ಮಾಡುವ ಕೆಲಸದಲ್ಲಿ ‘ಯಶಸ್ಸು’ ಕಾಣುವುದು ಹೇಗೆ?
ಯಶಸ್ಸು ಎನ್ನುವುದು ಬಹಳಷ್ಟು ಜನರ ಪಾಲಿಗೆ ಮರೀಚಿಕೆಯಾಗಿಯೇ ಉಳಿದು ಹೋಗಿದೆ. ಏನೇ ಕೆಲಸ ಮಾಡಿದರೂ ಅದು ಫಲಪ್ರದವಾಗದ ಕಾರಣದಿಂದಾಗಿ ಅಯ್ಯೋ ನಮ್ಮ ಹಣೆ ಬರಹವೇ ಇಷ್ಟು ಎಂಬಂತೆ ನಮಗೆ ನಾವೇ ಹಿಡಿಶಾಪ ಹಾಕಿಕೊಳ್ಳುತ್ತೇವೆ. ಇದು ಒಬ್ಬರ ಇಬ್ಬರ ಕಥೆಯಲ್ಲ. ಹೆಚ್ಚಿನ ಜನರು ಇಂತಹದೊಂದು ಸಮಸ್ಯೆಯಿಂದ ನರಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಆರಕ್ಕೇರದೆ ಮೂರಕ್ಕಿಳಿಯದೆ ಬದುಕನ್ನು ಸವೆಸಿ ಬಿಡುತ್ತಾರೆ.
ಕೆಲವರು ಯಶಸ್ಸಿಗಾಗಿ ಕೆಲಸ ಮಾಡುತ್ತಾರೆ. ಅದು ದಕ್ಕದೆ ಹೋದಾಗ ಖಿನ್ನತೆಗೆ ಒಳಗಾಗಿ ಬಿಡುತ್ತಾರೆ. ನಮ್ಮ ಬದುಕೇ ಮುಗಿದು ಹೋಯಿತು ಎಂದು ಕೈಚೆಲ್ಲಿ ಕುಳಿತು ಬಿಡುತ್ತಾರೆ. ಇವತ್ತಿನ ಹೆಚ್ಚಿನ ಜನರಿಗೆ ಇವತ್ತು ಕೆಲಸ ಮಾಡಿ ನಾಳೆಯೇ ಯಶಸ್ಸಿನ ಮೆಟ್ಟಿಲೇರಿ ಬಿಡಬೇಕೆನ್ನುವ ಆತುರತೆ ಇರುತ್ತದೆ. ಅಷ್ಟೇ ಅಲ್ಲದೆ ಯಶಸ್ಸಿಗಾಗಿಯೇ ಕೆಲಸ ಮಾಡುತ್ತಾರೆ. ಇಷ್ಟಕ್ಕೂ ಯಶಸ್ಸು ಎನ್ನುವುದೇನು ಎಂಬುದೇ ಅರ್ಥವಾಗಿರುವುದಿಲ್ಲ.

ಯಶಸ್ಸು ಎನ್ನುವುದು ನಾವು ಮಾಡುವ ಕೆಲಸದಲ್ಲಿ ಮಾತ್ರವಿಲ್ಲ. ಅದು ಎಲ್ಲದರಲ್ಲೂ ಇದೆ. ನಾವು ಮೊದಲಿಗೆ ನಮ್ಮ ಬದಕನ್ನು ರೂಢಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣಬೇಕಾಗುತ್ತದೆ. ನಮ್ಮ ಸಂಸಾರವನ್ನು ಮೊದಲು ನೆಟ್ಟಗಿಟ್ಟು ಅದನ್ನು ಯಶಸ್ಸು ಕಾಣಬೇಕು. ಮೊದಲಿಗೆ ಮನೆಯಲ್ಲಿ ಸಂಸಾರಿಕ ಬದುಕು ಚೆನ್ನಾಗಿದ್ದು ನೆಮ್ಮದಿ, ಖುಷಿ, ಸಂತಸ ನೆಲೆಯೂರಿದ್ದರೆ ಅಂಥವರು ಹೊರಗೆ ತಮ್ಮ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಾನಸಿಕ ನೆಮ್ಮದಿಯೊಂದಿಗೆ ಮಾಡುವ ಕೆಲಸದಲ್ಲಿ ನೂರಕ್ಕೆ ನೂರರಷ್ಟು ಶ್ರಮ ವಹಿಸಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ಯಶಸ್ಸು ಶ್ರಮ ಪಡೆದೆ ಸಿಗುವುದಿಲ್ಲ
ಬದುಕಿನಲ್ಲಿ ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಯಶಸ್ಸು ಕಂಡಿರುತ್ತಾರೆ. ಆದರೆ ಆ ಯಶಸ್ಸಿಗಾಗಿ ಅವರು ಎಷ್ಟೊಂದು ಶ್ರಮಪಟ್ಟಿರುತ್ತಾರೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತದೆ. ಅವರು ಆ ಒಂದು ಯಶಸ್ಸಿಗಾಗಿ ರಾತ್ರಿ ಹಗಲು ಎನ್ನದೆ ದುಡಿದಿರುತ್ತಾರೆ. ನಿದ್ದೆಗೆಟ್ಟು ಕೆಲಸ ಮಾಡಿರುತ್ತಾರೆ. ಅದೆಷ್ಟೋ ನಷ್ಟ ಮಾಡಿಕೊಂಡಿರುತ್ತಾರೆ. ಅವಮಾನ ಸಹಿಸಿಕೊಂಡಿರುತ್ತಾರೆ. ಕಷ್ಟದ ಮೇಲೆ ಕಷ್ಟವನ್ನು ಅನುಭವಿಸಿರುತ್ತಾರೆ. ಅದೆಲ್ಲದರ ಫಲವಾಗಿ ಅವರು ಸಾಧನೆಯ ಮೆಟ್ಟಿಲೇರಿರುತ್ತಾರೆ. ಒಂದೇ ಕ್ಷೇತ್ರದಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದರೂ ಯಾರೋ ಒಬ್ಬರು ಸಾಧಕನಾಗಿ ಜಗತ್ತಿಗೆ ಗೋಚರಿಸಬಹುದು. ಉಳಿದವರು ಅದೇ ಕೆಲಸ ಮಾಡಿದರೂ ಎಲೆ ಮರೆಯ ಕಾಯಿಯಂತೆ ಉಳಿದು ಹೋಗಬಹುದು. ಇಲ್ಲಿ ಯಶಸ್ಸು ಎನ್ನುವುದು ಲೋಕದ ಮುಂದೆ ಕಾಣಿಸಿಕೊಳ್ಳುವುದಲ್ಲ.
ತಾವು ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕಿ ನೆಮ್ಮದಿಯಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿದೆ ಎಂಬ ಭಾವ ಮೂಡಿತೆಂದರೆ ಅದೇ ಯಶಸ್ಸು. ಅದರಾಚೆಗೆ ಇನ್ನೇನು ಬೇಕು? ಆದರೆ ಆಸ್ತಿ ಮಾಡುವುದು, ದುಬಾರಿ ಕಾರು ಖರೀದಿಸುವುದು ಶ್ರೀಮಂತರಾಗಿ ಬದುಕುವುದು ಯಶಸ್ಸು ಎಂಬ ತಪ್ಪು ಕಲ್ಪನೆ ಇಲ್ಲದಿಲ್ಲ. ನಾವು ಮಾಡುವ ಕೆಲಸ, ವ್ಯಾಪಾರ, ಉದ್ಯಮ ಹೀಗೆ ಯಾವುದೇ ಆಗಿರಲಿ ಅದು ಯಶಸ್ವಿ ಆಯಿತೆಂದರೆ ಉಳಿದ ಎಲ್ಲ ಶ್ರೀಮಂತಿಕೆ ಸುತ್ತುವರಿದುಕೊಂಡು ಬಿಡುತ್ತದೆ. ಆದರೆ ಬಂದ ಯಶಸ್ಸನ್ನು ಉಳಿಸಿಕೊಳ್ಳುವುದೇ ಬಹುಕಷ್ಟ. ಯಶಸ್ಸು ಪಡೆಯಲು ನಾವೆಷ್ಟು ಕಷ್ಟಪಟ್ಟಿದ್ದೇವೋ ಅಷ್ಟೇ ಕಷ್ಟ ಯಶಸ್ಸನ್ನು ಉಳಿಸಿಕೊಂಡು ಮುನ್ನಡೆಯಲು ಪಡಬೇಕಾಗುತ್ತದೆ.

ಯಶಸ್ಸನ್ನು ಹುಡುಕಿಕೊಂಡು ಹೋದರೆ ದಕ್ಕಲ್ಲ
ಇಲ್ಲಿ ಸ್ವಲ್ಪ ಎಡವಿದರೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಾವೆಲ್ಲರೂ ಏನೂ ಇಲ್ಲದವವರು ಏನೇನೋ ಆಗಿರುವುದನ್ನು ನೋಡಿದ್ದೇವೆ. ಹಾಗೆಯೇ ಯಶಸ್ಸಿನ ಉತ್ತುಂಗದಲ್ಲಿದ್ದವರು ಕೆಳಕ್ಕೆ ಬಿದ್ದಿದ್ದನ್ನು ನೋಡಿದ್ದೇವೆ. ಹೀಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ಬದುಕನ್ನು ನಡೆಸುವುದು ಅಷ್ಟು ಸುಲಭವಲ್ಲ ಅದೊಂಥರಾ ನಿತ್ಯದ ತಪಸ್ಸು ಎಂದರೂ ತಪ್ಪಾಗಲಾರದು. ನಿಜವಾದ ಯಶಸ್ವಿ ಪುರುಷ ಅಥವಾ ಮಹಿಳೆಯರಿಗೆ ನಾವು ಯಶಸ್ಸು ಸಾಧಿಸಿದ್ದೇವೆ. ನಾವೊಬ್ಬ ಸಾಧಕರು ಎಂಬುದೇ ಗೊತ್ತಿರುವುದಿಲ್ಲ. ಅವರ ಪಾಲಿಗೆ ಅದು ನಿತ್ಯವೂ ಮಾಡುವ ಕೆಲಸವಷ್ಟೆ ಅದರಲ್ಲಿ ಅವರಿಗೆ ಹೆಚ್ಚುಗಾರಿಕೆ ಇರುವುದಿಲ್ಲ. ಅದನ್ನು ಹೊರಗಿನಿಂದ ನೋಡುವ ನಮಗೆ ಅದೊಂದು ಸಾಧನೆ ಎಂಬಂತೆ ಗೋಚರಿಸುತ್ತದೆ. ಇದುವೇ ನಿಜವಾದ ಯಶಸ್ಸು.
ಇವತ್ತು ಸಾಧಕರಿಂದ ಅರ್ಜಿ ಕರೆದು ಪ್ರಶಸ್ತಿ ಕೊಡುವ ರೂಢಿಯಿದೆ. ಪ್ರಶಸ್ತಿಯಲ್ಲಿ ಗೌರವ ಮತ್ತು ಅದು ತಂದು ಕೊಡುವ ಲಾಭದ ಕಾರಣಕ್ಕಾಗಿ ಲಕ್ಷಾಂತರ ಜನರು ಪ್ರಶಸ್ತಿಗೆ ಅರ್ಜಿ ಹಾಕಿಸಿ ಶಿಫಾರಸ್ಸು ಮಾಡುವುದು ನಡೆಯುತ್ತದೆ. ಪ್ರಶಸ್ತಿಗಾಗಿ ಮುಗಿಬೀಳುವವರನ್ನು ಸಾಧಕರು ಎಂದು ಹೇಳಲು ಸಾಧ್ಯನಾ? ನಿಜವಾದ ಸಾಧಕರನ್ನು ಪ್ರಶಸ್ತಿಯೇ ಹುಡುಕಿಕೊಂಡು ಹೋಗುತ್ತದೆ. ಇಂತಹ ಸಾಧಕರು ನಮ್ಮ ಮುಂದೆ ಬಹಳಷ್ಟು ಜನರಿದ್ದಾರೆ. ಅಂತಹ ಸಾಧಕರಿಗೆ ಪ್ರಶಸ್ತಿಗೆ ಗೌರವ ಬರುತ್ತದೆ. ಯಾರು ಏನು ಕೆಲಸ ಮಾಡುತ್ತಿದ್ದಾರೋ ಅದನ್ನು ಶೃದ್ಧೆಯಿಂದ ಮಾಡಬೇಕು. ಅಷ್ಟೇ ಅಲ್ಲದೆ ಮಾಡುವ ಕೆಲಸವೂ ನ್ಯಾಯಮಾರ್ಗದಲ್ಲಿರ ಬೇಕು. ಹಾಗಿದ್ದರೆ ಖಂಡಿತಾ ಒಂದಲ್ಲ ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ. ನೆನಪಿರಲಿ ಯಶಸ್ಸನ್ನು ಹುಡುಕಿಕೊಂಡು ಹೋಗಬೇಡಿ.. ಅದೇ ಹುಡುಕಿಕೊಂಡು ಬರುವಂತೆ ಮಾಡಿ ಅದೇ ಬದುಕಿನ ಯಶಸ್ಸು.












Click it and Unblock the Notifications