ಬೆಂಗಳೂರಿನಲ್ಲಿ ಹೊಸ ತಯಾರಿಕಾ ಘಟಕ: ಸಾವಿರಾರು ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್
ಬೆಂಗಳೂರು, ಡಿಸೆಂಬರ್ 11: ಕರ್ನಾಟಕಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಪ್ಯಾರಿಸ್ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ ಸರ್ಕಾರ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಪ್ಯಾರಿಸ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸಲು ಸಹಮತ ನೀಡಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 2025ರ ಫೆಬ್ರವರಿಯಲ್ಲಿ ನಡೆಯಲಿರುವ 'ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ 2025' ಸಂಬಂಧ ವಿದೇಶಗಳ ಹೂಡಿಕೆದಾರರನ್ನು ಆಕರ್ಷಿಸಲು ಸಚಿವರ ನಿಯೋಗ ಪ್ಯಾರಿಸ್‌ಗೆ ಭೇಟಿ ನೀಡಿದೆ. ಬುಧವಾರ ಪ್ಯಾರಿಸ್‌ನಲ್ಲಿ ಸ್ನೈಡರ್ ಎಲೆಕ್ಟ್ರಿಕ್‌ನ ಉಪಾಧ್ಯಕ್ಷ ಬ್ರುನೊ ಟರ್ಚೆಟ್ ಅವರನ್ನು ಭೇಟಿಯಾದರು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ, ಅಗತ್ಯ ಸಹಕಾರ ಮತ್ತು ಸಂಪನ್ಮೂಲಗಳ ಕುರಿತು ಚರ್ಚಿಸಿದರು.

ಹೊಸ ಘಟಕ ಸ್ಥಾಫನೆ: 5,000 ಉದ್ಯೋಗ ಸೃಷ್ಟಿ
ರಾಜ್ಯ ಸರ್ಕಾರದ ಅಗತ್ಯ ಸಹಕಾರ, ಸಚಿವರ ಮಾತುಗಳು ಕೇಳುತ್ತಿದ್ದಂತೆ ಪ್ಯಾರಿಸ್‌ನ ಸ್ನೈಡರ್ ಎಲೆಕ್ಟ್ರಿಕ್ ಬೆಂಗಳೂರಿನಲ್ಲಿ ತನ್ನ ಹೊಸ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಯಾರಿಕಾ ಘಟಕ ಸ್ಥಾಪಿಸಲು ಸಹಮತಿಸಿತು. ಈ ಘಟನೆ ನಿರ್ಮಾಣವಾದರೆ ಇಲ್ಲಿ 5,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು.
ಇದೇ ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ 10,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಭವಿಷ್ಯದಲ್ಲಿ ಈ ತಯಾರಿಕೆ ಘಟನೆ ನಿರ್ಮಾಣದ ಬಳಿಕ ಈ ಉದ್ಯೋಗಿಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.
ವಾಹನ ಬಿಡಿಭಾಗ ತಯಾರಿಕೆಯ ವಿಶ್ವದ 7ನೇ ಅತಿದೊಡ್ಡ ಕಂಪನಿಯಾಗಿರುವ ಫೋರ್ವಿಯಾ, ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಸರ್ಕಾರದ ಪರ ಸಚಿವರ ಉನ್ನತ ಮಟ್ಟದ ನಿಯೋಗಕ್ಕೆ ಭರವಸೆ ನೀಡಿದೆ.
ಸಚಿವರ ನಿಯೋಗವು ಫೋರ್ವಿಯಾದ ಉನ್ನತಾಧಿಕಾರಿಗಳ ಜೊತೆಗೆ ಮಾತುಕತೆ ಫಲಪ್ರದವಾಗಿದೆ. ಭವಿಷ್ಯದ ಬಂಡವಾಳ ಹೂಡಿಕೆಗಳಿಗೆ ರಾಜ್ಯ ಸರ್ಕಾರವು ಸಂಪೂರ್ಣ ಬೆಂಬಲ ನೀಡುವುದಾಗಿ ನಿಯೋಗವು ವಿದೇಶ ಕಂಪನಿಗಳಿಗೆ ತಿಳಿಸಿದೆ. ಜೊತೆಗೆ ಸಚಿವರು ಬೆಂಗಳೂರು ಬಂಡವಾಳ ಹೂಡಿಕೆ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.
ವಿವಿಧ ವಲಯದಲ್ಲಿನ ಕರ್ನಾಟಕದ ಸಾಮರ್ಥ್ಯ ಪ್ರಸ್ತಾಪ
ಫ್ರಾನ್ಸ್‌ನ ಅತಿದೊಡ್ಡ ಕೈಗಾರಿಕಾ ಒಕ್ಕೂಟವಾಗಿರುವ ಮೆಡೆಫ್‌ನ ಪದಾಧಿಕಾರಿಗಳನ್ನು ಭೇಟಿಯಾದ ಸಚಿವರು, ನಾವೀನ್ಯತೆ, ಸಂಶೋಧನೆ ಹಾಗೂ ಅಭಿವೃದ್ಧಿ, ವೈಮಾಂತರಿಕ್ಷ, ರಕ್ಷಣೆ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿನ ಕರ್ನಾಟಕದ ಸಾಮರ್ಥ್ಯಗಳನ್ನು ಮನದಟ್ಟು ಮಾಡಿಕೊಟ್ಟರು.
ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ತನ್ನ ಸದಸ್ಯ ಕಂಪನಿಗಳಿಗೆ ವಿವರಿಸಿ ವಾಣಿಜ್ಯ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸುವುದಾಗಿ ಮೆಡೆಫ್ ಭರವಸೆ ನೀಡಿದೆ. ಮೆಡೆಫ್, ಫ್ರಾನ್ಸ್‌ನ 2 ಲಕ್ಷಕ್ಕೂ ಹೆಚ್ಚು ಕಂಪನಿಗಳ ಪ್ರಾತಿನಿಧಿಕ ಸಂಸ್ಥೆಯಾಗಿದೆ.
ಫ್ರಾನ್ಸ್‌ನಲ್ಲಿ ನಡೆದ ರೋಡ್ ಷೋದಲ್ಲಿ, ಬಂಡವಾಳ ಹೂಡಿಕೆ ಆಕರ್ಷಿಸಲು ಕರ್ನಾಟಕ ಅನುಸರಿಸುತ್ತಿರುವ ಪೂರ್ವಭಾವಿ ಸಿದ್ಧತೆ ಹಾಗೂ ಧೋರಣೆಗಳನ್ನು ಅಲ್ಲಿನ ಉದ್ಯಮಗಳಿಗೆ ಪರಿಚಯಿಸಲಾಯಿತು. ಈ ವೇಳೆ ಸಚಿವರಿಗೆ ರಾಜ್ಯ ಕೈಗಾರಿಕೆ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.












Click it and Unblock the Notifications