ಪ್ರೌಢಶಾಲಾ ಶಿಕ್ಷಕರಿಗೆ ಕಾಲೇಜು ಉಪನ್ಯಾಸಕರಾಗಿ ಬಡ್ತಿ: ಗುಡ್‌ನ್ಯೂಸ್ ಕೊಟ್ಟ ಸಚಿವರು
ಬೆಂಗಳೂರು, ಮಾರ್ಚ್ 11: ಪ್ರೌಢಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಡ್ತಿ ನೀಡುವ ಕುರಿತು ವಿಧಾನ ಪರಿಷತ್ ಕಲಾಪದಲ್ಲಿ ಚರ್ಚೆ ನಡೆದಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ನೀಡಿದ್ದಾರೆ. ಉಪನ್ಯಾಸಕರಾಗಿ ಬಡ್ತಿ ನೀಡುವ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ? ಎಂದು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಶಶೀಲ್ ಜಿ. ನಮೋಶಿ ಕೇಳಿದ್ದ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ. ಪರಿಷತ್ ಸದಸ್ಯರು ಕಳೆದ 13 ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ಬಡ್ತಿ ನೀಡದಿರಲು ಕಾರಣವೇನು?. ಈ ವಿಳಂಬದಿಂದಾಗಿ ಸಾಕಷ್ಟು ಶಿಕ್ಷಕರು ಸುದೀರ್ಘ ಸೇವೆ ಮಾಡಿ ಬಡ್ತಿ ಇಲ್ಲದೇ ನಿವೃತ್ತಿ ಹೊಂದುತ್ತಿದ್ದು, ಅನ್ಯಾಯಕ್ಕೊಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನೆ ಪ್ರಶ್ನೆ ಮಾಡಿದ್ದರು.

ಸರ್ಕಾರವು 2025ರ ಫೆಬ್ರವರಿ ತಿಂಗಳೊಳಗಾಗಿಯೇ ಬಡ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಸದನದಲ್ಲಿ ಭರವಸ ನೀಡಿದ್ದರೂ ಇಲ್ಲಿಯವರಗೆ ಜೇಷ್ಠತಾ ಪಟ್ಟಿಯನ್ನೇ ತಯಾರಿಸಿಲ್ಲದಿರುವುದರಿಂದ ಅಧಿಕಾರಿಗಳ ಮೇಲೆಯೇ ಅನುಮಾನ ಮೂಡುವಂತೆ ಮಾಡುತ್ತಿದ್ದು, ಯಾವ ಕಾಲಮಿತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ ಬಡ್ತಿಯನ್ನು ನೀಡಲಾಗುವುದು? ಎಂದು ಕೇಳಿದ್ದರು.
ಸಚಿವರ ಉತ್ತರ: ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡುವ ಸಂಬಂಧ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆಯವರು ದಿನಾಂಕ 02/02/2024 ಮತ್ತು 07/3/2024ರ ಪತ್ರಗಳಲ್ಲಿ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಬೇಕಿದ್ದಲ್ಲಿ ಅನುಸರಿಸಬೇಕಾದ ಮಾನದಂಡಗಳ ಕುರಿತು ಸರ್ಕಾರದ ಆದೇಶದ ಅವಶ್ಯವಿರುವುದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಇವರು ದಿನಾಂಕ 23-04-2024ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದಿನಾಂಕ 16-10-2024ರಂದು ನೀಡಿರುವ ಅಭಿಪ್ರಾಯದನ್ವಯ ಶಾಲಾ ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿ ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ, ಅಂತಿಮ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 7-ಎ ರ ನಿಯಮದನ್ವಯ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಸರ್ಕಾರದ ಪತ್ರ ದಿನಾಂಕ 23-10- 2024ರಲ್ಲಿ ಆಯುಕ್ತರು ಮತ್ತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ/ ಕಲಬುರಗಿ ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಇವರಿಗೆ ಸೂಚಿಸಲಾಗಿತ್ತು.
ಪ್ರಸ್ತುತ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಕುರಿತಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಹಂತದಲ್ಲಿ ನಾಲ್ಕು ವಿಭಾಗಗಳ ಪ್ರೌಢ ಶಾಲಾ ಶಿಕ್ಷಕರುಗಳ ಪಟ್ಟಿಯನ್ನು ಪಡೆದು ಕ್ರೋಢೀಕರಿಸಲಾಗುತ್ತಿದ್ದು, ಒಂದೇ ಸಾಮಾನ್ಯ ಅರ್ಹತಾ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಕ್ರಮವಹಿಸಲಾಗುತ್ತಿದೆ. ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯ ಬಗ್ಗೆ ತ್ವರಿತವಾಗಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.












Click it and Unblock the Notifications