Summer Days: ಮೈಸುಡುವ ಬಿಸಿಲಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಜೀವನ ಶೈಲಿ ಹೇಗಿರಬೇಕು?
ಈಗ ಬೇಸಿಗೆಯ ದಿನಗಳು ಆರಂಭವಾಗಿವೆ ಹೀಗಾಗಿ ಆರೋಗ್ಯದತ್ತ ಕಾಳಜಿ ವಹಿಸುವುದು ಅಗತ್ಯವಾಗಿದೆ. ಬೇಸಿಗೆಯ ದಿನಗಳಲ್ಲಿ ಒಂದಷ್ಟು ಎಚ್ಚರಿಕೆಯನ್ನು ವಹಿಸಿದರೆ ಕಾಡುವ ಕೆಲವೊಂದು ಸಾಂಕ್ರಾಮಿಕ ರೋಗಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಒಂದು ಕಡೆ ತಲೆಸುಡುವ ಬಿಸಿಲು, ಸಾರ್ವಜನಿಕ ಕಾರ್ಯಕ್ರಮಗಳು, ಜಾತ್ರೆಗಳು ಹೀಗೆ ವಿವಿಧ ಸಮಾರಂಭಗಳು ನಡೆಯಲಿರುವುದರಿಂದ ತುಂಬಾ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಸುಡುವ ಬಿಸಿಲಿಗೆ ಸದಾ ನೆರಳು ಬಯಸುವುದು, ಫ್ಯಾನ್ ಕೆಳಗೆ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡಬೇಕೆನಿಸುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಬೇಸಿಗೆಯಲ್ಲಿ ಬಿಸಿಲಿನೊಂದಿಗೆ ಬದುಕುವುದು ಅನಿವಾರ್ಯವಾಗಿದೆ. ಆದ್ದರಿಂದ ಏನು ಮಾಡಬೇಕು ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಲೈಫ್ ಸ್ಟೈಲ್ ಗಳನ್ನು ಬದಲಾಯಿಸಿಕೊಂಡು ಜೀವನ ನಡೆಸಬೇಕು.

ಬೇಸಿಗೆಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗಲಿದೆ. ಬೇಸಿಗೆ ದಿನಗಳಲ್ಲಿ ಒಂದು ಕಡೆ ಬಿಸಿಲ ಝಳವಾದರೆ ಮತ್ತೊಂದೆಡೆ ಆ ಬಿಸಿಲಲ್ಲೇ ಜಾತ್ರೆ, ಹಬ್ಬ, ಶುಭ ಸಮಾರಂಭಗಳನ್ನು ಕಳೆಯಬೇಕಾಗಿದೆ. ಜೊತೆಗೆ ನಿತ್ಯದ ಕೆಲಸಗಳನ್ನು ಮಾಡಬೇಕಾಗಿದೆ. ಯಾವುದನ್ನು ನಿಲ್ಲಿಸಿ ನೆರಳಿನಲ್ಲಿ ತಣ್ಣಗೆ ಕೂರುವಂತಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಬಿಸಿಲಿನಿಂದ ಆಗಬಹುದಾದ ಸಮಸ್ಯೆಗಳನ್ನು ನಿಭಾಯಿಸಲು ಕೆಲವೊಂದು ಸರಳ ಕ್ರಮಗಳನ್ನು ಕೈಗೊಳ್ಳುವುದು ಬಹಳ ಅಗತ್ಯವಾಗಿದೆ.
ಬೇಸಿಗೆಯಲ್ಲಿ ಏನೇನು ಮಾಡಬೇಕು?
ಬೇಸಿಗೆಯಲ್ಲಿ ನಾವು ಏನೆಲ್ಲ ಪಾಲನೆ ಮಾಡಬೇಕು ಎಂಬುದನ್ನು ನೋಡುವುದಾದರೆ, ವೈಯಕ್ತಿಕ ಸ್ವಚ್ಛತೆ ಜತೆಗೆ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ನಗರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಕೊಳಚೆ ನೀರು ನಿಂತು ಅಲ್ಲಿ ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗ ಬಹುದು.

ಈ ಸೊಳ್ಳೆಗಳು ಸೋಂಕು ಹರಡುವ ಮೂಲಕ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ಮನೆ ಸುತ್ತಮುತ್ತ ತ್ಯಾಜ್ಯ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸ್ವಚ್ಛತೆಯತ್ತ ಗಮನಹರಿಸಬೇಕು. ಬೆಳಗ್ಗಿನಿಂದಲೇ ಬಿಸಿಲಿನ ಧಗೆ ಕೆಲಸ ಮಾಡುವವರಿಗೆ ಸುಸ್ತು ಹೊಡೆಸಬಹುದು.
ತೆಳುವಾದ ಬಟ್ಟೆ ಧರಿಸುವುದು ಉತ್ತಮ
ಇನ್ನು ಮಧ್ಯಾಹ್ನ ಸುಡುವ ಬಿಸಿಲಿಗೆ ಮೈಯೊಡ್ಡುವುದು ಕಷ್ಟವೇ.. ಆದರೂ ನಾವು ಸುಮ್ಮನಿರೋಕೆ ಆಗಲ್ಲ. ತಮ್ಮ ದೈನಂದಿನ ಕೆಲಸಗಳನ್ನು ಮಾಡಲೇ ಬೇಕಾಗಿದೆ. ಆದ್ದರಿಂದ ಒಂದಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬೇಸಿಗೆಯನ್ನು ಕಳೆಯಲು ನಾವು ಮುಂದಾಗಬೇಕಾಗುತ್ತದೆ. ಮನೆಯಿಂದ ಹೊರಗೆ ಹೋದಾಗ ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸಬಹುದು.

ಇಷ್ಟೇ ಅಲ್ಲದೆ, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಹೋಗುವಾಗ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಆದರೆಕಾಫಿ ಟೀ ಸೇವನೆ ಆದಷ್ಟು ಕಡಿಮೆ ಮಾಡಬೇಕು.
ಕಾರ್ಬೋನೇಟೆಡ್ ಪಾನೀಯ ತ್ಯಜಿಸಿ
ಮಾರುಕಟ್ಟೆಯಲ್ಲಿ ಸಿಗುವ ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಿ ಆಗಾಗ್ಗೆ ಶುದ್ಧವಾದ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್, ಎಳನೀರು ಸೇರಿದಂತೆ ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಶೂ ಧರಿಸುವುದರಿಂದ ಕಾಲು ಬೆವರಿ ದುರ್ವಾಸನೆ ಬೀರಬಹುದು. ಆದ್ದರಿಂದ ಸಾಕ್ಸ್ ಗಳನ್ನು ಒಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು, ಗಾಳಿಯಾಡುವಂತಹ ಪಾದರಕ್ಷೆ ಧರಿಸಿದರೆ ಉತ್ತಮ.

ಸಿಕ್ಕ, ಸಿಕ್ಕಲ್ಲಿ ಆಹಾರ ಪದಾರ್ಥಗಳನ್ನು ಸೇವಿಸದೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮನೆಗೆ ಸರಬರಾಜಾಗಾಗುವ ನೀರನ್ನು ನೇರವಾಗಿ ಉಪಯೋಗಿಸದೆ ಕುದಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿದರೆ ಉತ್ತಮ. ಕೆಲವೊಮ್ಮೆ ಬಿಸಿಲಿಗೆ ದೇಹದ ಉಷ್ಣಾಂಶ ಹೆಚ್ಚಾಗಿ ಇದ್ದಕ್ಕಿದ್ದಂತೆ ತೊಂದರೆಯೂ ಕಾಣಿಸಬಹುದು.
ಬಿಸಿಲಿನ ಸಮಸ್ಯೆಗೆ ಏನು ಮಾಡಬೇಕು?
ಕೆಲವೊಮ್ಮೆ ಯಾರಾದರೂ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅಂತಹವರನ್ನು ನೆರಳಿನ ಪ್ರದೇಶಕ್ಕೆ ಕರೆದೊಯ್ದು ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು) ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು.
ಬಿಸಿಲಿನ ಆಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಾಗಿ ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡುವ ಮೂಲಕ ಆರೈಕೆ ಮಾಡಬೇಕು.
ಜತೆಯಲ್ಲಿಯೇ ನೀರಿಟ್ಟುಕೊಳ್ಳಬೇಕು
ಬೇಸಿಗೆಯಲ್ಲಿ ಪ್ರವಾಸ ತೆರಳುವುದು, ಶುಭಸಮಾರಂಭ, ಇತರೆ ಕಾರ್ಯಕ್ರಮಗಳು, ಕೆಲಸದ ನಿಮಿತ್ತ ಪ್ರಯಾಣ ಹೀಗೆ ಹೋಗುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ಮರೆಯಬಾರದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು.












Click it and Unblock the Notifications