ಬೆಂಗಳೂರಲ್ಲಿ ಕೆಲಸ ಖಾಲಿ ಇದೆ, ಜನವರಿ 16ರ ತನಕ ಅರ್ಜಿ ಹಾಕಿ
ಬೆಂಗಳೂರು, ಡಿಸೆಂಬರ್ 14: ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿಯೊಂದಿದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 45 ವರ್ಷಗಳು. ಅಭ್ಯರ್ಥಿಗಳು ಜನವರಿ 16, 2025ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆಗಳ ವಿದ್ಯಾರ್ಥಹತೆ ಮತ್ತು ಇತರ ವಿವರ ಇಲ್ಲಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿನ ಗ್ರಾಮೀಣ ಪುನರ್ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ರಾಮೋಹಳ್ಳಿ, ಕೆ. ಗೊಲ್ಲಹಳ್ಳಿ. ಆನೇಕಲ್ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ಬನ್ನೇರುಘಟ್ಟ ಮತ್ತು ಹಂದೇನಹಳ್ಳಿ. ಯಲಹಂಕ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ರಾಜನುಕುಂಟೆ, ಗಂಟಗಾನಹಳ್ಳಿ, ಸಾತನೂರು, ನೊನ್ನೇನಹಳ್ಳಿ ಮತ್ತು ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯಾದ ಕೊಡತಿ ಇಲ್ಲಿ ಖಾಲಿ ಇರುವ ಗ್ರಾಮೀಣ ಪುರ್ನವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಮಾಸಿಕ ಗೌರವಧನ ಆಧಾರದಲ್ಲಿ ಈ ನೇಮಕಾತಿಗಳನ್ನು ಮಾಡಲಾಗುತ್ತದೆ. ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷದೊಳಗಿದ್ದು, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ/ ಅನುರ್ತೀಣರಾಗಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅಭ್ಯರ್ಥಿಯು ಸ್ಥಳೀಯವಾಗಿ ವಾಸವಿರಬೇಕು.
ಸ್ಥಳೀಯವಾಗಿ ವಾಸಿಸುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರಬೇಕು (ಅಂಗವಿಕಲರ ಗುರುತಿನ ಚೀಟಿ ಪ್ರತಿಯನ್ನು ಲಗತ್ತಿಸಬೇಕು), ಭಾಗಶಃ ದೃಷ್ಠಿದೋಷವುಳ್ಳವರು, ಭಾಗಶಃ ಶ್ರವಣದೋಷವುಳ್ಳವರು, ದೈಹಿಕ ಅಂಗವಿಕಲರು ಮಾತ್ರ ಅರ್ಜಿ ಸಲ್ಲಿಸಬಹುದು.
ಆಸಕ್ತ ವಿಕಲಚೇತನರು, ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು-29 ಇಲ್ಲಿಗೆ ಜನವರಿ 16ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ದೂರವಾಣಿ ಸಂಖ್ಯೆ 080- 29752324 ಸಂಪರ್ಕಿಸಬಹುದು.
ಕೊಡಗಿನಲ್ಲಿ ನೇರ ಸಂದರ್ಶನ: ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮಡಿಕೇರಿಯಲ್ಲಿ 1 ಗ್ರೂಪ್-ಡಿ ಹುದ್ದೆ ಖಾಲಿ ಇದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನಿಷ್ಠ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳನ್ನು ಡಿಸೆಂಬರ್ 18ರಂದು ಬೆಳಗ್ಗೆ ನಡೆಯಲಿರುವ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಆಯೋಗದ ದೂರವಾಣಿ ಸಂಖ್ಯೆ 08272-229852 ಅಥವಾ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಧಾರವಾಡದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ) ತರಬೇತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 18ರ ತನಕ ವಿಸ್ತರಣೆ ಮಾಡಲಾಗಿದೆ.
2024-25ನೇ ಸಾಲಿಗೆ ಭಾರತೀಯ ಶುಶ್ರೂಷಾ ಪರಿಷತ್ತಿನ ಮಾರ್ಗಸೂಚಿಯಂತೆ ಧಾರವಾಡ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ತರಬೇತಿ ಕೇಂದ್ರಕ್ಕೆ 24 ತಿಂಗಳ ತರಬೇತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 18 ಡಿಸೆಂಬರ್ ತನಕ ವಿಸ್ತರಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು www.karhfw.gov.in ವೆಬ್‌ಸೈಟ್‍ನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆನಲ್ಲಿ ಡೌನ್‌ಲೋಡ್ ಮಾಡಿಕೊಂಡು ಸೂಕ್ತ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಧಾರವಾಡ ಇಲ್ಲಿಗೆ ಸಲ್ಲಿಸಬೇಕು.












Click it and Unblock the Notifications