವರ್ಣ ಬ್ಯಾಟರ್ ಸಿದ್ಧವಾಗಿದೆ.
* ಈ ಹಿಟ್ಟಿನಲ್ಲಿ ನೀವು ಇಡ್ಲಿ ಕೂಡ ತಯಾರಿಸಬಹುದು.

ತ್ರಿವರ್ಣ ದೋಸೆ ಬೇಯಿಸುವ ವಿಧಾನ:
* ದೋಸೆ ಹೆಂಚನ್ನು ಒಲೆಯಲ್ಲಿ ಇಟ್ಟು, ಅದು ಬಿಸಿಯಾದಾಗ ಮೊದಲು 1/4 ಚಮಚ ಕೇಸರಿ ಬಣ್ಣದ ದೋಸೆ ಹಿಟ್ಟನ್ನು ತೆಗೆದುಕೊಂಡು ಅರ್ಧ ವೃತ್ತಾಕಾರದಲ್ಲಿ ಹರಡಿ.
* ಅದರ ನಂತರ 1/4 ಚಮಚ ಬಿಳಿ ದೋಸೆ ಹಿಟ್ಟನ್ನು ತೆಗೆದುಕೊಂಡು ಅದನ್ನು ಮಧ್ಯದಲ್ಲಿ ಹರಡಿ.
* ನಂತರ 1/4 ಚಮಚ ಹಸಿರು ದೋಸೆ ಹಿಟ್ಟನ್ನು ಮತ್ತೆ ಅರ್ಧ ವೃತ್ತಾಕಾರದಲ್ಲಿ ಹರಡಿ.
* ನಂತರ ದೋಸೆಯ ಸುತ್ತಲೂ ಎಣ್ಣೆ ಹಾಕಿ ಅದು ಬೆಂದಾಗ ಮಗುಚಿ 1 ನಿಮಿಷ ಬಿಟ್ಟರೆ ರುಚಿಯಾದ ತ್ರಿವರ್ಣ ದೋಸೆ ರೆಡಿ.
ತ್ರಿವರ್ಣ ಇಡ್ಲಿ ಬೇಯಿಸುವ ವಿಧಾನ:
* ಇಡ್ಲಿ ಪಾತ್ರೆಯಲ್ಲಿ ಒಂದು ಬದಿ ಕೇಸರಿ ಬಣ್ಣದ ಹಿಟ್ಟು ಹಾಕಿ ಅದರ ನಡುವ ಬಿಳಿ ಕೊನೆಗೆ ಹಸಿರು ಹಾಕಿ ಇಡ್ಲಿ ತಯಾರಿಸಬಹುದು.
* ಇಲ್ಲವಾದಲ್ಲಿ ಪ್ರತ್ಯೇಕವಾಗಿ ಒಂದೊಂದು ಇಡ್ಲಿಯನ್ನು ಒಂದೊಂದು ಬಣ್ಣದಲ್ಲಿ ತಯಾರಿಸಬಹುದು.
ಇದು ಚಟ್ನಿ ಹಾಗೂ ಸಾಂಬರ್‌ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಈ ವಿಶೇಷ ದಿನದಂದು ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಬಹುದು.












Click it and Unblock the Notifications