ವಿಜಯನಗರದಲ್ಲಿ ಜಿಲ್ಲಾ ಕೋರ್ಟ್ ಸ್ಥಾಪನೆ: ಎಷ್ಟು ಹುದ್ದೆಗಳಿಗೆ ನೇಮಕಾತಿ
ವಿಜಯನಗರ, ಡಿಸೆಂಬರ್ 16: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬಂದಿದೆ. ಹೊಸಪೇಟೆ ಈ ಜಿಲ್ಲೆಯ ಕೇಂದ್ರದ ಸ್ಥಾನವಾಗಿದೆ. ಹೊಸದಾಗಿ ರಚನೆಯಾಗಿರುವ ಜಿಲ್ಲೆಗೆ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸುವ ಕಾರ್ಯಗಳು ನಡೆಯುತ್ತಿವೆ. ಈ ವಿಜಯನಗರ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಹೊಸಪೇಟೆ ಸ್ಥಾಪನೆ ಮಾಡಲು ಅನುಮತಿ ನೀಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಹಲವು ಉದ್ಯೋಗ ಅವಕಾಶಗಳು ಸಿಗಲಿವೆ.
ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಹೈಕೋರ್ಟ್ ಇವರ ಪತ್ರದಂತೆ ವಿಜಯಪುರದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಮಾಡಲಾಗುತ್ತದೆ. ಹೊಸಪೇಟೆ, ಕೊಟ್ಟೂರು, ಕೂಡ್ಲಗಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲೂಕು ಒಳಗೊಂಡಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವನ್ನು ಸ್ಥಾಪಿಸಲಾಗುತ್ತದೆ.

ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಗೆ ವಿಜಯನಗರ ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಹೊಸಪೇಟೆ ಸ್ಥಾಪನೆ ಮಾಡಬೇಕಿದ್ದು, ಅಧಿಕಾರಿ ಮತ್ತು ಪೂರಕ ಸಿಬ್ಬಂದಿ ಹುದ್ದೆಗಳೊಂದಿಗೆ ಸ್ಥಾಪಿಸಲು ಮಂಜೂರಾತಿ ನೀಡುವಂತೆ ಕೋರಿದ್ದರು.
ಯಾವ, ಎಷ್ಟು ಹುದ್ದೆಗಳು?; ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಲ್. ನಾಗೇಶ್ ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ವಿಜಯನಗರ ಜಿಲ್ಲೆ, ಹೊಸಪೇಟೆ ಸ್ಥಾಪಿಸಲು ಮತ್ತು ಸದರಿ ನ್ಯಾಯಾಲಯಕ್ಕೆ ಒಟ್ಟು 57 ಪೂರಕ ಅಧಿಕಾರಿ/ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲು ಮಂಜೂರಾತಿಯನ್ನು ನೀಡಿದ್ದಾರೆ.
ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಜಿಲ್ಲಾ ನ್ಯಾಯಾಧೀಶರು 1, ಮುಖ್ಯ ಆಡಳಿತಾತ್ಮಕ ಅಧಿಕಾರಿ 1, ಹಿರಿಯ ಶಿರಸ್ತೇದಾರರು 3, ಶೀಘ್ರಲಿಪಿಗಾರರು ಗ್ರೇಡ್-1 1, ಪ್ರಥಮ ದರ್ಜೆ ಸಹಾಯಕರು 6, ದ್ವಿತೀಯ ದರ್ಜೆ ಸಹಾಯಕರು 9, ಬೇಲಿಪ್ಸ್ 5, ಪ್ರೋಸೆಸ್ ಸರ್ವರ್ 12 ಹುದ್ದೆಗಳನ್ನು ನೇಮಕಾತಿ ಮಾಡಲು ಒಪ್ಪಿಗೆ ಕೊಡಲಾಗಿದೆ.
ಅಲ್ಲದೇ ಹೊರಗುತ್ತಿಗೆ ಆಧಾರದ ಮೇಲೆ ಬೆರಳಚ್ಚುಗಾರರು 10, ಅಟೆಂಡರ್ 3, ಚಾಲಕರು 1, ಪ್ಯೂನ್ 5 ಸೇರಿ ಒಟ್ಟು 57 ಹುದ್ದೆಗಳ ನೇಮಕಾತಿಗೆ ಒಪ್ಪಿಗೆಯನ್ನು ನೀಡಲಾಗಿದೆ.
ಹುದ್ದೆಗಳ ನೇಮಕಾತಿ ಮಾತ್ರವಲ್ಲದೇ ಸದರಿ ನ್ಯಾಯಾಲಯದ ಉಪಯೋಗಕ್ಕಾಗಿ ಅವಶ್ಯವಿರುವ ಪೀಠೋಪಕರಣಗಳು, ಟೈಪ್ ರೈಟರ್ಸ್, ದೂರವಾಣಿಗಳು, ಜೆರಾಕ್ಸ್ ಯಂತ್ರಗಳು, ಲೇಖನ ಸಾಮಾಗ್ರಿ ಮತ್ತು ಗಣಕಯಂತ್ರಗಳು ಇತ್ಯಾದಿಗಳನ್ನು ಒದಗಿಸುವಂತೆಯೂ ನಿರ್ದೇಶನ ನೀಡಲಾಗಿದೆ.
ಈ ಕುರಿತು ನ್ಯಾಯಾಲಯದ ಮುದ್ರೆಗಳು, ಫಾರ್ಮ್‌ಗಳು, ರಿಜಿಸ್ಟರ್‌ಗಳು, ಸ್ಟಾಂಡರ್ಡ್ ಪ್ರಮಾಣ ಪ್ರಕಾರ ಮುದ್ರಣ, ಲೇಖನ ಸಾಮಾಗ್ರಿಗಳನ್ನು ಒದಗಿಸಲು ನಿರ್ದೇಶಕರು ಸರ್ಕಾರಿ ಮುದ್ರಾಣಾಲಯ ಬೆಂಗಳೂರು ಇವರಿಗೆ ಸೂಚಿಸಲಾಗಿದೆ.
ಪ್ರಸ್ತಾವನೆಯಲ್ಲಿ ಈ ನ್ಯಾಯಾಲಯದ ಸ್ಥಾಪನೆಗೆ ವರ್ಷಕ್ಕೆ ಅಂದಾಜು 418.36 ಲಕ್ಷ ಅನುದಾನ ಅಗತ್ಯವಿರುವುದಾಗಿ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ ಅವರು ತಿಳಿಸಿದ್ದಾರೆ.












Click it and Unblock the Notifications