Year Ender 2024: ಈ ವರ್ಷ ಉದ್ಯೋಗಕ್ಕಾಗಿ 7 ಕೋಟಿ ಅರ್ಜಿ ಸಲ್ಲಿಕೆ, ಮಹಿಳೆಯರ ಪಾಲೆಷ್ಟು? ವಿವರ
ನವದೆಹಲಿ, ಡಿಸೆಂಬರ್ 25: ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗುವಂತೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಮತ್ತೊಂದೆಡೆ ಮಹಿಳೆಯರು ಸ್ವತಃ ಉದ್ಯೋಗದ ಜೊತೆಗೆ ಕುಟುಂಬ ನಿರ್ವಹಣೆಯನ್ನು ಮಾಡುವ ಸವಾಲನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈ ವರ್ಷ (2024ರಲ್ಲಿ) ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಮಹಿಳೆಯರ ಪಾಲು ಹೆಚ್ಚಿದೆ.
2023ರಲ್ಲಿ ಉದ್ಯೋಗ ಪಡೆಯಲು ಬಯಸಿದ್ದ ಉದ್ಯೋಗಾಕಾಂಕ್ಷಿಗಳಿಗಿಂತಲೂ ಈ ಬಾರಿ 2024ರಲ್ಲಿಈ ವರ್ಷ ಶೇಕಡಾ 20ರಷ್ಟು ಹೆಚ್ಚಾಗಿದೆ. ಒಟ್ಟು 07 ಕೋಟಿ ಉದ್ಯೋಗ ಅರ್ಜಿಗಳು ಸಲ್ಲಿಕೆ ಆಗಿದ್ದು, ಅದರಲ್ಲಿ ಸರಿಸುಮಾರು 2.8 ಕೋಟಿ ಮಹಿಳಾ ಅಭ್ಯರ್ಥಿಗಳ ಉದ್ಯೋಗ ಅರ್ಜಿ ದಾಖಲಾಗಿದೆ ಎಂದು ಉದ್ಯೋಗ ವೇದಿಕೆ Apna.co ವರದಿಯೊಂದು ಬಹಿರಂಗಪಡಿಸಿದೆ.

ಉದ್ಯೋಗ ಕುರಿತ "ಇಂಡಿಯಾ ಅಟ್ ವರ್ಕ್ 2024" ವರದಿ ಪ್ರಕಾರ, ಭಾರತವು ವರ್ಷದಿಂದ ವರ್ಷಕ್ಕೆ ಉದ್ಯೋಗ ವಲಯದಲ್ಲಿ ಮಹತ್ವದ ಬದಲಾವಣೆ ಕಾಣುತ್ತಿದೆ. ಮಹಿಳೆಯು ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗುತ್ತಿದ್ದಾರೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಪುರುಷನಂತೆ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ಜೊತೆಗೆ ಕೌಟುಂಬಿಕ ಸವಾಲುಗಳನ್ನು ಎದುರಿಸುವಲ್ಲಿ ಮಹಿಳೆ ಮುಂದಿದ್ದಾಳೆ.
ದೇಶದ ಉದ್ಯೋಗ ಇತಿಹಾಸ ನೋಡಿದರೆ, ಈ ಬಾರಿ ದಾಖಲಾದ ಒಟ್ಟು ಏಳು ಕೋಟಿ ಉದ್ಯೋಗ ಅರ್ಜಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗುತ್ತದೆ. ಉದ್ಯೋಗದತ್ತ ಯುವ ಸಮೂಹ ಹೆಚ್ಚಿನ ಆಕರ್ಷಣೆ ಹೊಂದಿದ್ದಾರೆ. ಇದಕ್ಕೆ ಮಹಿಳೆಯರು ಹೊರತಾಗಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಒಟ್ಟು ಏಳು ಕೋಟಿಯಲ್ಲಿ ಮಹಿಳೆಯರು 2.8 ಕೋಟಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈನಂತಹ ಶ್ರೇಣಿ 1ರ ಮಹಾನಗರಗಳಲ್ಲಿ 1.52 ಕೋಟಿ ಅರ್ಜಿ ಸಲ್ಲಿಕೆ ಆಗಿವೆ. ಶ್ರೇಣಿ 2 ಹಾಗೂ ಶ್ರೇಣಿ 3 ನಗರಗಳ ಸಾಲಿಗೆ ಬರುವ ಜೈಪುರ, ಲಕ್ನೋ ಮತ್ತು ಭೋಪಾಲ್ ನಲ್ಲಿ ಒಟ್ಟು ಸುಮಾರು 1.28 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
ಈ ಮೆಟ್ರೋ ಸಿಟಿಗಳಲ್ಲಿ ಮಹಿಳೆಯರಿಗೆ ವಿಫುಲ ಉದ್ಯೋಗ ಅವಕಾಶಗಳು ಇವೆ. ವರ್ಷದಿಂದ ವರ್ಷಕ್ಕೆ ಉದ್ಯೋಗ ಸೃಜನೆ ಪ್ರಮಾಣ ಏರಿಕೆ ಆಗುತ್ತಿದ್ದು, ಪುರಷರು ಹಾಗೂ ಮಹಿಳೆಯರು ಒಳಗೊಂಡಂತೆ ಉದ್ಯೋಗ ಅರಸುವವರ ಸಂಖ್ಯೆ ಹೆಚ್ಚಾಗಿದೆ.
ಇದರಿಂದ ಪ್ರಸಕ್ತ 2024ರಲ್ಲಿ ಮಹಿಳೆಯರ ಸರಾಸರಿ ವೇತನ ಶೇಕಡಾ 28 ಶೇಕಡಾ ಏರಿಕೆ ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಪುರುಷರಂತೆ ಮಹಿಳೆಯರು ಕೂಡ ಆರೋಗ್ಯ, ಆತಿಥ್ಯ, ಚಿಲ್ಲರೆ ವ್ಯಾಪಾರ ಮತ್ತು ಇ-ಕಾಮರ್ಸ್‌ನಂತಹ ರಂಗಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟದ ರಂಗದಲ್ಲಿ ಮಹಿಳೆ ಉತ್ತಮ ಸಾಧನೆ ತೋರುತ್ತಿದ್ದಾಳೆ. ಮಾರಾಟ, ಲಾಜಿಸ್ಟಿಕ್ಸ್ ಮತ್ತು ಭದ್ರತಾ ವಲಯದಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ.
ಭಾರತವು ಉದ್ಯೋಗ ರಂಗದಲ್ಲಿ ಮಹಿಳೆಯರ ಪ್ರಮುಖ ಪಾತ್ರ, ಸಾಧನೆಗೆ ಸಾಕ್ಷಿಯಾಗುತ್ತಿದೆ. ಮಹಿಳಾ ಉದ್ಯೋಗ ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚು ಬೆಳವಣಿಗೆ ಆಗುತ್ತಿದೆ. ಈಗತಾನೇ ಕೋರ್ಸ್, ಶೈಕ್ಷಣಿಕ ವ್ಯಾಸಂಗ ಮುಗಿಸಿ ಹೊಸದಾಗಿ ಉದ್ಯೋಗ ರಂಗಕ್ಕೆ ಕಾಲಿಡುವವರ ಸಂಖ್ಯೆಯು ಭಾರತದಲ್ಲಿ ಹೆಚ್ಚಿದ್ದು, ಹೊಸಬರಿಂದ ಒಟ್ಟು ಎರಡು ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ.
ಬೆಂಗಳೂರು, ಹೈದರಾಬಾದ್, ಚೆನ್ನೈನಗರದಲ್ಲಿ ಉದ್ಯೋಗಕ್ಕಾಗಿ ಮಹಿಳೆಯರು 60 ಲಕ್ಷ ಅರ್ಜಿ ಸಲ್ಲಿಸಿದ್ದರೆ ಎನ್ನಲಾಗಿದೆ. ಈ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications