ಹಬ್ಬ ಮುಗಿತಾ? ಪೂಜಾ ಸಾಮಾಗ್ರಿಗಳನ್ನು ಸ್ವಚ್ಚಗೊಳಿಸುವುದು ಕಷ್ಟನಾ? ಇಲ್ಲಿದೆ ಸರಳ ಸಲಹೆಗಳು...
ದೀಪಾವಳಿ ಹಬ್ಬ ಮುಗಿತು. ಹಬ್ಬ ಆರಂಭದಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುವುದು ಬಳಿಕ ಅವುಗಳನ್ನು ಸ್ವಚ್ಚಗೊಳಿಸಿ ಒಂದೆಡೆ ಭದ್ರವಾಗಿಡುವುದು ಒಂದು ಸವಾಲಿನ ಕೆಲಸ. ಹಬ್ಬದ ಬಳಿಕ ಎಲ್ಲಾ ದೇವರ ವಿಗ್ರಹಗಳು ವಿಶೇಷವಾಗಿ ಬೆಳ್ಳಿಯ ವಿಗ್ರಹಗಳನ್ನು ಹಾಗೂ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವುದು ಒಂದು ಪ್ರಮುಖ ವಿಷಯವಾಗಿದೆ.
ಆದರೆ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಏಕೆಂದರೆ ಇವು ಕಾಲಾನಂತರದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕೆಲ ದಿನಗಳು ಕಳೆದರೆ ಅದನ್ನು ಸ್ವಚ್ಚಗೊಳಿಸುವುದು ಇನ್ನೂ ಕಷ್ಟವೇ. ಹೀಗಾಗಿ ಕೆಲವು ಸರಳ ಸಲಹೆಗಳನ್ನು ಬಳಸಿಕೊಂಡು ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಸ್ವಚ್ಚಗೊಳಿಸುವುದು ಹೇಗೆ? ಹಾಗೆ ಅದರ ಹೊಳಪು ಮಾಸದಂತೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಅಡಿಗೆ ಸೋಡಾ ಮತ್ತು ಅಲ್ಯೂಮಿನಿಯಂ ಫಾಯಿಲ್
ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಅಲ್ಯೂಮಿನಿಯಂ ಫಾಯಿಲ್ ಇದ್ದೇ ಇರುತ್ತದೆ. ಬೆಳ್ಳಿಯ ಪ್ರತಿಮೆಗಳನ್ನು ಸ್ವಚ್ಛಗೊಳಿಸಲು ಅಲ್ಯೂಮಿನಿಯಂ ಫಾಯಿಲ್ ಬಳಸಬಹುದು. ಮೊದಲಿಗೆ ಸ್ವಚ್ಚಗೊಳಿಸುವ ವಿಗ್ರಹವನ್ನು ತೆಗೆದುಕೊಳ್ಳಿ. ಬೆಳ್ಳಿಯ ಪ್ರತಿಮೆಯನ್ನು ಅಲ್ಯೂಮಿನಿಯಂ ಫಾಯಿಲ್ ಮೇಲೆ ಇರಿಸಿ. ಬೆಳ್ಳಿಯ ವಿಗ್ರಹದ ಮೇಲೆ ಅಡಿಗೆ ಸೋಡಾವನ್ನು ಸಮವಾಗಿ ಸಿಂಪಡಿಸಿ ಮತ್ತು ವಿಗ್ರಹದ ಮೇಲೆ ಕುದಿಯುವ ನೀರನ್ನು ಹಾಕಿ. ಇದು ಅಡಿಗೆ ಸೋಡಾ ಮತ್ತು ಅಲ್ಯೂಮಿನಿಯಂ ಫಾಯಿಲ್ನೊಂದಿಗೆ ರಾಸಾಯನಿಕ ಕ್ರಿಯೆಗೆ ಕಾರಣವಾಗುತ್ತದೆ. ಪ್ರತಿಮೆಯನ್ನು ಅದರಲ್ಲಿ ಕೆಲವು ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ನೀರಿನಿಂದ ಎಚ್ಚರಿಕೆಯಿಂದ ಸ್ವಚ್ಚಗೊಳಿಸಿ.
ನಿಂಬೆ ಮತ್ತು ಉಪ್ಪು
ನಿಂಬೆ ಮತ್ತು ಉಪ್ಪು ಇಲ್ಲದ ಅಡುಗೆ ಮನೆ ಇರಲು ಸಾಧ್ಯವೇ ಇಲ್ಲ.ಬೆಳ್ಳಿಯ ವಿಗ್ರಹಗಳನ್ನು ಸ್ವಚ್ಚಗೊಳಿಸಲು ನಿಂಬೆ ಮತ್ತು ಉಪ್ಪುಗಿಂತ ಬೇರೇನು ಬೇಕಿಲ್ಲ. ಇದರಿಂದ ಸುಲಭವಾಗಿ ಸಾಮಾಗ್ರಿಗಳನ್ನು ಸ್ವಚ್ಚಗೊಳಿಸಬಹುದು. ನಿಂಬೆಯನ್ನು ಅರ್ಧದಷ್ಟು ಕತ್ತರಿಸಿ ಅದರ ಮೇಲೆ ಅರ್ಧದಷ್ಟು ಉಪ್ಪು ಹಾಕಿ. ಇದನ್ನು ಬೆಳ್ಳಿಯ ಪ್ರತಿಮೆಯ ಮೇಲೆ ಉಜ್ಜಿ. ಕೊಳೆ ಹೋಗುವವರೆಗೂ ಅದರಿಂದ ನಿಧಾನವಾಗೊ ಉಜ್ಜಿ. ಬಳಿಕ ಪ್ರತಿಮೆಯನ್ನು ನೀರಿನಿಂದ ತೊಳೆಯಿರಿ. ಬಳಿಕ ಮೃದುವಾದ ಬಟ್ಟೆಯಿಂದ ಅದನ್ನು ಒರೆಸಿ ಒಣಗಿಸಿ. ಇದರಿಂದ ಮೂರ್ತಿಯು ಹೊಳೆಯುತ್ತದೆ.
ಉಪ್ಪು ಮತ್ತು ವಿನೆಗರ್
ಬೆಳ್ಳಿಯ ಪ್ರತಿಮೆಗಳನ್ನು ಸ್ವಚ್ಛಗೊಳಿಸಲು ಮತ್ತೊಂದು ಸರಳ ವಿಧಾನವೆಂದರೆ ಒಂದು ಬಟ್ಟಲಿನಲ್ಲಿ 1/2 ಕಪ್ ಬಿಳಿ ವಿನೆಗರ್ ಮತ್ತು 2 ಟೇಬಲ್ಸ್ಪೂನ್ ಉಪ್ಪಿನ್ನು ಬಳಸಿ. ಬಳಿಕ ನಿಮ್ಮ ಬೆಳ್ಳಿಯ ವಿಗ್ರಹವನ್ನು ಬಟ್ಟಲಿನಲ್ಲಿ ಇರಿಸಿ ಮತ್ತು ಅದು ಸಂಪೂರ್ಣವಾಗಿ ಮುಳುಗಿಸಿ. ಎರಡು ಗಂಟೆಗಳ ಕಾಲ ಅದನ್ನು ಬಿಡಿ. ಬಳಿಕ ಮಿಶ್ರಣದಿಂದ ವಿಗ್ರಹವನ್ನು ತೆಗೆಯಿರಿ. ನೀರಿನಿಂದ ತೊಳೆಯಿರಿ. ಒಣಗಿಸಿ ಮತ್ತು ಮೃದುವಾದ ಬಟ್ಟೆಯಿಂದ ಒರೆಸಿ.
ಟೂತ್ ಪೇಸ್ಟ್
ಟೂತ್ ಪೇಸ್ಟ್ ನಿಂದಲೂ ಬೆಳ್ಳಿ ಸಾಮಾಗ್ರಿಗಳನ್ನು ಸ್ವಚ್ಗೊಳಿಸಬಹುದು. ಇದು ವಿಚಿತ್ರವೆನಿಸಬಹುದು. ಆದರೆ ಬೆಳ್ಳಿಯ ವಸ್ತುಗಳು ಮತ್ತು ವಿಗ್ರಹಗಳನ್ನು ಸ್ವಚ್ಛಗೊಳಿಸಲು ಇದು ಅದ್ಭುತ ಮತ್ತು ಸರಳವಾದ ಮಾರ್ಗವಾಗಿದೆ. ಟೂತ್‌ಪೇಸ್ಟ್ ಅನ್ನು ಮೃದುವಾದ, ಒದ್ದೆಯಾದ ಬಟ್ಟೆ ಅಥವಾ ಮೃದುವಾದ ಬ್ರಷ್‌ಗೆ ಅನ್ವಯಿಸಿ. ಬೆಳ್ಳಿಯ ಪ್ರತಿಮೆಯಲ್ಲಿ ಕೊಳೆಯಿರುವ ಪ್ರದೇಶಗಳಲ್ಲಿ ಟೂತ್ಪೇಸ್ಟ್ ಅನ್ನು ನಿಧಾನವಾಗಿ ಉಜ್ಜಿ. ವಿಗ್ರಹವನ್ನು ನೀರಿನಿಂದ ತೊಳೆಯಿರಿ. ಮೃದುವಾದ ಬಟ್ಟೆಯಿಂದ ಒರೆಸಿ ಒಣಗಿಸಿ. ಹೀಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಚಗೊಳಿಸಬಹುದು.











Click it and Unblock the Notifications