Get Updates
Get notified of breaking news, exclusive insights, and must-see stories!

ಕೆಲಸ ಬೇಕಾ; ಎಐ ಕಲಿಯಿರಿ: ವೇಗವಾಗಿ ಬದಲಾಗುತ್ತಿದೆ ನೇಮಕಾತಿ ನಿಯಮ, ತಜ್ಞರ ಎಚ್ಚರಿಕೆ

ನವದೆಹಲಿ/ಬೆಂಗಳೂರು: ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳೇ ನೀವು ಎಷ್ಟೇ ಪ್ರತಿಭಾವಂತರಾಗಿರಲಿ, ನಿಮ್ಮಲ್ಲಿ ಕೃತಕ ಬುದ್ಧಿಮತ್ತೆ (Artificial Intelligence / ಎಐ) ಬಳಸುವ ಕೌಶಲ್ಯವಿಲ್ಲದಿದ್ದರೆ ನಿಮಗೆ ಕೆಲಸ ಸಿಗುವುದು ಕಷ್ಟವಾಗಬಹುದು. ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ (McKinsey) ಸೇರಿದಂತೆ ಹಲವು ಪ್ರಮುಖ ಕಂಪನಿಗಳು ತಮ್ಮ ನೇಮಕಾತಿ ಪ್ರಕ್ರಿಯೆಯಲ್ಲಿ ಎಐ ಬಳಕೆಯನ್ನು ಕಡ್ಡಾಯಗೊಳಿಸಿವೆ. ಇದು ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ; ಸಲಹಾ (Consulting), ಮಾಧ್ಯಮ (Media), ವಿನ್ಯಾಸ ಮತ್ತು ಕಾರ್ಯಾಚರಣೆ (Design & Operations)ಯಂತಹ ಎಲ್ಲಾ ವಲಯಗಳಲ್ಲೂ ಈ ಬದಲಾವಣೆಯ ಗಾಳಿ ಬೀಸುತ್ತಿದೆ.

ಏನಿದು ಹೊಸ ಬದಲಾವಣೆ ?

ಜಗತ್ತಿನ ಪ್ರಖ್ಯಾತ ಕನ್ಸಲ್ಟಿಂಗ್ ಕಂಪನಿ ಮೆಕಿನ್ಸೆ, ತನ್ನ ಅಂತಿಮ ಸುತ್ತಿನ ಸಂದರ್ಶನಗಳಲ್ಲಿ ಅಭ್ಯರ್ಥಿಗಳು ತಮ್ಮ ಆಂತರಿಕ ಎಐ ಟೂಲ್‌ಗಳನ್ನು (Internal AI Tools) ಬಳಸಿ ಸಮಸ್ಯೆಗಳನ್ನು ಬಗೆಹರಿಸುವುದನ್ನು ಕಡ್ಡಾಯಗೊಳಿಸಿದೆ. ಅಂದರೆ, ಅಭ್ಯರ್ಥಿಯೊಬ್ಬರಿಗೆ ಕೇವಲ ಕೆಲಸ ಮಾಡಲು ಬಂದರೆ ಸಾಲದು, ಆ ಕೆಲಸವನ್ನು ಎಐ ಸಹಾಯದೊಂದಿಗೆ ಎಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಬಲ್ಲರು ಎಂಬುದೇ ಈಗಿನ ಪ್ರಮುಖ ಪ್ರಶ್ನೆಯಾಗಿದೆ. ಮತ್ತೊಂದು ಪ್ರಮುಖ ಸಂಸ್ಥೆ'ಕೆರ್ನಿ' (Kearney) ಕೂಡ ತನ್ನ ಭಾರತದ ಕಚೇರಿಯಲ್ಲಿ ಎಐ ಆಧಾರಿತ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಮಾನವ ಸಹಜ ತಾರತಮ್ಯವನ್ನು (Human Bias) ಕಡಿಮೆ ಮಾಡಲು ಆರಂಭಿಕ ಸುತ್ತಿನ ಸಂದರ್ಶನಗಳಲ್ಲಿ ಎಐ ಬಳಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

AI Skills for Jobs

ಎಕ್ಸೆಲ್ ರೀತಿಯಲ್ಲೇ ಎಐ ಕೂಡ 'ಬೇಸಿಕ್' ಕೌಶಲ್ಯ

ಕೆಲವು ವರ್ಷಗಳ ಹಿಂದೆ ಕಂಪ್ಯೂಟರ್, ಎಕ್ಸೆಲ್ (Excel) ಅಥವಾ ಇಮೇಲ್ ಕಳುಹಿಸುವುದು ಹೇಗೆ ವಿಶೇಷ ಕೌಶಲ್ಯವಾಗಿತ್ತೋ, ಹಾಗೆಯೇ ಇಂದು ಎಐ ಕೂಡ ಪರಿಗಣಿಸಲ್ಪಡುತ್ತಿದೆ. "ಇದು ಇನ್ಮುಂದೆ 'ಸ್ಪೆಷಲಿಸ್ಟ್' ಕೌಶಲ್ಯವಲ್ಲ, ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಮೂಲಭೂತ ಅವಶ್ಯಕತೆಯಾಗಿದೆ," ಎಂದು ಎಲ್‌ಎಚ್‌ಆರ್ (LHR) ಸಂಸ್ಥಾಪಕ ಅಂಕುರ್ ಅಗರ್ವಾಲ್ ಹೇಳುತ್ತಾರೆ. "ಗ್ರಾಹಕರನ್ನು ಎದುರಿಸಲು ಮತ್ತು ಉತ್ತಮ ಫಲಿತಾಂಶ ನೀಡಲು ಎಐ ತಿಳುವಳಿಕೆ ಅತ್ಯಗತ್ಯ. ಎಐ ಇಲ್ಲದೆ ಕನ್ಸಲ್ಟಿಂಗ್ ಮತ್ತು ಸೇವಾ ವ್ಯವಹಾರಗಳನ್ನು ನಡೆಸುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆ "ಕಂಪನಿಗಳು ಪಾರದರ್ಶಕವಾಗಿರಬೇಕು. ಪವರ್‌ಪಾಯಿಂಟ್ ಸ್ಕಿಲ್ಸ್ ಕೇಳುವಂತೆ, ಎಐ ಕೌಶಲ್ಯವನ್ನೂ ನೇರವಾಗಿ ಕೇಳಬೇಕು," ಎಂದು ಅಗರ್ವಾಲ್ ಹೇಳುತ್ತಾರೆ.

ಇದು ಆಯ್ಕೆಯೇ ಅಥವಾ ಅನಿವಾರ್ಯವೇ ?

"ಎಐ ಮನುಷ್ಯರ ಬದಲಿಗೆ ಅಲ್ಲ, ಆದರೆ ಮನುಷ್ಯರ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಿದೆ," ಎಂಬುದು ತಜ್ಞರ ಅಭಿಪ್ರಾಯ. ಟೈಪ್‌ರೈಟರ್ ಬದಲು ಕಂಪ್ಯೂಟರ್ ಬಂದಾಗ ಹೇಗೆ ಕೆಲಸದ ವೇಗ ಹೆಚ್ಚಿತೋ, ಹಾಗೆಯೇ ಎಐ ಕೂಡ ಕೆಲಸವನ್ನು ಸುಲಭಗೊಳಿಸುತ್ತಿದೆ. "ಇದೊಂದು ಮರ ಕಡಿಯುವವನು ಕೊಡಲಿ ಬಳಸುವುದಕ್ಕಿಂತ ಮಷಿನ್ ಬಳಸಿದರೆ ಹೆಚ್ಚು ಕೆಲಸವಾಗುತ್ತದೆ. ಕಂಪನಿಗಳು ಈಗ ಮಷಿನ್ ಬಳಸುವವರನ್ನೇ ಆಯ್ಕೆ ಮಾಡುತ್ತಿವೆ," ಎಂದು ಅಂಕುರ್ ಅಗರ್ವಾಲ್ ಒಂದು ಉದಾಹರಣೆ ನೀಡುತ್ತಾರೆ. ಅಭ್ಯರ್ಥಿಗಳು ಎಐ ಬಳಸಲು ಹಿಂದೇಟು ಹಾಕಿದರೆ, ಅದು ಅವರ 'ಮನಸ್ಥಿತಿಯ ಸಮಸ್ಯೆ' ಎಂದು ಪರಿಗಣಿಸಲಾಗುತ್ತದೆ.

ಹಿರಿಯರಿಗೆ ಸವಾಲು, ಕಿರಿಯರಿಗೆ ಲಾಭ

ಈ ಬದಲಾವಣೆಯಲ್ಲಿ 'ಜನರೇಷನ್ ಝಡ್' (Gen Z) ಅಥವಾ ಇಂದಿನ ಯುವಕರು ಮೇಲುಗೈ ಸಾಧಿಸುತ್ತಿದ್ದಾರೆ. ಅವರು ಆರಂಭದಿಂದಲೇ ಎಐ ಜೊತೆ ಬೆಳೆದಿರುವುದರಿಂದ ಸಹಜವಾಗಿ ಅದನ್ನು ಬಳಸುತ್ತಾರೆ. ಆದರೆ, ಅನುಭವಿ ಹಿರಿಯ ಉದ್ಯೋಗಿಗಳು ಎಐ ಅನ್ನು ಕೇವಲ ಒಂದು ಟೂಲ್ ಆಗಿ ನೋಡುತ್ತಿದ್ದು, ಅದರೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. "50 ಲಕ್ಷ ಪ್ಯಾಕೇಜ್ ಪಡೆಯುವ ಹಿರಿಯ ಅಧಿಕಾರಿಯೊಬ್ಬರಿಗೆ ಎಐ ಪರಿಣಾಮ ಗೊತ್ತಿಲ್ಲದಿದ್ದರೆ, ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ಪರಿಗಣಿಸಲಾಗುತ್ತಿದೆ," ಎಂದು ತಜ್ಞರು ಎಚ್ಚರಿಸಿದ್ದಾರೆ.

ಮುಂದೇನು ?

ಸಂದರ್ಶನಗಳಲ್ಲಿ ಈಗ ಲೈವ್ ಆಗಿ ಎಐ ಬಳಸಲು ಕೇಸ್ ಸ್ಟಡಿಗಳನ್ನು ನೀಡಲಾಗುತ್ತಿದೆ. ಅಭ್ಯರ್ಥಿಯು ಎಐಗೆ ಎಂತಹ ಪ್ರಶ್ನೆ ಕೇಳುತ್ತಾನೆ? ಎಐ ನೀಡಿದ ಉತ್ತರವನ್ನು ವಿಮರ್ಶಿಸುತ್ತಾನೆಯೇ? ಎಂಬುದು ಮುಖ್ಯವಾಗುತ್ತದೆ. ಅಂತಿಮವಾಗಿ, ಎಐ ಕಲಿಯುವುದು ಉದ್ಯೋಗಾಕಾಂಕ್ಷಿಯ ಜವಾಬ್ದಾರಿಯಾಗಿದೆ. "ಎಐ ಕೌಶಲ್ಯವಿದ್ದರೆ ನೀವು ಸ್ಪರ್ಧೆಯಲ್ಲಿ ಗೆಲ್ಲುತ್ತೀರಿ ಎಂದಲ್ಲ, ಆದರೆ ಕನಿಷ್ಠ ಸ್ಪರ್ಧೆಯಲ್ಲಿ ಉಳಿಯುತ್ತೀರಿ," ಎಂಬುದು ನೇಮಕಾತಿದಾರರ ಸ್ಪಷ್ಟ ಸಂದೇಶ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+