ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ?
ನವದೆಹಲಿ, ಏ. 20: ರಾಷ್ಟ್ರರಾಜಧಾನಿಯ ಜಹಾಂಗೀರ್‌ಪುರಿ (Jahangirpuri) ಪ್ರದೇಶದಲ್ಲಿ ಇಂದು ಬುಧವಾರ ಬೆಳ್ಳಂಬೆಳಗ್ಗೆಯಿಂದಲೇ ಬುಲ್‌ಡೋಜರ್‌ಗಳು ಆರ್ಭಟಿಸಿದವು. ಪ್ರದೇಶದಲ್ಲಿದ್ದ ಅನೇಕ ಅಕ್ರಮ ಕಟ್ಟಡಗಳನ್ನ ತೆರವುಗೊಳಿಸುವ ಕಾರ್ಯಾಚರಣೆ (Ant-encroachment drive) ಭರ್ಜರಿಯಾಗಿ ನಡೆಯಿತು. ಉತ್ತರ ಡೆಲ್ಲಿ ನಗರಪಾಲಿಕೆ ಕೈಗೊಂಡ ಈ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಜಮಾಯತ್-ಇ-ಹಿಂದ್ (Jamait-i-Hind) ಎಂಬ ಸಂಘಟನೆ ಈ ಕಾರ್ಯಾಚರಣೆಯನ್ನ ನಿಲ್ಲಿಸುವಂತೆ ಭಾರತೀಯ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿತು. ಇಂದು ತುರ್ತಾಗಿ ಇದರ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯನ್ನ ಸದ್ಯಕ್ಕೆ ನಿಲ್ಲಿಸುವಂತೆ ಪಾಲಿಕೆಗೆ ಆದೇಶ ನೀಡಿದೆ. ನಾಳೆ ಇದರ ವಿಚಾರಣೆ ನಡೆಯಲಿದ್ದು, ಕೋರ್ಟ್ ತೀರ್ಪು ಏನಿರಬಹುದು ಎಂಬ ಕುತೂಹಲ ಇದೆ. ಕೆಲ ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಜಹಾಂಗೀರ್‌ಪುರಿಯಲ್ಲಿ ಬುಲ್‌ಡೋಜರ್‌ಗಳಿಂದ ತೆರವು ಕಾರ್ಯ ಮುಂದುವರಿದಿದೆ.
ಕಟ್ಟಡ ತೆರವು ಕಾರ್ಯಾಚರಣೆ ಯಾಕೆ?
ಉತ್ತರ ಡೆಲ್ಲಿ ನಗರಪಾಲಿಕೆ (NDMC- North Delhi Municipal Corporation) ವ್ಯಾಪ್ತಿಗೆ ಜಹಾಂಗೀರ್‌ಪುರಿ ಪ್ರದೇಶ ಬರುತ್ತದೆ. ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ವಿಶೇಷತೆ ಏನಿಲ್ಲ. ಇದು ಮಾಮೂಲಿಯಾಗಿ ನಡೆಸಲಾಗುವ ಕಾರ್ಯಾಚರಣೆ ಎಂದು ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳುತ್ತಾರೆ. ಆದರೆ, ಇದರ ಒಳಸುಳಿ ಬೇರೆ ಇದೆ ಎನ್ನುತ್ತವೆ ಇತರ ವರದಿಗಳು.

ಕೋಮುಗಲಭೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಇದೆಯಾ ಸಂಬಂಧ?:
ಕಳೆದ ವಾರ ಇದೇ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮ ಜಯಂತಿಯ ಮೆರವಣಿಗೆ ನಡೆಯುವ ವೇಳೆ ಕೋಮುಗಲಭೆ ನಡೆದಿತ್ತು. ಆ ಗಲಭೆ ಘಟನೆಯ ಕೆಲ ಆರೋಪಿಗಳು ಈ ಪ್ರದೇಶದಲ್ಲಿ ಹಲವು ಸ್ಥಳಗಳ ಅತಿಕ್ರಮಣ ಮಾಡಿ ಅಕ್ರಮವಾಗಿ ಕಟ್ಟಡಗಳನ್ನ ಕಟ್ಟಿದ್ದಾರೆ. ಈ ಪುಂಡರಿಗೆ ಸ್ಥಳೀಯ ಆಮ್ ಆದ್ಮಿ ಶಾಸಕ ಮತ್ತು ಪಾಲಿಕೆ ಸದಸ್ಯರ ಬೆಂಬಲ ಇರುವ ಕಾರಣ ದೊಡ್ಡ ಮಟ್ಟದಲ್ಲಿ ಅತಿಕ್ರಮಣ ಮಾಡಿದ್ದಾರೆ. ಈ ಗಲಭೆಕೋರರು ಮಾಡಿರುವ ಅಕ್ರಮ ಕಟ್ಟಡಗಳನ್ನ ಗುರುತಿಸಿ ತೆರವುಗೊಳಿಸಬೇಕು ಎಂದು ದೆಹಲಿ ಘಟಕದ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತ ಅವರು ನಾರ್ತ್ ಡೆಲ್ಲಿ ಮುನಿಸಿಪಾಲ್ ಕಾರ್ಪೊರೇಷನ್‌ನ ಮೇಯರ್ ಅವರಿಗೆ ಮನವಿ ಮಾಡಿ ನಿನ್ನೆ ಮಂಗಳವಾರ ಪತ್ರ ಬರೆದಿದ್ದರು.
ಈ ಪತ್ರ ಬರೆದ ಬೆನ್ನಲ್ಲೇ ಎನ್‌ಡಿಎಂಸಿ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಇಂದು ಮತ್ತು ನಾಳೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಿತು. ಒಂಬತ್ತು ಬುಲ್‌ಡೋಜರ್‌ಗಳನ್ನ ಕರೆಸಲಾಗಿತ್ತು. ಜೊತೆಗೆ, ಗಲಭೆ ಉಂಟಾಗದಂತೆ ಮುಂಜಾಗ್ರತೆಯಾಗಿ ನೂರಾರು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನ ನಿಯೋಜಿಸಲಾಗಿತ್ತು.
ಇದೀಗ ಸುಪ್ರೀಂ ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆಯನ್ನ ನಿಲ್ಲಿಸಲಾಗಿದೆ. ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

ಆಮ್ ಆದ್ಮಿ ಸರಕಾರದ ಪಾತ್ರ ಏನು?
ದೆಹಲಿಯಲ್ಲಿ ಆಮ್ ಆದ್ಮಿ ಸರಕಾರ ಇದ್ದರೂ ಮೂರು ನಗರಪಾಲಿಕೆಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದು. ಉತ್ತರ ಡೆಲ್ಲಿ, ದಕ್ಷಿಣ ಡೆಲ್ಲಿ ಮತ್ತು ಪೂರ್ವ ಡೆಲ್ಲಿ ನಗರಪಾಲಿಕೆಯಲ್ಲಿ ಎನ್‌ಡಿಎ ಅಡಳಿತ ಇದೆ. ಉತ್ತರ ಡೆಲ್ಲಿಯಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿಯಲ್ಲಿ ಆಡಳಿತ ನಡೆದಿದೆ. ರಾಜಾ ಇಕ್ಬಾಲ್ ಸಿಂಗ್ ಅವರು ಶಿರೋಮಣಿ ಅಕಾಲಿ ದಳದವರಾಗಿದ್ದಾರೆ. ಇನ್ನುಳಿದ ಎರಡು ಪಾಲಿಕೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಪಡೆದಿದೆ. ಈಗ ಕಟ್ಟಡ ತೆರವು ಕಾರ್ಯಾಚರಣೆ ಮಾಡಬೇಕೆಂಬುದು ಪಾಲಿಕೆ ಕೈಗೊಂಡ ನಿರ್ಧಾರ ಆಗಿತ್ತು. ಇದರಲ್ಲಿ ಆಮ್ ಆದ್ಮಿ ಸರಕಾರದ ಪಾತ್ರ ಇಲ್ಲ.
ಗಲಭೆಕೋರರಿಗೆ ಪಾಠ ಕಲಿಸುವ ಉದ್ದೇಶ:
ಹಿಂದೆಲ್ಲಾ ನಡೆದ ರೈತರ ಪ್ರತಿಭಟನೆ, ದೆಹಲಿ ಗಲಭೆಗಳಲ್ಲಿ ಭಾಗಿಯಾದವರೆನ್ನಲಾದ ಜನರ ಮೇಲೆ ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಗಲಭೆಯಿಂದ ಆದ ಆಸ್ತಿಪಾಸ್ತಿ ನಷ್ಟವನ್ನು ಗಲಭೆಕೋರರಿಂದಲೇ ಉ.ಪ್ರ. ಸರಕಾರ ವಸೂಲಿ ಮಾಡಿತ್ತು. ಕರ್ನಾಟಕದಲ್ಲೂ ಡಿಜೆ ಹಳ್ಳಿ ಗಲಭೆ ವಿಚಾರದಲ್ಲಿ ಇದೇ ತಂತ್ರ ಅನುಸರಿಸಲಾಗಿತ್ತು.

ಕಳೆದ ವಾರ ರಾಮನವಮಿ ಮೆರವಣಿಗೆ ವೇಳೆ ಮಧ್ಯ ಪ್ರದೇಶದ ಖರ್ಗೋನ್ ಬಳಿ ನಡೆದ ಕೋಮುಗಲಭೆ ಘಟನೆ ವಿಚಾರದಲ್ಲೂ ಅಲ್ಲಿನ ಬಿಜೆಪಿ ಸರಕಾರ ಆರೋಪಿಗಳ ಮನೆಗಳನ್ನ ಧ್ವಂಸಗೊಳಿಸಿತ್ತು. ಇದೇ ಕ್ರಮವನ್ನು ಜಹಾಂಗೀರ್‌ಪುರಿಯಲ್ಲೂ ಕೈಗೊಳ್ಳುವುದು ಬಿಜೆಪಿಯ ಉದ್ದೇಶ ಎಂದು ಹೇಳಲಾಗುತ್ತಿದೆ.
ಜಹಾಂಗೀರ್‌ಪುರಿ ಕೋಮುಗಲಭೆ ನಡೆದದ್ದು ಯಾಕೆ?
ಉತ್ತರ ದೆಹಲಿ ಪಾಲಿಕೆ ವ್ಯಾಪ್ತಿಗೆ ಬರುವ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಕಳೆದ ವಾರ ಹನುಮ ಜಯಂತಿ ಪ್ರಯುಕ್ತ ಹಿಂದೂ ಸಮುದಾಯದವರು ಮೆರವಣಿಗೆ ನಡೆಸಿದರು. ಅನುಮತಿ ಇಲ್ಲದಿದ್ದರೂ ಮಸೀದಿ ಇದ್ದ ಮಾರ್ಗದಲ್ಲಿ ಮೆರವಣಿಗೆ ಹೋಯಿತು. ಈ ವೇಳೆ ಜೋರಾಗಿ ಪ್ರಾರ್ಥನೆ ಸದ್ದು ಮಾಡಲಾಯಿತು. ಅದೇ ವೇಳೆ ಮಸೀದಿಯಲ್ಲಿ ಆಜಾನ್ ನಡೆದಿತ್ತು. ಈ ವೇಳೆ, ಎರಡೂ ಕಡೆಯವರ ಮಧ್ಯೆ ವಾಗ್ವಾದವಾಗಿ ಕೊನೆಗೆ ಅದು ಹಿಂಸಾಚಾರಕ್ಕೆ ತಿರುಗಿದೆ.

ಹಿಂದೂಗಳ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಕೆಲವರಲ್ಲಿ ಶಸ್ತ್ರಾಸ್ತ್ರಗಳು ಇದ್ದದ್ದು ಬೆಳಕಿಗೆ ಬಂದಿದೆ. ಇವರು ಮಸೀದಿಗೆ ಹಾನಿ ಮಾಡಲು ಯತ್ನಿಸಿದರೆಂಬುದು ಮುಸ್ಲಿಮ್ ಸಮುದಾಯದವರ ಆರೋಪ.
ಹಾಗೆಯೇ, ಮಸೀದಿಗಳ ಮಾಳಿಗೆಯಲ್ಲಿ ಹೇರಳವಾದ ಕಲ್ಲುಗಳನ್ನ ಶೇಖರಿಡಲಾಗಿತ್ತು. ಶೋಭಾಯಾತ್ರೆಯ ಮೇಲೆ ಮಸೀದಿಗಳಿಂದ ಕಲ್ಲುಗಳನ್ನ ತೂರಲಾಗುತ್ತಿತ್ತು. ಇದು ಮೊದಲೇ ಮಾಡಿದ ಸಂಚು ಎಂಬುದು ಹಿಂದೂ ಸಮುದಾಯದವರ ಪ್ರತ್ಯಾರೋಪ. ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವಾ ಎಂಬುದನ್ನು ಪತ್ತೆ ಮಾಡುವ ಪ್ರಯತ್ನದಲ್ಲಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications