ಚಿನ್ನದಂಥ ಹೆಂಡತಿ ಇರಲು ಡೈವೋರ್ಸೇತಕೆ?
ಒಬ್ಬ ಮದುವೆಯಾದ ವ್ಯಕ್ತಿ ಎಷ್ಟು ಬೇಜಾರಾಗಿದ್ದನೆಂದರೆ, ಆಕಾಶವೇ ಕಳಚಿ ತನ್ನ ಮೇಲೆ ಬೀಳಬಾರದೆ ಎಂದೆಣಿಸುತ್ತ ಪಾರ್ಕಿನಲ್ಲಿ ಆಕಾಶ ನೋಡುತ್ತ ಕುಳಿತಿದ್ದ. ಎಷ್ಟೇ ಬೇಡವೆಂದರೂ ಕಣ್ಣಿನಿಂದ ಹನಿ ತೊಟ್ಟಿಕ್ಕುತ್ತಿತ್ತು, ಆಕಾಶ ಕಳಚಿಕೊಂಡು ಬೀಳುವುದಿರಲಿ ಮತ್ತಷ್ಟು ದೂರವಾದಂತೆ ಭಾಸವಾಗುತ್ತಿತ್ತು.
ಅವನ ಅವಸ್ಥೆಯನ್ನು ತಿಳಿದಿದ್ದ ಗೆಳೆಯ ಆತನನ್ನು ಸಂತೈಸಲು ಪಾರ್ಕಿಗೆ ಬಂದ. "ಯಾಕೋ, ಯಾಕಿಷ್ಟು ಬೇಜಾರು ಮಾಡಿಕೊಂಡಿದ್ದಿಯಾ? ವ್ಯಾಪಾರದಲ್ಲಿ ನಷ್ಟವಾಯ್ತಾ, ಹಣ ಕಳಕೊಂಡ್ಯಾ, ಮಾವನಿಂದೇನಾದರೂ ಅವಮಾನವಾಯ್ತಾ? ಚಿನ್ನದಂಥ ಹೆಂಡತಿ ಇರಲು ಕಣ್ಣೀರೇತಕೆ? ಬಾಯಿಬಿಟ್ಟು ಹೇಳೋ" ಅಂತ ದುಂಬಾಲು ಬಿದ್ದ.
"ಅಂಥದೇನೂ ಆಗಿಲ್ಲ. ವ್ಯಾಪಾರ ಚೆನ್ನಾಗಿಯೇ ಸಾಗಿದೆ. ಮಾವನೂ ನನ್ನ ಕಂಟ್ರೋಲಲ್ಲೇ ಇದ್ದಾನೆ. ಆದರೆ, ನನ್ನ ಹೆಂಡತಿಯಿಂದ ಸಾಕಾಗಿ ಹೋಗಿದೆ. ಆಕೆಗೆ ವಿಚ್ಛೇದನ ನೀಡಬೇಕೆಂದು ಬಯಸಿದ್ದೇನೆ. ಅವಳನ್ನು ಎಷ್ಟೇ ಪ್ರೀತಿಸಿದರೂ, ಚೆನ್ನಾಗಿ ನೋಡಿಕೊಂಡರೂ ಹೀಗೆ ಮಾಡುತ್ತಾಳಂತ ಎಣಿಸಿರಲಿಲ್ಲ, ಮೋಸಗಾರ್ತಿ" ಎಂದು ಧ್ವನಿಯನ್ನು ಒಳಗೇ ಹುದುಗಿಸಿಟ್ಟುಕೊಂಡು ತಣ್ಣನೆ ಕ್ರೌರ್ಯದಲ್ಲಿ ಗುಡುಗಿದ.
"ವಾಟ್, ಮೋಸ ಮಾಡಿದ್ಳಾ? ಏನಪ್ಪ ಡೈವೋರ್ಸ್ ನೀಡುವಂಥ ಮೋಸ ಆಕೆ ಮಾಡಿದ್ದು? ಸುಖ ನೀಡ್ತಿಲ್ವಾ?" ಗೆಳೆಯ ಕಾತುರ ತಡೆದುಕೊಳ್ಳಲಾಗದೆ ಕೇಳಿದ.
"ಆಕೆಯ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದುದನ್ನು ನೋಡಿದೆ. ಹೀಗೆ ಮಾಡುತ್ತಾಳಂತ ಅಂದೋಕೊಂಡೇ ಇರಲಿಲ್ಲ" ಎಂದು ಹೆಂಡತಿಯಿಂದ ಬೇಜಾರಾದ ಗೆಳೆಯ ಗದ್ಗದಿತನಾದ.
"ಲೇ ಪೆದ್ದ, ಬರೀ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವುದಕ್ಕೆ ಡೈವೋರ್ಸ್ ಕೊಟ್ಟುಬಿಡುವುದಾ? ಇಷ್ಟೇ ಏನೋ ನೀನು ಜೀವನ ಅರಿತುಕೊಂಡಿರುವುದು? ನೀನು ಜೀವನದಲ್ಲಿ ಸೆಟ್ಲ್ ಆಗಲಿ ಅಂದೇ ಆಕೆ ಹಾಗೆ ಮಾಡಿರಬಹುದು" ಎಂದು ಆತನ ಹೆಂಡತಿಯನ್ನೇ ಸಮರ್ಥಿಸಿಕೊಂಡು ಗೆಳೆಯ ವೇದಾಂತ ಹೇಳಿದ.
"ಲೇ, ನನ್ ಮಗನೆ, ನಾನು ಆಪರೇಷನ್ ಮಾಡಿಸಿಕೊಂಡು ಐದು ವರ್ಷ ಆಯ್ತು ಕಣ್ಲಾ" ಅಂತ ಭೋರ್ಗರೆಯತೊಡಗಿದ. ಸ್ನೇಹಿತನ ಮೊಗದಲ್ಲಿ ಕಿರುನಗೆ ಮೂಡಿತ್ತು, ಯಾಕೋ?


Click it and Unblock the Notifications
