ಮಂಡ್ಯದಲ್ಲಿ ಅಕ್ಟೋಬರ್ 18, 19ರಂದು ಉದ್ಯೋಗ ಮೇಳ, ವಿವರ
ಮಂಡ್ಯ, ಅಕ್ಟೋಬರ್ 09: ಸಕ್ಕರೆ ನಾಡು ಮಂಡ್ಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳ ಗಮನಕ್ಕೆ. ಮಂಡ್ಯ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. 150ಕ್ಕೂ ಅಧಿಕ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತರು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
'ಮಂಡ್ಯ ಟು ಇಂಡಿಯಾ' ಎಂಬ ಹೆಸರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮಂಡ್ಯದ ಸಂಸದ, ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ಆಯೋಜನೆ ಮಾಡಿದ್ದಾರೆ. ಅಕ್ಟೋಬರ್ 18, 19ರಂದು ಈ ಉದ್ಯೋಗ ಮೇಳ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಮಂಡ್ಯ ನಗರದಲ್ಲಿರುವ ಮಾನ್ಯ ಸಂಸದರ ಕಛೇರಿಗೆ ಭೇಟಿ ನೀಡಿ, ತಮ್ಮ ಹೆಸರು ಮತ್ತು ವಿವರವನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಸುರೇಶ್ ಗೌಡ ಮಾಹಿತಿ ನೀಡಿದ್ದಾರೆ.
ಮಂಡ್ಯ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಅಕ್ಟೋಬರ್ 18, 19ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ. 150ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳಲಿದ್ದು, 3000ಕ್ಕೂ ಅಧಿಕ ಹುದ್ದೆಗಳ ಉದ್ಯೋಗವಕಾಶವಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಸ್ಟೀಲ್, ಆಟೋ ಮೊಬೈಲ್, ಐಟಿ, ಮ್ಯಾನಿಫ್ಯಾಕ್ಚರಿಂಗ್, ಎನರ್ಜಿ ಸೇರಿದಂತೆ ಇನ್ನೂ ಹಲವು ವಲಯಗಳ ವಿವಿಧ ಕಂಪನಿಗಳು ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಿವೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ನೋಂದಣಿ ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ: ಕೊಡಗು ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿಯೊಂದಿದೆ. ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 1 ಹುದ್ದೆಗೆ ಒಪ್ಪಂದದ ಆಧಾರದ ಮೇಲೆ 2024-25ನೇ ಸಾಲಿನ ಸೀಮಿತ ಅವಧಿಗೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
ಆಯ್ಕೆಯಾದವರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ವಿರಾಜಪೇಟೆ ತಾಲ್ಲೂಕಿನಲ್ಲಿ ಕೆಲಸ ಮಾಡಬೇಕಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಎಸ್ಸಿ (ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ರೇಷ್ಮೆ), ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂಎಸ್ ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಠ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ರೂ. 30 ಸಾವಿರ ಗೌರವ ಧನ ನೀಡಲಾಗುತ್ತದೆ.
ಈ ಹುದ್ದೆಗೆ ಅರ್ಹರಿರುವ ಅಭ್ಯರ್ಥಿಗಳು ಅಕ್ಟೋಬರ್ 21ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ (ಆತ್ಮ ವಿಭಾಗ), ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು.












Click it and Unblock the Notifications