ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ಮೇ 04: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವ ಮತ್ತು ಶುಲ್ಕ ಪಾವತಿ ಮಾಡುವ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಅಭ್ಯರ್ಥಿಗಳ ಬೇಡಿಕೆ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವ ದಿನಾಂಕವನ್ನು ಮೇ 15 ಮತ್ತು ಶುಲ್ಕ ಪಾವತಿ ಮಾಡುವ ದಿನಾಂಕವನ್ನು ಮೇ 18ರ ತನಕ ವಿಸ್ತರಣೆ ಮಾಡಲಾಗಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ಉಂಟಾಗುವ ತಾಂತ್ರಿಕ ತೊಂದರೆ, ಶುಲ್ಕ ಪಾವತಿ ಮಾಡುವಾಗ ಉಂಟಾಗುವ ದೋಷದಿಂದ ಅಭ್ಯರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.
1000 ಹುದ್ದೆಗಳು: ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 21,400-42,000 ರೂ. ವೇತನ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. (ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿನಾಂಕ 27/02/2018ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.
VAO Date Extended
— KEA (@KEA_karnataka) May 4, 2024
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಮೇ 18ರವರೆಗೆ ಅವಕಾಶ ನೀಡಲಾಗಿದೆ.@CMofKarnataka @drmcsudhakar
* ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ
* ಇತರ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ
* ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಓಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್/ ಹೆಚ್.ಎಸ್.ಸಿ.
* ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
(ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)
ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಆಸಕ್ತರು http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಹುದ್ದೆ ಬಯಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ/ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ, ಆದ್ದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಬೇಕಿದೆ.
ಅಭ್ಯರ್ಥಿಗಳು ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಳಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು ಹಾಗೂ ಸದರಿ ಅರ್ಜಿಯಲ್ಲಿ ಕೋರಲಾದ ಒಂದು ಜಿಲ್ಲೆಗೆ ಮಾತ್ರ ಪರಿಗಣಿಸಲಾಗುವುದು. ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ/ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications