Indian Post: ಅಂಚೆ ಇಲಾಖೆ ನೇಮಕಾತಿ, ಬಳ್ಳಾರಿಯಲ್ಲಿ ಡಿ. 16ಕ್ಕೆ ನೇರ ಸಂದರ್ಶನ
ಬಳ್ಳಾರಿ, ಡಿಸೆಂಬರ್ 05: ಬಳ್ಳಾರಿಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್‌ಗಳ ನೇಮಕಕ್ಕೆ ಡಿಸೆಂಬರ್ 16ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಡಿಸೆಂಬರ್ 16ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಳ್ಳಾರಿ ನಗರದ ಕೋಟೆ ಆವರಣದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ನೇರ ಸಂದರ್ಶನಕ್ಕೆ ನೋಂದಣಿಯು ಬೆಳಗ್ಗೆ 10:30 ರಿಂದ 11:30 ರ ವರೆಗೆ ನಡೆಯಲಿದೆ.
ಅರ್ಹತೆ, ಇತರ ವಿವರಗಳು: ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ 10ನೇ ತರಗತಿ ಉತ್ತೀರ್ಣರಾಗಿರಬೇಕು. 5 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಇತರೆ ಪ್ರದೇಶಗಳಲ್ಲಿ ಇದ್ದರೆ 12ನೇ ತರಗತಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಗಳು ಬಳ್ಳಾರಿ ಹಾಗೂ ವಿಜಯನಗರ(ಹೊಸಪೇಟೆ) ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸಿಸುವ ವಿಳಾಸದ ಪುರಾವೆಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ.
ನೇರಪ್ರತಿನಿಧಿಗಳ ಹುದ್ದೆಗೆ ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ಮಾಜಿ ವಿಮಾ ಕಂಪನಿಗಳ ಸಲಹೆಗಾರರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳಿಯ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು ಅರ್ಹರು.
ಫೀಲ್ಡ್ ಆಫೀಸರ್ ಹುದ್ದೆಗೆ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರು, ನಿವೃತ್ತ ಗ್ರಾಮೀಣ ಅಂಚೆ ಸೇವಕರು (ಜಿಡಿಎಸ್) ಅರ್ಹರು. ವಿಮಾ ಉತ್ಪನ್ನಗಳನ್ನು ಮಾರಾಟ ಮಾಡುವ ಅನುಭವ, ಕಂಪ್ಯೂಟರ್ ಜ್ಞಾನ ಅಥವಾ ಸ್ಥಳೀಯ ಪ್ರದೇಶದ ಜ್ಞಾನವಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ರೂ. 5000ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿ ಮತ್ತು ಫೀಲ್ಡ್ಆಫೀಸರ್‌ಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಷನ್ ನೀಡಲಾಗುವುದು. ಇದರ ಹೊರತಾಗಿ ಬೇರೆ ಯಾವುದೇ ನಿಗದಿತ ವೇತನ ಇರುವುದಿಲ್ಲ. ಅಭ್ಯರ್ಥಿ ಬೇರೆ ಯಾವುದೇ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು.
ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಂಕಪಟ್ಟಿ ದಾಖಲೆಗಳನ್ನು ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಡೆವಲಪ್‌ಮೆಂಟ್ ಆಫೀಸರ್ 9481694420 ಹಾಗೂ ಅಂಚೆ ಅಧೀಕ್ಷಕರ ಕಾರ್ಯಾಲಯ ಅಥವಾ ದೂರವಾಣಿ ಸಂಖ್ಯೆ 08392-266768 ಸಂಪರ್ಕಿಸಬಹುದು.












Click it and Unblock the Notifications