Avalakki Upkari: ಮಂಗಳೂರು ಶೈಲಿಯ ಅವಲಕ್ಕಿ ಉಪ್ಕರಿ ಮನೆಯಲ್ಲೇ ತಯಾರಿಸುವುದು ಹೇಗೆ..?
ಭಾರತದ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಅವಲಕ್ಕಿ ಕೂಡ ಒಂದು. ಬಹಳ ಸುಲಭವಾಗಿ ತಯಾರಿಸುವ ಅಲಕ್ಕಿಯ ಖಾದ್ಯಗಳು ತಿನ್ನಲು ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಬಳಿ ಅನ್ನಕ್ಕಿಂತಲೂ ಅವಲಕ್ಕಿ ತಿನ್ನುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಅವಲಕ್ಕಿ ಸುಲಭವಾಗಿ ಜೀರ್ಣವಾಗುತ್ತದೆ. ಹಾಗೂ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
ಅವಲಕ್ಕಿಯಲ್ಲಿ ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತದೆ. ಮಹಿಳೆಯರಿಗೆ ಕಾಣಿಸಿಕೊಳ್ಳುವ ರಕ್ತ ಹೀನತೆ ಕಡಿಮೆ ಮಾಡಲು ಅವಲಕ್ಕಿ ಸೇವನೆ ಉತ್ತಮ. ಅವಲಕ್ಕಿ ತಿನ್ನುವುದರಿಂದ ಕರುಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ. ಅವಲಕ್ಕಿಯಲ್ಲಿ 70% ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಮತ್ತು 30 % ಕೊಬ್ಬು ಇರುತ್ತದೆ. ಇಂತಹ ಆರೋಗ್ಯಕರವಾದ ಅವಲಕ್ಕಿಯನ್ನು ಆಗಾಗ ತಿನ್ನುವುದು ಉತ್ತಮ. ಹೀಗಾಗಿ ಮನೆಯಲ್ಲೇ ಸರಳವಾಗಿ ಮಾಡಬಹುದಾದ ಅವಲಕ್ಕಿ ಉಪ್ಕರಿ ತಯಾರಿಸುವ ವಿಧಾನ ಇಲ್ಲಿದೆ.

ಅವಲಕ್ಕಿ ಉಪ್ಕರಿಗೆ ಬೇಕಾಗುವ ಸಾಮಾಗ್ರಿಗಳು
ತೆಳುವಾದ ಅವಲಕ್ಕಿ-2ರಿಂದ3 ಕಪ್
ತುರಿದ ತೆಂಗಿನಕಾಯಿ-1/2 ಕಪ್
ಬೆಲ್ಲ-2-3 ಚಮಚ
ರಸಂ ಪುಡಿ-2 ಚಮಚ
ಉಪ್ಪು-ನಿಮ್ಮ ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
ಸಾಸಿವೆ-1/2 ಚಮಚ
ಉದ್ದಿನ ಬೇಳೆ- 1/2 ಚಮಚ
ಕೆಂಪು ಮೆಣಸಿನಕಾಯಿ-1
ಕರಿಬೇವಿನ ಎಲೆ-4-5
ತೆಂಗಿನ ಎಣ್ಣೆ ಅಥವಾ ಅಡುಗೆ ಎಣ್ಣೆ-2 ಚಮಚ

ಅವಲಕ್ಕಿ ಉಪ್ಕರಿ ಮಾಡುವ ವಿಧಾನ
ಮೊದಲು ಅಗಲವಾದ ಬಟ್ಟಲಿನಲ್ಲಿ ತೆಂಗಿನ ತುರಿ, ಬೆಲ್ಲ ಮತ್ತು ಉಪ್ಪನ್ನು ತೆಗೆದುಕೊಳ್ಳಿ, ಬಳಿಕ ರಸಂ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಳ್ಳಗಿನ ಅವಲಕ್ಕಿಯನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅವಲಕ್ಕಿ ಸಂಪೂರ್ಣವಾಗಿ ಮಿಕ್ಸ್ ಆಗಬೇಕು. ಮೊದಲು ತಯಾರಿಸಿಕೊಂಡ ಮಸಾಲೆ ಚೆನ್ನಾಗಿ ಅವಲಕ್ಕಿಗೆ ಹಿಡಿಯಬೇಕು. ಹೀಗಾಗಿ ಐದರಿಂದ ಹತ್ತು ನಿಮಿಷಗಳ ಕಾಲ ಬಿಡಿ.
ಈಗ ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಸಿದ್ಧಮಾಡಿಕೊಳ್ಳಿ. ಈ ಬಿಸಿಬಿಸಿಯಾದ ಒಗ್ಗರಣೆಯನ್ನು ಮೊದಲೇ ತಯಾರಿಸಿಕೊಂಡ ಅವಲಕ್ಕಿ ಮೇಲೆ ಸುರಿಯಿರಿ. ಒಗ್ಗರಣೆ ಹಾಗೂ ಅವಲಕ್ಕಿಯನ್ನು ಮಿಶ್ರಣ ಮಾಡಿದರೆ ರುಚಿ ರುಚಿಯಾದ ಮಂಗಳೂರು ಶೈಲಿಯ ಅವಲಕ್ಕಿ ಉಪ್ಕರಿ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications