E-Cigarette: ಕ್ಯಾನ್ಸರ್‌ಗೆ ರಹದಾರಿಯಾಗಿರುವ ಇ-ಸಿಗರೇಟ್‌ನತ್ತ ಎಚ್ಚರವಿರಲಿ!
ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಹೀಗಿದ್ದರೂ ಸಿಗರೇಟ್ ಸೇವನೆಯನ್ನು ನಿಲ್ಲಿಸಿರುವುದು ಕಾಣಿಸುತ್ತಿಲ್ಲ. ಆದರೆ ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿ ಅದರ ಜತೆಗೆ ಇ ಸಿಗರೇಟ್ ಸೇವನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಇ ಸಿಗರೇಟ್ ನ ದಾಸರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಇನ್ನು ಇ ಸಿಗರೇಟ್ ಕುರಿತಂತೆ ವೈದ್ಯರು ಏನು ಹೇಳುತ್ತಾರೆ ಎನ್ನುವುದನ್ನು ನೋಡಿದ್ದೇ ಆದರೆ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಶ್ರೀನಿವಾಸ್ ಕೆ.ಜಿ ಅವರ ಪ್ರಕಾರ ಇ ಸಿಗರೇಟ್ ಸೇವನೆಯಿಂದ ಶೇ. 90ರಷ್ಟು ಶ್ವಾಸಕೋಶ ಕ್ಯಾನ್ಸರ್ ಬರುವ ಅಪಾಯವಿದೆ. ಬಾಯಿ, ಮೂಗು, ಗಂಟಲು, ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಗಳಿಗೂ ಇದು ದಾರಿ ಮಾಡಿಕೊಡಬಹುದು. ಅನ್ನನಾಳ, ಯಕೃತ್ತು, ಮೂತ್ರಕೋಶ, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿ, ಕೊಲೊನ್, ಗುದನಾಳ, ಗರ್ಭಕಂಠ, ಹೊಟ್ಟೆ, ರಕ್ತ, ಮೂಳೆ ಮಜ್ಜೆ, ಹೀಗೆ ದೇಹದ ಯಾವುದೇ ಭಾಗದ ಕ್ಯಾನ್ಸರ್‌ಗೆ ಇದು ಕಾರಣವಾಗಬಹುದಂತೆ.

ಸಿಗಾರ್ ಅಥವಾ ಪೈಪ್ ಗಳಂತಹ ಯಾವುದೇ ರೂಪದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವುದು ಕೂಡಾ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಕೆಲವು ಸಿಗರೇಟ್ ಸೇದುವುದು ಅಥವಾ ಕೆಲವೊಮ್ಮೆ ಧೂಮಪಾನ ಮಾಡುವುದು ಕೂಡಾ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.. ಒಬ್ಬ ವ್ಯಕ್ತಿಯು ಹೆಚ್ಚು ವರ್ಷಗಳ ಕಾಲ ನಿತ್ಯವೂ ಹೆಚ್ಚಿನ ಸಿಗರೇಟ್ ಗಳನ್ನು ಸೇದಿದರೆ ಅತಿಹೆಚ್ಚು ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಿಡಿಯಾಟ್ರಿಕ್ ಆಂಕೊಲಾಜಿಸ್ಟ್ ಹೇಳುವುದೇನು?
ಇನ್ನು ಪಿಡಿಯಾಟ್ರಿಕ್ ಆಂಕೊಲಾಜಿಸ್ಟ್ ಡಾ.ಸೌಮ್ಯ ಅವರು ಹೇಳುವಂತೆ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಲ್ಲಿ ತಂಬಾಕು ಕೂಡ ಒಂದಾಗಿದೆ. ಹೀಗಾಗಿ ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು. ತಂಬಾಕು ಉದ್ಯಮ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಜೀವಮಾನವಿಡೀ ಲಾಭ ಮಾಡಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಹೊಸ ರೀತಿಯ ವ್ಯಸನದ ಅಲೆಯನ್ನು ಸೃಷ್ಟಿಸುತ್ತದೆ. ಇದನ್ನು ತಪ್ಪಿಸಬೇಕಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಇ-ಸಿಗರೇಟ್ಗಳನ್ನು ಬಳಸುತ್ತಿದ್ದಾರೆ.. ಜಾಗತಿಕವಾಗಿ ಅಂದಾಜು 37 ಮಿಲಿಯನ್ ನಷ್ಟು 13-15 ವರ್ಷ ವಯಸ್ಸಿನವರು ತಂಬಾಕು ಬಳಸುತ್ತಾರೆ. ಇ-ಸಿಗರೇಟ್ ಗಳನ್ನು ಬಳಸುವ ಮಕ್ಕಳು ಮತ್ತು ಹದಿಹರೆಯದವರು ನಂತರದಲ್ಲಿ ಸಿಗರೇಟ್ ಸೇದುವುದನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಂಬಾಕು ಉತ್ಪನ್ನ ಕ್ಯಾನ್ಸರ್ ಕಾರಕ
ತಂಬಾಕನ್ನು ಎರಡು ರೂಪಗಳಲ್ಲಿ ಬಳಸಲಾಗುತ್ತಿದ್ದು, ಧೂಮಪಾನ (ಸಿಗರೇಟ್, ಬೀಡಿ), ಹೊಗೆರಹಿತ (ಕೈನಿ, ಗುಟ್ಕಾ, ಜರ್ದಾ ಇತ್ಯಾದಿ) ಹೀಗೆ ಎರಡು ರೂಪದಲ್ಲಿ ಬಳಸಲಾಗುತ್ತದೆ. ಇವೆರಡೂ ಕೂಡಾ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತವೆ. ಪೋಷಕರು ಧೂಮಪಾನ ಮಾಡಿದರೆ, ಪಕ್ಕದಲ್ಲಿರುವ ಮಕ್ಕಳಿಗೂ ಅದರಿಂದ ತೊಂದರೆಯಾಗುತ್ತದೆ. ಮಕ್ಕಳು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಾಗಲಿದ್ದು, ಅದರಿಂದ ಆರೋಗ್ಯ ತೊಂದರೆಗಳಾಗಲಿವೆ.

ಹದಿಹರೆಯದ ಮಕ್ಕಳು ಸಾಮಾನ್ಯವಾಗಿ ಗೆಳೆಯರ ಒತ್ತಡ ಅಥವಾ ಕುತೂಹಲದಿಂದ ಧೂಮಪಾನ, ತಂಬಾಕು ಸೇವನೆಯನ್ನು ಪ್ರಾರಂಭಿಸುತ್ತಾರೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ಸೇವನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ಪ್ರತಿಪಾದಿಸುವುದು ಈ ಸಮಯದ ಅಗತ್ಯವಾಗಿದೆ ಎಂದಿದ್ದಾರೆ.
ಡಾ.ಅಭಿಲಾಷ್ ಅವರ ಅಭಿಪ್ರಾಯವೇನು?
ಮೆಡಿಕಲ್ ಆಂಕೊಲಾಜಿಸ್ಟ್ ಡಾ.ಅಭಿಲಾಷ್ ಅವರು ನಾವು ಧೂಮಪಾನ ಮುಕ್ತ ಭವಿಷ್ಯವನ್ನು ರಚಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಹದಿಹರೆಯದವರಲ್ಲಿ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ನಾವು ತಂಬಾಕು ಮುಕ್ತ ಜೀವನದ ಸಾಧ್ಯತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಯುವಕರಿಗೆ ಈ ಬಗ್ಗೆ ಶಿಕ್ಷಣ ಮತ್ತು ಮಾಹಿತಿ ನೀಡುವುದರ ಮೂಲಕ ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಅಪಾಯಗಳಿಂದ ರಕ್ಷಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಸಿಗರೇಟ್‌ಗಿಂತ ಇ-ಸಿಗರೇಟ್‌ನತ್ತ ಯುವ ತಲೆಮಾರು ಆಕರ್ಷಿತವಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಹೀಗಾಗಿ ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕಿದೆ. ಜೊತೆಗೆ ವಿದ್ಯಾರ್ಥಿ ದೆಸೆಯಿಂದಲೇ ಸಿಗರೇಟ್ ಕುರಿತಂತೆ ಅರಿವು ಮೂಡಿಸುವ ಕೆಲಸ ಮಾಡುವುದು ಅಗತ್ಯವಾಗಿದೆ.












Click it and Unblock the Notifications