ಗುಳೆ ಹೋಗುವುದು ತಡೆಯಲು ಉದ್ಯೋಗ ವಾಹಿನಿ ರಥ
ಕೊಪ್ಪಳ, ಫೆಬ್ರವರಿ 10: ಜನರು ಉದ್ಯೋಗವನ್ನು ಅರಸಿಕೊಂಡು ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ವಾಹಿನಿ ರಥಕ್ಕೆ ಚಾಲನೆ ನೀಡಲಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿಯನ್ನು ಜನರು ಸಂಪರ್ಕಿಸಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಪಡೆಯುವಂತೆ ಅರಿವು ಮೂಡಿಸಲಾಗುತ್ತದೆ.
ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯತಿಯ ಮುದ್ದಾಬಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರು ಗುಳೆ ಹೋಗದಂತೆ ತಡೆಯಲು ಸ್ಥಳೀಯವಾಗಿ ದೊರೆಯುವ ಕೆಲಸದ ಕುರಿತು ಉದ್ಯೋಗ ಮಾಹಿತಿಯುಳ್ಳ ರಥಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, "ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿಯಲ್ಲಿ ತಾಲೂಕಿನಲ್ಲಿ 38 ಗ್ರಾಮ ಪಂಚಾಯತಿಗಳಲ್ಲಿ ವೈಯಕ್ತಿಕ ಅಥವಾ ಸಾಮುದಾಯಿಕ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಬಹುದಾಗಿದ್ದು ಹತ್ತಿರದ ಗ್ರಾಮ ಪಂಚಾಯತಿ ಸಂಪರ್ಕಿಸಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಿ ಕೂಲಿ ಉದ್ಯೋಗ ಪಡೆಯಬಹುದು" ಎಂದರು.

ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ದಿನಕ್ಕೆ ಕೂಲಿ ರೂ. 275 ನಿಗದಿಪಡಿಸಲಾಗಿದೆ. ಉಪಕರಣಗಳ ಬಳಕೆಗಾಗಿ (ಗುದ್ದಲಿ, ಸಲಿಕೆ ಹರಿತಕ್ಕಾಗಿ) ರೂ.10 ಹೆಚ್ಚುವರಿಯಾಗಿ ಪಾವತಿಸಲು ಅವಕಾಶವಿದೆ.
ಗ್ರಾಮಗಳಲ್ಲಿನ ಜನರು ಯಾವುದೇ ಕಾರಣಕ್ಕೂ ಗುಳೆ ಹೊಗದೇ ಸ್ಥಳೀಯವಾಗಿ ಗ್ರಾಮ ಪಂಚಾಯತಿಗೆ ಸಂಪರ್ಕಿಸಿ ಸಾಮುದಾಯಿಕ ಕಾಮಗಾರಿಗಳಾದ ಕೆರೆ, ಚೆಕ್ ಡ್ಯಾಂ ಹೂಳೆತ್ತುವುದು, ಕೃಷಿಹೊಂಡ ನಿರ್ಮಾಣ ಮತ್ತು ಬದು ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಕೂಲಿಕಾರರು ಭಾಗವಹಿಸಿ, ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆದು ಆರ್ಥಿಕವಾಗಿ ಸದೃಢರಾಗಬಹುದು.
ರೈತರು ತಮಗೆ ಜಮೀನು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದದೊಡ್ಡಿ/ ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಈ ಯೋಜನೆಯಡಿ ಅವಕಾಶವಿದೆ. ಈ ಕುರಿತು ಜನರಿಗೆ ಸಹ ರಥ ಮಾಹಿತಿಯನ್ನು ನೀಡಲಿದೆ.












Click it and Unblock the Notifications