ಅರಣ್ಯ ಇಲಾಖೆ ನೇಮಕಾತಿ; 335 ಹುದ್ದೆ ಭರ್ತಿಗೆ ಶೀಘ್ರವೇ ಅಧಿಸೂಚನೆ
ಬೆಂಗಳೂರು, ಜೂನ್ 27: "ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 335 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಅನುಮೋದನೆ ಪಡೆದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು" ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಚಿವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ನೂತನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. "ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ" ಎಂದರು.

ಮಾನವ, ಪ್ರಾಣಿ ಸಂಘರ್ಷ; ಸಚಿವರು ಮಾತನಾಡಿ, "ಮಾನವ ಮತ್ತು ಕಾಡು ಮೃಗಗಳ ನಡುವಿನ ಸಂಘರ್ಷ ಕೂಡ ದೊಡ್ಡ ಸವಾಲಾಗಿದೆ. ಆನೆಗಳು ನಾಡಿಗೆ ಬರುವುದರಿಂದ ಅಪಾಯ ಹೆಚ್ಚು. ರಾಜ್ಯದಲ್ಲಿ ಸುಮಾರು 641 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ 310 ಕಿ.ಮೀ. ಪೂರ್ಣವಾಗಿದೆ. 1 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಲು ಒಂದೂವರೆ ಕೋಟಿ ವೆಚ್ಚವಾಗುತ್ತದೆ. ಉಳಿದ ಕಾಮಗಾರಿ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ಹಣ ಕೋರಲಾಗಿದೆ, 3 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ" ಎಂದು ವಿವರಣೆ ನೀಡಿದರು.
"ರಾಜ್ಯದಲ್ಲಿ 1 ಲಕ್ಷ ಹೆಕ್ಟೇರ್ ಹಸಿರು ವ್ಯಾಪ್ತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ, ಸಸ್ಯಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲದ ಸಂರಕ್ಷಣೆಯೇ ಅರಣ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದ್ದು ಅರಣ್ಯ ವ್ಯಾಪ್ತಿಯಲ್ಲಿ ಯಾರೇ ಅಕ್ರಮವಾಗಿ ಮರ ಕಡಿದರೂ, ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು. ಅರಣ್ಯನಾಶ ಮತ್ತು ವನ್ಯ ಮೃಗಗಳ ಸಾವು, ಮಾನವ-ಮೃಗ ಸಂಘರ್ಷದ ವಿಚಾರ ಬಹಳ ಗಂಭೀರವಾದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು, ಕಳೆದ ಒಂದು ತಿಂಗಳಲ್ಲಿ ನೀವು ಅದನ್ನು ನೋಡಿದ್ದೀರಿ" ಎಂದರು.
"ಅರಣ್ಯಕ್ಕೆ ಎದುರಾಗುವ ಪ್ರಮುಖ ಆಪತ್ತು. ಕಾಡ್ಗಿಚ್ಚು. ಈ ಕಾಡ್ಗಿಚ್ಚು ಉದ್ದೇಶಪೂರ್ವಕವಾದ್ದೋ, ಸ್ವಾಭಾವಿಕವಾದ್ದೋ ಎಂಬುದು ಮುಖ್ಯವಾಗುತ್ತದೆ. ಕೆಲವೆಡೆ ಮರ ಕಡಿದು ಬುಡಕ್ಕೆ ಬೆಂಕಿ ಹಚ್ಚಿ, ಜೆಸಿಬಿಯಿಂದ ಭೂಮಿ ಮಟ್ಟ ಮಾಡಿ ಅರಣ್ಯ ಭೂಮಿ ಕಬಳಿಸಲಾಗುತ್ತಿದೆ ಎಂಬ ಆರೋಪ ಇದೆ. ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವರು ತಿಳಿಸಿದರು.
"ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವನ್ಯಮೃಗ ದಾಳಿಯಿಂದ 51 ಸಾವು ಸಂಭವಿಸಿದ್ದು, ಇದರಲ್ಲಿ 29 ಸಾವು ಆನೆಗಳಿಂದಲೇ ಆಗಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 6030 ಆನೆ ಇದೆ ಎಂದು ಅಂದಾಜು ಮಾಡಲಾಗಿದೆ. ಮನುಷ್ಯರ ಜೀವ ಅಮೂಲ್ಯವಾಗಿದ್ದು, ಅರಣ್ಯ ಇಲಾಖೆ ಜನರಪರ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು" ಎಂದು ಕರೆ ನೀಡಿದರು.
"ಕಾಂಪಾ ನಿಧಿ ಬಳಸಿಕೊಂಡು ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರ ಅರಣ್ಯ ಸಚಿವರಿಗೆ ಕೆಲವು ತಪ್ಪು ಕಲ್ಪನೆ ಇದೆ. ಇದನ್ನು ಇತ್ತೀಚೆಗೆ ನಾನು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹರಿಸಲು ಪ್ರಯತ್ನಿಸಿದ್ದೇವೆ. ಬ್ಯಾರಿಕೇಡ್ ನಿರ್ಮಾಣಕ್ಕೆ ಏಕೆ ಇಷ್ಟು ವೆಚ್ಚ ಮಾಡುತ್ತೀರಿ? ಎಂಬುದು ಅವರ ಪ್ರಶ್ನೆಯಾಗಿದೆ. ಆದರೆ ಮಾನವನ ಜೀವ ಅಮೂಲ್ಯವಾದ್ದು, ಎಷ್ಟೇ ಹಣ ಕೊಟ್ಟರೂ ಅದು ಮರಳಿ ಬರುವುದಿಲ್ಲ. ನಾವು ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆದರೆ ಈ ಅಮೂಲ್ಯ ಜೀವ ಉಳಿಸಬಹುದು ಎಂದು ಅವರಿಗೆ ಮನವರಿಕೆ ಮಾಡಿಸಿದ್ದೇನೆ" ಎಂದು ಸಚಿವರು ಹೇಳಿದರು.
ಜಂಟಿ ಸಮೀಕ್ಷೆ; ಸಚಿವ ಈಶ್ವರ ಖಂಡ್ರೆ ಮಾತನಾಡಿ, "ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗೆ ಜಂಟಿ ಸಮೀಕ್ಷೆ ಪರಿಹಾರವಾಗಿದೆ. ಭೂಮಾಪಕರ ಕೊರತೆಯಿಂದ ಇದು ತಡವಾಗಿದೆ. ಅಧಿವೇಶನದ ವೇಳೆ ಕಂದಾಯ ಸಚಿವರೊಂದಿಗೆ ಸಭೆ ನಡೆಸಿ, ಖಾಸಗಿ ಭೂಮಾಪಕರ ನೆರವು ಪಡೆದು 6 ತಿಂಗಳೊಳಗೆ ಜಂಟಿ ಸರ್ವೆ ಮಾಡಿಸಲು ಪ್ರಯತ್ನಿಸಲಾಗುವುದು" ಎಂದು ಭರವಸೆ ನೀಡಿದರು.
"ರಾಜ್ಯದಲ್ಲಿ 1 ಲಕ್ಷ 2 ಸಾವಿರ ಹೆಕ್ಟೇರ್ ಹಸಿರು ವ್ಯಾಪ್ತಿ (ಗ್ರೀನ್ ಕವರ್) ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷಾ ವರದಿ ಹೇಳಿದೆ. ಪ್ರಸ್ತುತ ರಾಜ್ಯದಲ್ಲಿ ಶೇ.21ರಷ್ಟು ಹಸಿರು ವ್ಯಾಪ್ತಿ ಇದ್ದು, ಇದನ್ನು ಶೇ.33ಕ್ಕೆ ಹೆಚ್ಚಿಸುವುದು ತಮ್ಮ ಗುರಿ ಇದೆ. ಜುಲೈ 1ರಿಂದ 7ರವರೆಗೆ ರಾಜ್ಯದಾದ್ಯಂತ ವನಮಹೋತ್ಸವ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ 1 ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಈ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸಲಾಗುವುದು. ಕಳೆದ 3 ವರ್ಷದಲ್ಲಿ ನೆಟ್ಟ ಗಿಡಗಳ ಪೈಕಿ ಶೇ. 50-60ರಷ್ಟು ಉಳಿದಿವೆ ಎಂದು ತಿಳಿಸಲಾಗಿದೆ. ಈ ಬಾರಿ ನೆಡಲಾಗುವ ಸಸಿಗಳ ಜಿಯೋ ಟ್ಯಾಗ್ ಮಾಡಲಾಗುತ್ತಿದ್ದು, ಕನಿಷ್ಠ ಶೇ.80ರಷ್ಟು ಸಸಿ ಉಳಿಸಲು ಪ್ರಯತ್ನಿಸಲಾಗುವುದು" ಎಂದರು.












Click it and Unblock the Notifications