ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ನೇಮಕಾತಿಗೆ ತಡೆ
ಬೆಂಗಳೂರು, ಏಪ್ರಿಲ್ 7: ಕರ್ನಾಟಕ ಸರ್ಕಾರ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆ ಹೊರಡಿಸಬಾರದು ಎಂದು ಆದೇಶಿಸಿದೆ. ಈಗಾಗಲೇ ಯಾವುದಾದರೂ ಅಧಿಸೂಚನೆ ಹೊರಡಿಸಿದ್ದರೆ ಅದನ್ನು ವಾಪಸ್ ಪಡೆಯಬೇಕು ಎಂದು ಸೂಚಿಸಿದೆ. ಆಯಾಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದ್ದು, ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದಯ ಹೇಳಿದೆ.
ಸರ್ಕಾರದ ಆದೇಶದ ಅನ್ವಯ ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ನೇಮಕಾತಿಗೆ ಹೊರಡಿಸಲಾದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ಹೇಳಿದ್ದಾರೆ.

ಆದೇಶದ ವಿವರ: ಸರ್ಕಾರ 2025ರ ಜನವರಿ 24 ಮತ್ತು 2024ರ ನವೆಂಬರ್ 25 ಮತ್ತು 2025ರ ಮಾರ್ಚ್ 29ರಂದು ಹೊರಡಿಸಿರುವ ಸುತ್ತೋಲೆಯಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ನೇಮಕಾತಿಗೆ ಹೊರಡಿಸಲಾದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.
ಸರ್ಕಾರದ ಆದೇಶವೇನು?; ಮಾರ್ಚ್ 29ರಂದು ಉಮಾ ವರದಯ್ಯ, ಸರ್ಕಾರದ ಉಪ ಕಾರ್ಯದರ್ಶಿ-1 ಸಿಆಸು ಇಲಾಖೆ (ಸೇವಾ ನಿಯಮಗಳು) ಸುತ್ತೋಲೆಯನ್ನು ಹೊರಡಿಸಿದ್ದರು. ಈ ಸುತ್ತೋಲೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿಯುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿತ್ತು. ಸುತ್ತೋಲೆ ದಿನಾಂಕ 25.11.2024 ಉಲ್ಲೇಖಿಸಲಾಗಿತ್ತು.
ದಿನಾಂಕ 25.11.2024 ಸುತ್ತೋಲೆಯಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ಧೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದಂದು ಸೂಚಿಸಲಾಗಿದೆ ಎಂದು ಹೇಳಿದ್ದರು.
ಆದಾಗ್ಯೂ ಕೆಲವು ನೇಮಕಾತಿ ಪ್ರಾಧಿಕಾರಗಳು ಈ ಸೂಚನೆಗಳನ್ನು ಉಲ್ಲಂಘಿಸಿ ನೇರ ನೇಮಕಾತಿ ಮಾಡಲು ಹೊಸ ಅಧಿಸೂಚನೆಗಳನ್ನು ಹೂರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 25.11.2024ರ ನಂತರ ನೇರ ನೇಮಕಾತಿಗಾಗಿ ಯಾವುದೇ ಹೊಸ ಅಧಿಸೂಚನೆಗಳನ್ನು ಹೊರಡಿಸಿದಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಆಯಾಯ ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ ಸೂಚಿಸಿದೆ.
ಮುಂದುವರೆದು ದಿನಾಂಕ 25.11.2024ರ ಸುತ್ತೋಲೆಯನ್ನು ಉಲ್ಲಂಘಿಸುವ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಯಾಯ ಅಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಈ ಮೂಲಕ ಸೂಚಿಸಲಾಗಿದೆ. ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಆಯೋಗ ರಚನೆ ಮಾಡಿರುವ ಸರ್ಕಾರ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ವರದಿ ಸಲ್ಲಿಕೆ ಮಾಡಲು ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಿದೆ.
ಏಕಸದಸ್ಯ ಆಯೋಗ ಮಾರ್ಚ್ 27ರಂದು ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ಸಚಿವ ಸಂಪುಟ ಸಭೆಯ ಮುಂದೆ ಈ ವರದಿಯನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈ ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು ಎರಡು ತಿಂಗಳವೆರೆಗೆ ವಿಸ್ತರಿಸಲಾಗಿದೆ. ಈ ಆಯೋಗದ ಅಂತಿಮ ವರದಿ ಬಂದು, ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳುವ ತನಕ ಹೊಸ ನೇಮಕಾತಿಗಳಿಗೆ ತಡೆ ನೀಡಲಾಗಿದೆ.












Click it and Unblock the Notifications