KPSC: ಜ.19, 25ರಂದು ಕೆಪಿಎಸ್‌ಸಿ ಪರೀಕ್ಷೆ, ಅಭ್ಯರ್ಥಿಗಳಿಗೆ ಮಾರ್ಗಸೂಚಿ
ಬೆಂಗಳೂರು, ಜನವರಿ 16: ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಇಲಾಖೆಗಳ ಗ್ರೂಪ್ 'ಬಿ' ವೃಂದದ ಹುದ್ದೆಗಳ ನೇಮಕಾತಿಗಾಗಿ ಜನವರಿ 19 ಮತ್ತು 25ರಂದು ಪರೀಕ್ಷೆಗಳನ್ನು ನಡೆಸಲಿದೆ. ಈ ಪರೀಕ್ಷೆಗಳು ಸುಗಮವಾಗಿ ನಡೆಯಲು ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲದೇ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಕುರಿತು ಮಾಹಿತಿಯನ್ನು ನೀಡಲಾಗಿದೆ.
ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳು ಕೆಪಿಎಸ್‍ಸಿ ವತಿಯಿಂದ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ಪರೀಕ್ಷೆಯನ್ನು ನಡೆಸುವ ಪೂರ್ವ ಸಿದ್ದತಾ ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೆಪಿಎಸ್‍ಸಿ ಅಭ್ಯರ್ಥಿಗಳು ಪಾಲಿಸಬೇಕಾದ ಪರೀಕ್ಷಾ ಮಾರ್ಗಸೂಚಿಗಳನ್ನು ರೂಪಿಸಿದೆ. ಆನ್‍ಲೈನ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳುವ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳು ಈ ಸೂಚನೆಗಳು ಓದಿಕೊಂಡು, ಪಾಲಿಸಬೇಕು. ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆ ಅಭ್ಯರ್ಥಿಯ ಭಾವಚಿತ್ರವಿರುವ ಚುನಾವಣಾ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಪಾಸ್‍ಪೋರ್ಟ್, ಸರ್ಕಾರಿ ನೌಕರರ ಮೂಲ ಗುರುತಿನ ಚೀಟಿಯನ್ನು ತರಬೇಕು.
ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಉಪಕೇಂದ್ರವನ್ನು ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಕ್ಯಾಲುಲ್ಕೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್ ಸೆಟ್, ಪೇಪರ್, ಬುಕ್‍ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
ವಸ್ತಸಂಹಿತೆ ಮಾಹಿತಿ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಧರಿಸುವಂತಿಲ್ಲ. ಮಂಗಳ ಸೂತ್ರ ಮತ್ತು ಕಾಲುಂಗುರವನ್ನು ಹೊರತುಪಡಿಸಿ ಯಾವುದೇ ಇತರೆ ಆಭರಣಗಳು, ಪುಲ್‍ವೋವರ್ಸ್, ಜಾಕೆಟ್ ಮತ್ತು ಸ್ವೆಟರ್‌ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಿದೆ.
ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್ ಮಾಸ್ಕ್ ಅನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ. ಮೆಟಲ್ ವಾಟರ್ ಬಾಟೆಲ್ ಅಥವಾ ನಾನ್ ಟ್ರಾನ್ಸ್‍ಪರೆಂಟ್ ವಾಟರ್ ಬಾಟಲ್ ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಆಧುನಿಕ ತಂತ್ರಜ್ಞಾನದ ಬಳಸಿ ಪರೀಕ್ಷಾ ಅಕ್ರಮ ಎಸಗುವುದನ್ನು ತಡೆಯುವ ನಿಟ್ಟಿನಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಎಲ್‍ಇಡಿ ಬ್ಯಾಟರಿ ಬಳಸಿ ಅಭ್ಯರ್ಥಿಗಳನ್ನು ತಪಾಸಣೆ ನಡೆಸಲಾಗುವುದು. ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳಿಂದ ಪ್ರಿ ಸ್ಕ್ರೀನಿಂಗ್ ಕಾರ್ಯವನ್ನು ನಡೆಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮೊದಲು ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಹಾಜರಿರಬೇಕು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಬಂಡಲ್‍ಗಳನ್ನು ಕೊಂಡೊಯ್ಯಲು ನೇಮಿಸಿರುವ ಮಾರ್ಗಾಧಿಕಾರಿಗಳು ಸರಿಯಾದ ಸಮಯಕ್ಕೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು, ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಒಎಂಆರ್ ಬಂಡಲ್‍ಗಳನ್ನು ಅಂಚೆ ಮೂಲಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳ ಬಳಿ ಇರುವ ಅಂಚೆ ಕಚೇರಿಗಳು ಒಎಂಆರ್ ಬಂಡಲ್‍ಗಳು ತಲುಪುವವರೆಗೂ ತಪ್ಪದೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಜನವರಿ 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 11.30ರ ತನಕ ಪತ್ರಿಕೆ-01 ಹಾಗೂ ಜನವರಿ 25ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಪತ್ರಿಕೆ-02 ರ ಪರೀಕ್ಷೆ ನಡೆಯಲಿದೆ.
ಮೊಬೈಲ್ ಬ್ಲೂಟೂತ್ ಮತ್ತು ಇತರೆ ಆಧುನಿಕ ಸಂವಹನ ಉಪಕರಣಗಳನ್ನು ಬಳಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗುವುದು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಮಾಡಲಾಗುತ್ತದೆ. ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ.
ನಿಷೇಧಾಜ್ಞೆ ಜಾರಿ: ಪರೀಕ್ಷೆ ಹಿನ್ನಲೆಯಲ್ಲಿ ಜನವರಿ 19 ಹಾಗೂ 25ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 114 ವಿಧಿಸಿ ನಿಷೇಧಾಜ್ಞೆ ಜಾರಿ ಮಾಡಿ, ಆದೇಶ ಹೊರಡಿಸಲಾಗುತ್ತದೆ. ಪರೀಕ್ಷಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಜೆರಾಕ್ಸ್, ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಸೆಂಟರ್‌ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಪಶ್ನೆ ಪತ್ರಿಕೆ ಹಾಗೂ ಒಎಂಆರ್ ಗಳನ್ನು ಕೊಂಡೊಯ್ಯಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸುವಂತೆಯೂ ಸೂಚಿಸಲಾಗಿದೆ.












Click it and Unblock the Notifications