KEA Updates: ಸರ್ಕಾರದ ಅನುಮತಿಗೆ ಸಿಗುತ್ತಿದ್ದಂತೆ ವಿವಿಧ ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ
ಬೆಂಗಳೂರು, ಜನವರಿ 05: ಕರ್ನಾಟಕದಲ್ಲಿ ಕಳೆದ ವರ್ಷ 17 ಪರೀಕ್ಷೆ ನಡೆಸಿ, ಸಾವಿರಾರು ಅಭ್ಯರ್ಥಿಗಳ ನೇಮಕಾತಿಯನ್ನು ಯಶಸ್ವಿಯಾಗಿ ನಡೆಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA Recruitment 2025) ಹೊಸ ನೇಮಕಾತಿಗಳಿಗೆ ಸಿದ್ಧತೆ ನಡೆಸಿದೆ. ನೂರಾರು ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದು, ರಾಜ್ಯ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಅಧಿಸೂಚನೆ ಹೊರಡಿಸಲಿದೆ.
ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯುತ್ತಿದ್ದಂತೆ 747 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಿದೆ. ವಿವಿಧ ವೃಂದದ (747) ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸಿಕೊಡುವಂತೆ ಈಗಾಗಲೇ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ.

ಆದರೆ ಸರ್ಕಾರವು ಒಳಮೀಸಲಾತಿ ಸಂಬಂಧ ನೀಡಿದ್ದ ತಡೆ ಸಂಬಂಧ ನೇಮಕಾತಿಗಳು ನಡೆದಿರುವುದು. ಇದೀಗ ಸರ್ಕಾರ ಅನುಮತಿ ನೀಡಿದ ತಕ್ಷಣವೇ ಈ ಮೇಲಿನ ಎಲ್ಲ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ನಿಯಮಗಳಂತೆ ಪರೀಕ್ಷೆ, ಫಲಿತಾಂಶ, ಸಂದರ್ಶನ ಹಾಗೂ ಇನ್ನಿತರ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಹರನ್ನು ಇದೇ ವರ್ಷ ನೇಮಕಾತಿ ಮಾಡಿಕೊಳ್ಳಲು ಪ್ರಾಧಿಕಾರ ಸಜ್ಜಾಗಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು, ವಿವಿಧ ಇಲಾಖೆ, ನಿಗಮಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಸಿಕೊಡಲು ಕೋರಿಕೆ ಸಲ್ಲಿಕೆ ಆಗಿದೆ. ಸರ್ಕಾರ ಅನುಮತಿಸಿದ ತಕ್ಷಣವೇ ಅರ್ಜಿ ಆಹ್ವಾನಿಸಿ, ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೃಷಿ ಮಾರಾಟ ಇಲಾಖೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಸಂಸ್ಥೆಗಳು (KSDL) ನೇಮಕಾತಿ ಮಾಡಿಕೊಳ್ಳುವಂತೆ ಕೋರಿವೆ. ಸದ್ಯ ಇದು ಆಗಿಲ್ಲ. ಸರ್ಕಾರ ಅನುಮಿಸಿದ ಕೂಡಲೇ ನೇಮಕಾತಿ ಆರಂಭಿಸಲಾಗುವುದು ಎಂದರು.
ಅಭ್ಯರ್ಥಿಗಳ ಗೊಂದಲ ಬಗೆಹರಿಸಿದ KEA
ಕೆಇಎ ಈಗಾಗಲೇ ಹೊರಡಿಸಲು ಸಿದ್ಧಪಡಿಸಿದ ಹೊಸ ನೇಮಕಾತಿ ಅಧಿಸೂಚನೆಗಳು ಯಾವುವು.? ಎಷ್ಟು ಹುದ್ದೆಗಳಿವೆ.? Exam Syllabus ಇನ್ನಿತರ ನೇಮಕಾತಿಗಳಿಗೆ ಸಂಪೂರ್ಣ ಅಧಿಸೂಚನೆ ಪ್ರಕಟಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣವೇನು.? ಎಂಬುದರ ಕುರಿತು ಈ ಮೇಲಿನ ಅಂಶಗಳ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದೆ.
ಸರ್ಕಾರ ಒಳ ಮೀಸಲಾತಿ ವಿಚಾರದಿಂದಾಗಿ ಹೊಸ ನೇಮಕಾತಿಗಳಿಗೆ ತಡೆ ನೀಡದಿದ್ದರೆ ಇಷ್ಟೊತ್ತಿಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 747 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿರುತ್ತಿತ್ತು.












Click it and Unblock the Notifications