₹33,700 ಕೋಟಿ ಹೂಡಿಕೆ ಹರಿವು, 1.09 ಕೋಟಿ ಉದ್ಯೋಗಗಳ ಸೃಷ್ಟಿ... Karnataka Jobs
ಬೆಂಗಳೂರು, ಜುಲೈ 07: ಕರ್ನಾಟಕದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಆಗಿದೆ. ಪ್ರಮುಖ ಕಂಪನಿಗಳ ಜೊತೆ ಮಾಡಿಕೊಂಡ ಒಪ್ಪಂದದಂತೆ ರಾಜ್ಯದಲ್ಲಿ ಬಂಡವಾಳ ಹರಿವು ಹೆಚ್ಚಾಗಿದೆ. ಇದು ಕೇವಲ ಹೂಡಿಕೆಯಲ್ಲ, ಗ್ರಾಮೀಣ ಕರ್ನಾಟಕಕ್ಕೂ ಹೊಸ ಆರ್ಥಿಕ ಶಕ್ತಿ! ಕೈಗಾರಿಕಾ ಕ್ರಾಂತಿಯ ಹೊಸ ಅಧ್ಯಾಯಕ್ಕೆ ಚಾಲನೆ ನೀಡದಂತಾಗಿದೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಂಬಿ ಪಾಟೀಲ್ ಕೆಲವು ಭಾರಿ ವಿದೇಶಿ ಪ್ರವಾಸ ಮಾಡಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ 'ಜಾಗತಿಕ ಹೂಡಿಕೆದಾರರ ಸಮಾವೇಶ 2025' ನಡೆಸುವ ಮೂಲಕ ಲಕ್ಷಾಂತರ ಕೋಟಿ ಹೂಡಿಕೆ ಹರಿದು ಬರುವಂತೆ ಮಾಡಿದ್ದರು. ಇದರಿಂದ ಕೈಗಾರಿಕಾ ಕರ್ನಾಟಕಕ್ಕೆ ಹೊಸ ಬಲ ಸಿಕ್ಕಂತಾಗಿದೆ.

ಸಚಿವ ಎಂಬಿ ಪಾಟೀಲ ಅವರೇ ಹೇಳುವಂತೆ ಕರ್ನಾಟಕಕ್ಕೆ 2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಮೂಲಕ ಬರೋಬ್ಬರಿ ₹33,700 ಕೋಟಿ ಹೂಡಿಕೆ ಹರಿದು ಬಂದಿದೆ. ಇದರಲ್ಲಿ ಕೆಲವು ಹೂಡಿಕೆ, ಕೈಗಾರಿಕೆ ಘಟಕ ಸ್ಥಾಪನೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಈ ಹೂಡಿಕೆ ವಿನಿಯೋಗವಾಗಲಿದೆ.
ಬೃಹತ್ ಬಂಡವಾಳ ಹೂಡಿಕೆಯಿಂದಾಗಿ ಕರ್ನಾಟಕದಲ್ಲಿ ಒಟ್ಟು 1.09 ಕೋಟಿ ಉದ್ಯೋಗ ಅವಕಾಶಗಳು ಲಭಿಸಲಿವೆ. 220 ಕೈಗಾರಿಕಾ ಪ್ರದೇಶಗಳಲ್ಲಿ 61,541 ಎಕರೆ ಭೂಮಿ ಸಿದ್ದವಾಗಿದೆ. ಇದರಲ್ಲಿ ಹೊಸ ಉತ್ಪಾದನಾ ಕೈಗಾರಿಕೆಗಳು ತಲೆಎತ್ತಲಿವೆ. ಇನ್ನೂ 11,222 ಕೈಗಾರಿಕೆ ಯೋಜನೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿವೆ.
ಕರ್ನಾಟಕದ ಬೆಂಗಳುರು ಮಹಾನಗರ ಮಾತ್ರವಲ್ಲದೇ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಧಾರವಾಡ, ಬಳ್ಳಾರಿ, ಕೊಪ್ಪಳ ಮೊದಲಾದ 33 ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಆಗಿದೆ. ಕೈಗಾರಿಕೆಗಳು ತಲೆ ಎತ್ತಲಿವೆ ಎಂದು ಸಚಿವ ಎಂಬಿ ಪಾಟೀಲರ ಅಪ್ಡೇಟ್ ನೀಡಿದ್ದಾರೆ.
ಕೈಗಾರಿಕೆ ಮತ್ತು ಹೂಡಿಕೆ ಮುಖ್ಯಾಂಶಗಳು
* 2024-25ರ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ₹33,700 ಕೋಟಿ ಹೂಡಿಕೆ
* 1.09 ಕೋಟಿ ಉದ್ಯೋಗಗಳು ಸೃಷ್ಟಿ
* 220 ಕೈಗಾರಿಕಾ ಪ್ರದೇಶಗಳಲ್ಲಿ 61,541 ಎಕರೆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ
* 11,222 ಕೈಗಾರಿಕೆ ಯೋಜನೆಗಳಿಗೆ ಒಪ್ಪಿಗೆ
* ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ ಸ್ಥಾಪನೆಗೆ ಆದ್ಯತೆ












Click it and Unblock the Notifications