Diabetes: ಮಧುಮೇಹ ನಿಯಂತ್ರಿಸಲು ಪ್ರತಿನಿತ್ಯ ಏನೇನು ಮಾಡಬೇಕು?
ಮಧುಮೇಹ ಬಂದ ಬಳಿಕ ಅದರ ಜೊತೆಗೆ ಹೋರಾಟ ಮಾಡಿಕೊಂಡು ಬದುಕುವುದು ಅನಿವಾರ್ಯ. ಹೀಗಾಗಿ ಮಧುಮೇಹವಿದ್ದರೂ ಅದನ್ನು ನಿಯಂತ್ರಿಸಿಕೊಂಡು ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಮಧುಮೇಹ ನಿಯಂತ್ರಣದಲ್ಲಿದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಇಲ್ಲದೆ ಹೋದರೆ ಅದರ ಪರಿಣಾಮಗಳು ನಮ್ಮ ದೇಹದ ಒಂದೊಂದೇ ಅಂಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಮೊದಲಿಗೆ ನಾವು ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಮಧುಮೇಹ ನಿಯಂತ್ರಿಸುವ ಆಹಾರ ಪದಾರ್ಥಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಜತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಬೆಣ್ಣೆ, ರೆಡ್ ಮೀಟ್ ಮತ್ತು ಫುಲ್ ಫ್ಯಾಟ್ ಡೈರಿಯಂತಹ ಸ್ಯಾಚುರೇಟೆಡ್ ಮತ್ತು ಕರಿದ ಮತ್ತು ಸಂಸ್ಕರಿಸಿದ ಟ್ರಾನ್ಸ್ ಫ್ಯಾಟ್ ಹೊಂದಿರುವ ಆಹಾರವನ್ನು ದೂರವಿಡಬೇಕು. ಈ ರೀತಿಯ ಆಹಾರಗಳಲ್ಲಿ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಮಾಡುವ ಅಂಶಗಳಿರುವುದರಿಂದ ಅವುಗಳತ್ತ ಎಚ್ಚರಿಕೆ ವಹಿಸಬೇಕಾಗುತ್ತದೆ.

ಹೃದಯಕ್ಕೆ ಆರೋಗ್ಯವನ್ನು ನೀಡುವ ಸೊಪ್ಪು, ಧಾನ್ಯಗಳು ಮತ್ತು ಪ್ರೋಟೀನ್ ಭರಿತ ಆಹಾರಗಳು ಸೇರಿದಂತೆ ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಇನ್ನು ಆಹಾರ ಸೇವಿಸುವ ಪ್ರಮಾಣದ ಮೇಲೆಯೂ ನಿಗಾವಹಿಸಬೇಕು. ತಜ್ಞರು ನೀಡುವ ಸಲಹೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಜತೆಗೆ ಆಹಾರ ಕ್ರಮದಲ್ಲೊಂದು ಶಿಸ್ತು ಅಳವಡಿಕೆಯೂ ಅಗತ್ಯ. ಕೆಲವೊಮ್ಮೆ ಬಾಯಿ ಚಪಲಕ್ಕೆ ಇವತ್ತೊಂದು ದಿನ ತಿಂದು ಬಿಡೋಣವೆಂದು ಸಿಹಿ ಪದಾರ್ಥಗಳು ಸೇರಿದಂತೆ ಜಂಕ್ ಫುಡ್ ಇನ್ನಿತರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆರೋಗ್ಯವೇ ಮುಖ್ಯವಾಗಿರುವುದರಿಂದ ಅವುಗಳನ್ನು ದೂರವಿಡುವ ದೃಢಮನಸ್ಸು ಮಾಡಬೇಕಾಗುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು
ಹೃದಯಕ್ಕೆ ಆಗುವ ಅಪಾಯವನ್ನು ತಡೆಯಬೇಕಾದರೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆ ಮೂಲಕ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ನಿರ್ವಹಿಸಬೇಕು. ನಿಯಮಿತವಾಗಿ ಮಾಡುವ ದೈಹಿಕ ಚಟುವಟಿಕೆಗಳು ನಿಮ್ಮ ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯಕರ ಜೀವನಶೈಲಿ ಹೊಂದಬೇಕಾದರೆ ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡಬೇಕು. ಅಂದರೆ ಚುರುಕಾಗಿ ನಡೆಯುವುದು, ಸೈಕ್ಲಿಂಗ್ ನಂತಹ ಮಧ್ಯಮ ತೀವ್ರತೆಯಲ್ಲಿ ದೈಹಿಕ ವ್ಯಾಯಾಮವನ್ನು ಪ್ರತೀ ವಾರ ಕನಿಷ್ಠ 150 ನಿಮಿಷಗಳಾದರೂ ಮಾಡುವುದು ಒಳ್ಳೆಯದು.

ಬಹಳಷ್ಟು ಜನಕ್ಕೆ ಮಧುಮೇಹವಿದ್ದರೂ ಅವರು ಅದರ ಪರೀಕ್ಷೆ ಮಾಡುವುದೇ ಇಲ್ಲ. ಆ ರೀತಿ ಮಾಡುವುದು ತಪ್ಪು. ಮಧುಮೇಹವಿರುವ ರೋಗಿಗಳು ಮನೆಯಲ್ಲಿ ಸಿಜಿಎಂ ಸಾಧನವನ್ನು ಇಟ್ಟುಕೊಂಡು ಅದರ ಮೂಲಕ ಗ್ಲೂಕೋಸ್ ಮಟ್ಟವನ್ನು ಅರಿಯಬೇಕು. ಆಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚು ಕಡಿಮೆಯಾದರೆ ನಮ್ಮ ಗಮನಕ್ಕೆ ಬರುತ್ತದೆ. ದಿನದಲ್ಲಿ ಕನಿಷ್ಠ 17 ಗಂಟೆಗಳ ಕಾಲ ಗ್ಲೂಕೋಸ್ ಮಟ್ಟವು ನಿಗದಿತ ಗ್ಲೂಕೋಸ್ ರೇಂಜ್ ನಲ್ಲಿ (70 - 180 mg/dl) ಇರುವಂತೆ ನೋಡಿಕೊಳ್ಳುವುದು ಅಗತ್ಯ.
ಮದ್ಯಪಾನ ಧೂಮಪಾನ ತ್ಯಜಿಸಿ
ಇನ್ನು ಸಿಜಿಎಂನಂತಹ ಸಾಧನಗಳು ವೈದ್ಯಕೀಯ ಸೇವೆ ಒದಗಿಸುವ ವೈದ್ಯರ ಜೊತೆ ಸಂಪರ್ಕದಲ್ಲಿರುವುದಕ್ಕೂ ಅನುವು ಮಾಡಿಕೊಡುತ್ತದೆ. ಹಾಗಾಗಿ ಸಂಕೀರ್ಣ ಸಂದರ್ಭಗಳಲ್ಲಿ ವೈದ್ಯರನ್ನು ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಹೀಗೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಲ್ಲದೆ, ಹೃದ್ರೋಗದ ಅಪಾಯದಿಂದ ಪಾರಾಗಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ಮಧುಮೇಹಿಗಳು ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ, ಧೂಮಪಾನ ಮತ್ತು ಮದ್ಯಪಾನ ಸೇವನೆಯಿಂದ ದೂರವಿರಬೇಕಾಗುತ್ತದೆ.
ಧೂಮಪಾನವು ರಕ್ತನಾಳಗಳ ಒಳಪದರವನ್ನು ಹಾನಿಗೊಳಿಸುತ್ತದೆ ಮತ್ತು ಮಧುಮೇಹದಿಂದ ಉಂಟಾಗುವ ಅಪಧಮನಿಗಳ ಕಿರಿದಾಗುವಿಕೆಯ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಿದರೆ, ಮದ್ಯಪಾನವು ಮಧುಮೇಹದ ಔಷಧಿಗಳು ಪರಿಣಾಮ ಬೀರುವುದಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಷ್ಟೇ ಅಲ್ಲದೆ, ಒತ್ತಡಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ದೇಹವು ಒತ್ತಡದ ಹಾರ್ಮೋನುಗಳನ್ನು ಸೃಷ್ಟಿಸುವುದರಿಂದ ರಕ್ತದ ಸಕ್ಕರೆ ಮಟ್ಟವು ಜಾಸ್ತಿಯಾಗಬಹುದು ಮತ್ತು ಇನ್ಸುಲಿನ್ ಪ್ರತಿರೋಧ ಉಂಟಾಗಬಹುದು.
ಇದು ಮುಂದುವರೆದು ಕಾಲಾನಂತರದಲ್ಲಿ ರಕ್ತದೊತ್ತಡ ಜಾಸ್ತಿಯಾಗಿ ಹೃದ್ರೋಗ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಒತ್ತಡವನ್ನು ನಿಯಂತ್ರಿಸುವತ್ತ ಹೆಚ್ಚಿನ ಗಮನಹರಿಸಬೇಕು. ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಕೇಳುವುದು, ಯೋಗ, ನೃತ್ಯ ಮಾಡುವುದು ಸೇರಿದಂತೆ ಆರೋಗ್ಯಕರ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದರೊಂದಿಗೆ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಾಗಲಿದೆ.ಇದೆಲ್ಲದರ ಜತೆಗೆ ಆಗಾಗ್ಗೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಕೂಡ ಅಗತ್ಯ.












Click it and Unblock the Notifications