PaniPuri Recipe: ಮನೆಯಲ್ಲೇ ರುಚಿ-ರುಚಿಯಾದ ಪಾನಿ ಪುರಿ ತಯಾರಿಸುವುದು ಹೇಗೆ..?
ಪಾನಿ ಪೂರಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.ಸಂಜೆಯ ಸ್ನ್ಯಾಕ್ಸ್‌ಗೆ ಪಾನಿ ಪೂರಿ ಇದ್ದರೆ ಅದೊಂದು ಪರಿಪೂರ್ಣ ಸಂಜೆಯಾಗಿರುತ್ತದೆ. ಅದರಲ್ಲೂ ಕೆಲವು ಹುಡುಗಿಯರು ಅತಿಯಾಗಿ ಪಾನಿ ಪೂರಿಯನ್ನು ಇಷ್ಟಪಡುತ್ತಾರೆ. ಮಕ್ಕಳು ಹಾಗೂ ಹಿರಿಯವರಿಗೂ ಕೂಡ ಪಾನಿ ಪೂರಿ ಎಂದರೆ ಬಹಳ ಇಷ್ಟವಿರುತ್ತದೆ.
ರುಚಿಕರವಾಗಿರುವ ಪಾನಿಪೂರಿಯನ್ನು ಹೊರಗಡೆ ತಿನ್ನಲು, ಮಕ್ಕಳಿಗೆ ತಿನ್ನಿಸಲು ಭಯಪಡುತ್ತಾರೆ. ಏಕೆಂದರೆ ಹೊರಗಡೆ ತಯಾರಿಸುವ ಆಹಾರದಿಂದ ಆರೋಗ್ಯ ಕೆಡಬಹುದು ಎಂದು ಪಾನಿಪೂರಿಯನ್ನು ತಿನ್ನುವುದನ್ನು ಬಿಡುತ್ತಾರೆ. ಹೀಗಾಗಿ ಎಲ್ಲರಿಗೂ ಪ್ರಿಯವಾದ ಪಾನಿ ಪೂರಿಯನ್ನು ಮನೆಯಲ್ಲೇ ತಯಾರಿಸಿ. ಪಾನಿ ಪೂರಿಯನ್ನು ಬಹಳ ಸರಳವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಪೂರಿಗೆ ಬೇಕಾಗುವ ಸಾಮಾಗ್ರಿಗಳು
ರವಾ (ಚಿರೋಟಿ ರವೆ)-1 ಕಪ್
ಮೈದಾ-1 ಚಮಚ
ಉಪ್ಪು-1/2 ಚಮಚ
ಅಡುಗೆ ಸೋಡಾ-1/4 ಚಮಚ
ಎಣ್ಣೆ-1 ಚಮಚ
ನೀರು-1/2 ಕಪ್
ಪೂರಿಗಳನ್ನು ಕರಿಯಲು ಎಣ್ಣೆ
ಆಲೂಗೆಡ್ಡೆ ಸ್ಟಫಿಂಗ್‌ಗೆ ಬೇಕಾದ ಸಾಮಾಗ್ರಿಗಳು
ದೊಡ್ಡ ಆಲೂಗಡ್ಡೆ- 2
ಉಪ್ಪು-1/4 ಚಮಚ
ಕೆಂಪು ಮೆಣಸಿನ ಪುಡಿ-1/2 ಚಮಚ
ಚಾಟ್ ಮಸಾಲಾ-1/2 ಚಮಚ
ಪಾನಿಗೆ ಬೇಕಾಗುವ ಸಾಮಾಗ್ರಿಗಳು
ಪುದಿನಾ-1 ಹಿಡಿ
ಕೊತ್ತಂಬರಿ ಸೊಪ್ಪು-1 ಹಿಡಿ
ಹಸಿರು ಮೆಣಸಿನಕಾಯಿ-2-4
ಉಪ್ಪು-1/2 ಚಮಚ
ಚಾಟ್ ಮಸಾಲಾ-1 ಚಮಚ
ಹುಣಸೆ ಹಣ್ಣಿನ ರಸ-ರುಚಿಗೆ ತಕ್ಕಷ್ಟು
ಬೆಲ್ಲ- ರುಚಿಗೆ ತಕ್ಕಷ್ಟು
ನಿಂಬೆ ರಸ-1/2 ಚಮಚ
ಈರುಳ್ಳಿ-1
ಉಪ್ಪು-ರುಚಿಗೆ ತಕ್ಕಷ್ಟು

ಪೂರಿಪುರಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ರವೆ, ಮೈದಾ, ಉಪ್ಪು ಮತ್ತು ಅಡುಗೆ ಸೋಡಾ ತೆಗೆದುಕೊಳ್ಳಿ. ಒಂದು ಚಮಚ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಬೆರೆಸಲು ಪ್ರಾರಂಭಿಸಿ. ಅಗತ್ಯವಿರುವಷ್ಟು ನೀರನ್ನು ಬಳಸಿ ಗಟ್ಟಿಯಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ. ಒದ್ದೆಯಾದ ಬಟ್ಟೆಯಿಂದ ಅದನ್ನು ಮುಚ್ಚಿ 30 ನಿಮಿಷಗಳ ಕಾಲ ಇಡಿ. 30 ನಿಮಿಷಗಳ ನಂತರ ಮತ್ತೆ ಹಿಟ್ಟನ್ನು ಬೆರೆಸಿಕೊಳ್ಳಿ. ಗಟ್ಟಿಯಾಗದೇ ಇದ್ದರೆ ಸ್ವಲ್ಪ ರವೆಯನ್ನು ಸೇರಿಸಬಹುದು. ಕನಿಷ್ಠ 5 ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಬೆರೆಸಿಕೊಳ್ಳಿ.
ಬಳಿಕ ಒಂದು ದೊಡ್ಡ ನಿಂಬೆ ಗಾತ್ರದಷ್ಟು ಹಿಟ್ಟನ್ನು ತೆಗೆದುಕೊಳ್ಳಿ. ಚಪಾತಿಯಂತೆ ಲಟ್ಟಿಸಿಕೊಳ್ಳಿ. ಬಳಿಕ ಒಂದು ಬೌಲ್ ಸಹಾಯದಿಂದ ಚಿಕ್ಕ ಚಿಕ್ಕ ವೃತ್ತಾಕಾರವಾಗಿ ಮಾಡಿಕೊಳ್ಳಿ. ಬಳಿಕ ಅದನ್ನು ಕಾದ ಎಣ್ಣೆಯಲ್ಲಿ ಕರಿದರೆ ಪಾನಿ ಪೂರಿಯ ಪೂರಿ ಸಿದ್ಧವಾಗುತ್ತದೆ.
ಬಳಿಕ ಆಲೂಗೆಡ್ಡೆ ಸ್ಟಫಿಂಗ್ ಸಿದ್ಧಪಡಿಸಿಕೊಳ್ಳಬೇಕು. 2 ದೊಡ್ಡ ಆಲೂಗಡ್ಡೆಗಳನ್ನು ಬೇಯಿಸಿಕೊಳ್ಳಿ. ಸಿಪ್ಪೆ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ. ಬೇಕಿದ್ದರೆ ಬೇಯಿಸಿದ ಹಸಿರು ಬಟಾಣಿಗಳನ್ನು ಸೇರಿಸಿ ಅದನ್ನು ಮ್ಯಾಶ್ ಮಾಡಿಕೊಳ್ಳಿ. ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಆಲೂಗೆಡ್ಡೆ ಸ್ಟಫಿಂಗ್ ಸಿದ್ಧವಾಗುತ್ತದೆ.
ನಂತರ ಪಾನಿ ಸಿದ್ಧಪಡಿಸಿಕೊಳ್ಳಿ. ಪಾನಿ ತಯಾರಿಸಲು ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿ ಜಾರ್ನಲ್ಲಿ ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಸೋಯಿಸಿಕೊಳ್ಳಿ. ಉಪ್ಪು, ಚಾಟ್ ಮಸಾಲ, ಹುಣಸೆ ಹಣ್ಣಿನ ರಸ ಮತ್ತು ಬೆಲ್ಲ ಸೇರಿಸಿ. ಪಾನಿ ರುಚಿ ಮತ್ತು ನಿಮ್ಮ ರುಚಿಗೆ ತಕ್ಕಂತೆ ಎಲ್ಲಾ ಪದಾರ್ಥಗಳನ್ನು ಹೊಂದಿಸಿ. ಬಳಿಕ ನಿಂಬೆ ಹಣ್ಣಿನ ರಸ ಸೇರಿಸಿ.
ಈಗ ನಿಮಗೆ ಪಾನಿ ಪುರಿ ಸವಿಯಲು ಪುರಿ, ಆಲೂಗೆಡ್ಡೆ ಸ್ಟಫಿಂಗ್ ಹಾಗೂ ಪಾನಿ ಸಿದ್ಧವಾಗಿದೆ. ಹೀಗಾಗಿ ಮೊದಲು ಪುರಿಯನ್ನು ತೆಗೆದುಕೊಳ್ಳಿ. ಅದಕ್ಕೆ ಆಲೂಗೆಡ್ಡೆ ಸ್ಟಫಿಂಗ್ ಹಾಗೂ ಮೊದಲೇ ಕತ್ತರಿಸಿಟ್ಟುಕೊಂಡ ಈರುಳ್ಳಿ ಸೇರಿಸಿ ಕೊನೆಯಲ್ಲಿ ಪಾನಿಯಲ್ಲಿ ಮುಳುಗಿಸಿಕೊಂಡು ಸವಿಯಿರಿ.












Click it and Unblock the Notifications