Masala Puri Recipe: ಮನೆಯಲ್ಲೇ ರುಚಿ-ರುಚಿಯಾದ ಮಸಾಲ ಪುರಿ ತಯಾರಿಸುವುದು ಹೇಗೆ..?
ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ಜನಪ್ರಿಯವಾಗಿರುವ ತಿನಿಸೆಂದರೆ ಅದು ಮಸಾಲಾ ಪುರಿ. ಒಂದು ರೀತಿಯ ಚಾಟ್ ಆಗಿರುವ ಮಸಾಲಾ ಪುರಿ ಬಹುತೇಕ ಎಲ್ಲರಿಗೂ ಪ್ರಿಯವಾಗಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದು ಎಲ್ಲರಿಗೂ ಪ್ರಿಯವಾಗಿರುತ್ತದೆ. ಬಾಯಿ ಚಪ್ಪರಿಸಿ ಮಸಾಲೆಯನ್ನು ಸವಿಯುತ್ತಾ ಪುರಿಯನ್ನು ತಿನ್ನುತ್ತಾರೆ.
ಬಾಯಿಗೆ ಅತ್ಯಂತ ರುಚಿಕರವಾಗಿರುವ ಮಸಾಲ ಪುರಿಯನ್ನು ಹೊರಗಡೆ ತಿನ್ನಲು, ಮಕ್ಕಳಿಗೆ ತಿನ್ನಲು ಕೊಡಿಸಲು ಅನೇಕರು ಭಯಪಡುತ್ತಾರೆ. ಹೀಗಾಗಿ ಮಸಾಲ ಪುರಿಯನ್ನು ಮನೆಯಲ್ಲೇ ತಯಾರಿಸಿ. ಮಸಾಲ ಪುರಿಯನ್ನು ಬಹಳ ಸರಳವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಮಸಾಲಾಪುರಿಗೆ ಬೇಕಾಗುವ ಸಾಮಾಗ್ರಿಗಳು
ಗರಿಗರಿಯಾದ ಪೂರಿ-20-25
ಸಣ್ಣದಾಗಿ ಹಚ್ಚಿದ 2 ದೊಡ್ಡ ಈರುಳ್ಳಿ
ಸಣ್ಣದಾಗಿ ಹಚ್ಚಿದ2 ದೊಡ್ಡ ಟೊಮೆಟೊ
ಕೊತ್ತಂಬರಿ ಸೊಪ್ಪು- 4 ಚಮಚ
ತೆಳುವಾದ ಸೆವ್- 4 ಚಮಚ
ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು
ಹಸಿರು ಬಟಾಣಿ-1/2 ಕಪ್
ಆಲೂಗಡ್ಡೆ-1/2 ಕಪ್
ಕ್ಯಾರೆಟ್-1/2 ಕಪ್
ಹಸಿರು ಮೆಣಸಿನಕಾಯಿ-1-2
ಕೊತ್ತಂಬರಿ ಸೊಪ್ಪು- 2 ಚಮಚ
ಪುದೀನಾ ಸೊಪ್ಪು-1 ಚಮಚ
ಕತ್ತರಿಸಿದ ಈರುಳ್ಳಿ -1
ಬೆಳ್ಳುಳ್ಳಿ-4-5 ದಳ
ಶುಂಠಿ
ಕತ್ತರಿಸಿದ ಟೊಮೆಟೊ- 1
ಕೆಂಪು ಮೆಣಸಿನ ಪುಡಿ-1/2 ಚಮಚ
ಪಾವ್ ಭಾಜಿ ಪುಡಿ-1 ಚಮಚ
ಗರಂ ಮಸಾಲಾ ಪುಡಿ-1/2 ಚಮಚ
ಚಾಟ್ ಮಸಾಲಾ-1/2 ಚಮಚ
ಅರಿಶಿನ ಪುಡಿ-ಒಂದು ದೊಡ್ಡ ಚಿಟಿಕೆ
ಉಪ್ಪು-ನಿಮ್ಮ ರುಚಿಗೆ ತಕ್ಕಂತೆ

ಮಸಾಲಾಪುರಿ ತಯಾರಿಸುವುದು ಹೇಗೆ..?
ಮಸಾಲಾ ಪುರಿ ತಯಾರಿಸಲು ಮೊದಲು ಹಸಿರು ಬಟಾಣಿಗಳನ್ನು ರಾತ್ರಿಯಿಡೀ ನೆನೆಸಿಡಿ. ಮೊದಲು ನಾವು ಗ್ರೇವಿಯನ್ನು ತಯಾರಿಸೋಣ ಹೀಗಾಗಿ
ಕುಕ್ಕರ್‌ನಲ್ಲಿ ನೆನೆಸಿದ ಹಸಿರು ಬಟಾಣಿ, ಸಿಪ್ಪೆ ಸುಲಿದ ಆಲೂಗಡ್ಡೆ ಮತ್ತು ಕ್ಯಾರೆಟ್ ತೆಗೆದುಕೊಳ್ಳಿ. ಅದಕ್ಕೆ ಬೇಕಾದ ನೀರು ಸೇರಿಸಿ ಬೇಯಿಸಿ.ಹಸಿರು ಬಟಾಣಿಯನ್ನು ಸರಿಯಾಗಿ ನೆನೆಸಿಟ್ಟರೆ ಕುಕ್ಕರ್ 2 -3 ಸೀಟಿಗಳನ್ನು ಮಾಡಿದರೆ ಸಾಕಾಗುತ್ತದೆ.
ಬಾಣಲೆಯಲ್ಲಿ ತೆಗೆದುಕೊಂಡು ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಮಧ್ಯಮ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ. ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು ಸೇರಿಸಿ. ಎಲೆಗಳು ಮೃದುವಾಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಸೇರಿಸಿ ಹುರಿಯಿರಿ ಎಲ್ಲವೂ ಒಂದು ಹಂತಕ್ಕೆ ಬೆಂದ ಮೇಲೆ ಸ್ಟವ್ ಆಫ್ ಮಾಡಿ.
ನಂತರ ಬೇಯಿಸಿದ ಕ್ಯಾರೆಟ್, ಆಲೂಗಡ್ಡೆ ಮತ್ತು 2 ಲ್ಯಾಡಲ್ ಪೂರ್ಣ ಹಸಿರು ಬಟಾಣಿಗಳನ್ನು ಪ್ಯಾನ್‌ಗೆ ಸೇರಿಸಿ, ಅದರಲ್ಲಿ ಹುರಿದ ಈರುಳ್ಳಿ ಮತ್ತು ಟೊಮೆಟೊವನ್ನು ಸೇರಿಸಿ. ಬಳಿಕ ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಬಳಸಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ ಕುದಿಯಲು ಇಡಿ. ಬಳಿಕ ಗರಂ ಮಸಾಲಾ, ಅರಿಶಿನ, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ ಮತ್ತು ಪಾವ್ ಭಾಜಿ ಮಸಾಲಾ ಎಲ್ಲವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಈ ಮಸಾಲೆ ಚೆನ್ನಾಗಿ ಕುದಿಸಿದ ಬಳಿಕ ಬೇಯಿಸಿದ ಉಳಿದ ಬಟಾಣಿಯನ್ನು ಈ ಮಸಾಲೆಗೆ ಸೇರಿಸಿ. ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹುಳಿ ಬೇಕಿದ್ದರೆ ಸೇರಿಸಿಕೊಳ್ಳಿ. ಇದು ಒಂದು ಕಡೆಯಲ್ಲಿ ಕುದಿಯುತ್ತಿರಲಿ. ಮತ್ತೊಂದು ಕಡೆಯಲ್ಲಿ ಒಂದು ತಟ್ಟೆಗೆ ಪೂರಿಗಳನ್ನು ಸೇರಿಸಿ ಅದರ ಮೇಲೆ ಮೊದಲೆ ತಯಾರಿಸಿಕೊಂಡ ಬಟಾಣಿ ಮಸಾಲೆ ಸೇರಿಸಿ. ಅದರ ಮೇಲೆ ಚಿಕ್ಕದಾಗಿ ಹಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಹಾಗೂ ಬೇಕಿದ್ದರೆ ಸೇವ್ ಸೇರಿಕೊಂಡರೆ ರುಚಿ-ರುಚಿಯಾದ ಮನೆಯಲ್ಲೇ ತಯಾರಿಸಿದ ಮಸಾಲ ಪುರಿ ಸಿದ್ಧವಾಗುತ್ತದೆ.












Click it and Unblock the Notifications