ಕೃಷಿ ಇಲಾಖೆಯಲ್ಲಿ ಹುದ್ದೆ ಭರ್ತಿ: ಸಂಪೂರ್ಣ ಮಾಹಿತಿ ಇಲ್ಲಿದೆ
ರಾಮನಗರ, ಜೂನ್ 22: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ 57 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ಶೇ.57ರಷ್ಟು ಹುದ್ದೆಗಳು ಖಾಲಿ ಇದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳ 600 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ಕೊಟ್ಟು ಮಂದಿನ ಪ್ರಕ್ರಿಯೆಗಾಗಿ ಕೆಪಿಎಸ್‌ಸಿಗೆ ಕಳುಹಿಸಲಾಗಿದೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ರೈತರಿಗೆ ಉಪಯೋಗ ವಾಗುವಂತೆ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಣಕೆರೆ ಮತ್ತು ದೇವಲಾಪುರ ಹೋಬಳಿ ಕೇಂದ್ರಗಳಲ್ಲಿಯೂ ಸಹ ರೈತ ಸಂಪರ್ಕ ಕೇಂದ್ರಗಳ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದರು.
ಕೃಷಿ ಇಲಾಖೆ ಮೂಲಕ ರೈತರಿಗೆ ಸಿಗಬಹುದಾದ ಎಲ್ಲ ಸವಲತ್ತುಗಳು ಒಂದೇ ಕಡೆ ಸಿಗುವಂತೆ ಮಾಡಲು ಜಿಲ್ಲೆಯಲ್ಲಿ 8 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ರೈತರ ಹಿತ ಕಾಪಾಡುವುದೇ ರಾಜ್ಯ ಸರ್ಕಾರದ ಮೊದಲ ಅದ್ಯತೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬೆಳ್ಳೂರಿನಲ್ಲಿ 2ಕೋಟಿ ರು.ವೆಚ್ಚದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಹಾಗೂ ಗೋದಾಮು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅರ್ಹ ಫಲಾನುಭವಿ ರೈತರಿಗೆ ಉಚಿತವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳನ್ನು ವಿತರಿಸಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರಗಳ ಮೂಲಕ ಯಾವುದೇ ಬೆಳೆಗಳನ್ನು ಬೆಳೆಯುವ ಪದ್ಧತಿ, ಅಧಿಕ ಇಳುವರಿ ತೆಗೆಯುವ ವಿಧಾನ ಮತ್ತು ಮಣ್ಣಿತ ಫಲವತ್ತತೆ ಸೇರಿದಂತೆ ಹಲವು ವಿಚಾರಗಳನ್ನು ರೈತರಿಗೆ ಮಾಹಿತಿ ನೀಡಲಾಗುವುದು. ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಕೊಟ್ಟು ಅಧಿಕಾರಿಗಳಿಂದ ಪಡೆದುಕೊಳ್ಳಬಹುದು. ರೈತರು ಸಮಗ್ರ ಬೇಸಾಯದ ಬಗ್ಗೆ ಹೆಚ್ಚು ಗಮನ ಹರಿಸುವ ಜೊತೆಗೆ ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು ಎಂದರು.
ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಸಿಗಬಹುದಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹೋಬಳಿ ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿಯೇ ಸಿಗುತ್ತವೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ರೈತರು ಮಳೆ ಪ್ರಮಾಣವನ್ನು ಅರಿತು ಕಡಿಮೆ ಮತ್ತು ದೀರ್ಘ ಅವಧಿಯಲ್ಲಿ ಬೆಳಗಳ ಬಗ್ಗೆ ನಿರ್ಧಾರ ಮಾಡಬೇಕು. ಲಾಭದಾಯಕ ಕೃಷಿ ಬಗ್ಗೆ ರೈತ ಸಂಪರ್ಕ ಕೇಂದ್ರಗಳು ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ. ಯಾವುದೇ ಸಮಸ್ಯೆಗಳಿದ್ದರೂ ಅಧಿಕಾರಿಗಳು ನೇರವಾಗಿ ತಮ್ಮೊಂದಿಗೆ ಚರ್ಚಿಸುವಂತೆ ತಿಳಿಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ಕುಮಾರ್, ಪಾಂಡವಪುರ ಉಪ ವಿಭಾಗದ ಉಪ ನಿರ್ದೇಶಕಿ ಮಮತ, ತಹಶೀಲ್ದಾರ್ ನಯೀಂ ಉನ್ನಿಸಾ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿ ಅಧಿಕಾರಿಗಳಾದ ಯುವರಾಜ್, ರೆಡ್ಡಿ ಶೇಖರ್, ಕೆಆರ್‌ಡಿಎಲ್‌ನ ಎಇಇ ಚೈತ್ರ, ಬೆಳ್ಳೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್ ಸೇರಿದಂತೆ ಹಲವು ಮುಖಂಡರು ಇದ್ದರು.












Click it and Unblock the Notifications