KKRTC recruitment; ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
ಕಲಬುರಗಿ, ಫೆಬ್ರವರಿ 05: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) 925 ಚಾಲಕ ಹಾಗೂ 694 ಚಾಲಕ-ಕಂ-ನಿರ್ವಾಹಕ ಸೇರಿ ಒಟ್ಟು 1,619 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು. ಈಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಶನಿವಾರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಕೆಕೆಆರ್‌ಟಿಸಿ 2020ರಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ 1,619 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಇದರಲ್ಲಿ 1,295 ಸ್ಥಳೀಯ ವೃಂದದ ಹುದ್ದೆಗಳು ಹಾಗೂ 141 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಹಿಂಬಾಕಿ (ಬ್ಯಾಕ್ ಲಾಗ್) ಹುದ್ದೆಗಳು ಸೇರಿವೆ.

ಅಭ್ಯರ್ಥಿಗಳು ನಿಗಮದ ವೆಬ್‌ಸೈಟ್ https://kkrtcjobs.karnataka.gov.in ರಲ್ಲಿ ಆಯ್ಕೆ ಪಟ್ಟಿ ವೀಕ್ಷಿಸಿ ಆಕ್ಷೇಪಣೆಗಳಿದಲ್ಲಿ ಆನ್‌ಲೈನ್ ಮೂಲಕ ಮಾತ್ರ ಫೆಬ್ರವರಿ 12ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಲಿಖಿತ ಅಕ್ಷೇಪಣೆ ಸಲ್ಲಿಕೆಗೆ ಇಲ್ಲಿ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ ಸಂಖ್ಯೆ 6366374977 ಮತ್ತು 08472-227687 ಗಳಿಗೆ ಸಂಪರ್ಕಿಸಬಹುದು.
ಚಾಲಕ ಹುದ್ದೆಗೆ ಅರ್ಜಿ ಕಡಿಮೆ; ಕೆಎಸ್ಆರ್‌ಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳು ಚಾಲಕ ಹುದ್ದೆಗೆ ಅರ್ಜಿಗಳನ್ನು ಕರೆದರೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ. ಟ್ರಾವೆಲ್ಸ್‌ನಲ್ಲಿಯೇ ಹೆಚ್ಚಿಗೆ ಸಂಪಾದನೆ ಮಾಡುವ ಚಾಲಕರು ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಿಲ್ಲ.
ಓಲಾ, ಊಬರ್, ಸ್ವಂತ ಟ್ಯಾಕ್ಸಿಗಳಲ್ಲಿ ಹೆಚ್ಚು ಆದಾಯವನ್ನುಗಳಿಸುವ ಚಾಲಕರು ಕರ್ನಾಟಕ ರಸ್ತೆ ಸಾರಿಗೆ ನಿಗಮ ಚಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸುತ್ತಿಲ್ಲ. ಈ ಹಿಂದೆ 100 ಹುದ್ದೆಗೆ ಅರ್ಜಿ ಕರೆದರೆ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಚಾಲಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಬದಲು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುತ್ತಿದ್ದಾರೆ. ಟ್ಯಾಕ್ಸಿ ಸೇವೆ ಆರಂಭಿಸಿ, ಖಾಸಗಿ ಹೋಟೆಲ್, ಗೆಸ್ಟ್ ಹೌಸ್, ವಿವಿಧ ಕಂಪನಿಗಳಿಗೆ ತಿಂಗಳ ಬಾಡಿಗೆ ಲೆಕ್ಕದಲ್ಲಿ ಕಾರುಗಳನ್ನು ನೀಡುತ್ತಿದ್ದಾರೆ.
ಓಲಾ, ಊಬರ್ ಟ್ಯಾಕ್ಸಿ ಸೇವೆಗಳಲ್ಲಿ ದಿನಕ್ಕೆ ಟ್ರಿಪ್ ಲೆಕ್ಕದಲ್ಲಿ ಸಂಪಾದನೆ ಮಾಡುತ್ತಿದ್ದಾರೆ. ಆದ್ದರಿಂದ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ.












Click it and Unblock the Notifications