ನಾರಾಯಣಮೂರ್ತಿಗೆ ಯಮರಾಜ ಹೇಳಿದ ಸುಳ್ಳು!
ನಮ್ಮ ನಾರಾಯಣಮೂರ್ತಿ ಮನೆಯಲ್ಲಿ ಆರಾಮವಾಗಿ ಮಲಗಿದ್ದ. ನಿದ್ದೆ ಬರಲಿಲ್ಲ, ಸರಿ ಮಿಡ್‌ನೈಟ್ ಮಸಾಲ ನೋಡೋಣ ಎಂದು ಟೀವಿ ಹಾಕಿದ. ಆಗ ಸಮಯ ರಾತ್ರಿ 12ಗಂಟೆ. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಯಿತು.
ಬಾಗಿಲು ತೆಗೆದರೆ, ಎದುರಿಗೆ ಯಮಧರ್ಮ ರಾಜ ನಿಂತಿದ್ದ! ಒಂದು ಕ್ಷಣ ನಾರಾಯಣಮೂರ್ತಿಗೆ ದಿಗಿಲೋ ದಿಗಿಲು! ‘ಇಂದಿಗೆ ನನಗೆ ಈ ಭೂಮಿ ಋಣ ತೀರಿತು... ಸಾವು ಎದುರಿಗೆ ನಿಂತಿದೆ’ ಎಂದು ಅನ್ನಿಸಿತು.
ಆದರೆ ಯಮಧರ್ಮ ರಾಜ ಸಮಾಧಾನದಿಂದಲೇ ಬಂದು, ಸೋಪಾ ಮೇಲೆ ಕುಳಿತ. ‘ನೋಡಯ್ಯ ನಾನು ನಿನ್ನನ್ನು ಹುಡುಕಿಕೊಂಡು ಬರಲಿಲ್ಲ. ಹೆದರಿಕೊಳ್ಳಬೇಡ. ನಿನಗಿನ್ನೂ 35ವರ್ಷ ಆಯಸ್ಸಿದೆ. ಆರಾಮವಾಗಿರು. ಜೀವನವನ್ನು ಮಸ್ತು ಮಜಾ ಮಾಡು’ ಎಂದು ಹೇಳಿ ಮಾಯವಾದ!
ನಾರಾಯಣಮೂರ್ತಿಗೆ ಖುಷಿಯೋ ಖುಷಿ! ಆ ಖುಷಿಯಲ್ಲಿಯೇ ತನ್ನ ಗೆಳೆಯರಿಗೆ ಒಂದು ಪಾರ್ಟಿ ಕೊಟ್ಟ. ಪಾರ್ಟಿ ಮುಗಿದ ಮೇಲೆ ತನ್ನ ಹೀರೋ ಹೊಂಡ ಹೇರಿದ. ‘ನಿನಗೆ ತೀರ್ಥ ಜಾಸ್ತಿಯಾಗಿದೆ, ಗಾಡಿ ಬೇಡ, ಆಟೋದಲ್ಲಿ ಮನೆಗೆ ಹೋಗು’ ಎಂದು ಗೆಳೆಯರು ಬುದ್ಧಿ ಹೇಳಿದರು.
‘ನನ್ನ ಆಯಸ್ಸು ಇನ್ನೂ 35ವರ್ಷ ಇದೆ. ಯಮರಾಜನೇ ಖುದ್ದಾಗಿ ಇದನ್ನು ಹೇಳಿದ್ದಾನೆ. ಯೋಚನೆ ಮಾಡಬೇಡಿ’ ಎಂದು ಹೊರಟೇ ಬಿಟ್ಟ. ರಸ್ತೆಯಲ್ಲಿ ಬರೋವಾಗ ಲಾರಿ ಕೆಳಕ್ಕೆ ಸಿಕ್ಕಿ ಸತ್ತ.
ಸತ್ತ ಮೇಲೆ ಯಮನ ಮುಂದೆ ನಿಂತ. ಬಹಳ ಕೋಪ ಬಂತು ನಾರಾಯಣಮೂರ್ತಿಗೆ. ‘ಮನುಷ್ಯರು ಮಾತ್ರ ಸುಳ್ಳು ಹೇಳ್ತಾರೆ ಅಂದುಕೊಂಡಿದ್ದೆ, ನೀನೂ ಆ ಗುಂಪಿಗೇ ಸೇರಿಬಿಟ್ಟೆಯಾ... ನನಗಿನ್ನೂ 35ವರ್ಷ ಆಯಸ್ಸಿದೆ ಅಂತ ಯಾಕೆ ಸುಳ್ಳು ಹೇಳಿದೆ’ ಎಂದು ಗರಂ ಆಗಿ ಪ್ರಶ್ನಿಸಿದ.
ಯಮರಾಜ ಅಷ್ಟೇ ತಣ್ಣಗೆ -‘ಏನ್ ಮಾಡೋದು ತಮ್ಮಾ, ಕೆಲವು ಸಲ ಸುಳ್ಳು ಹೇಳಬೇಕಾಗುತ್ತೆ. ಯಾಕೆ ಅಂದ್ರೆ ವರ್ಷದ ಕೊನೆಯಲ್ಲಿ ನಾವು ನಮ್ಮ ಟಾರ್ಗೆಟ್ ತಲುಪದಿದ್ದರೆ, ಬ್ರಹ್ಮ ಸುಮ್ಮನೇ ಬಿಡೋದಿಲ್ಲ...’ ಎಂದ.
(ಜೋಕ್ ಕತ್ತರಿಸಿದ್ದು; ಪುಷ್ಪಪಾದ)












Click it and Unblock the Notifications