ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ವಯೋಮಿತಿ ಹೆಚ್ಚಿಸಿ ಆದೇಶ
ಬೆಂಗಳೂರು, ನವೆಂಬರ್ 3: ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷಗಳಿಗೆ ಹೆಚ್ಚಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳ ಮಾಡುವಂತೆ ಆಕಾಂಕ್ಷಿಗಳು ಸರಕಾರಕ್ಕೆ ಒತ್ತಾಯಿಸುತ್ತಿದ್ದರು. ಅಕಾಂಕ್ಷಿಗಳು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದರು. ಪ್ರತಿಕ್ರಿಯಿಸಿದ್ದ ಸಚಿವರು ಚರ್ಚೆ ಮಾಡುವುದಾಗಿ ತಿಳಿಸಿದ್ದರು, ಇದೀಗ 2 ವರ್ಷ ವಯೋಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಬಹು ದಿನಗಳ ಬೇಡಿಕೆಯಾಗಿದ್ದ, ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಗಳಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ.@CMofKarnataka@DgpKarnataka pic.twitter.com/5X3JudW44K
— Araga Jnanendra (@JnanendraAraga) November 3, 2022
ಕಳೆದ ಮೂರು ವರ್ಷಗಳಲ್ಲಿ ಕೋವಿಡ್ 19 ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತವಾಗಿರುವುದರಿಂದ ವಯೋಮಿತಿಯಲ್ಲಿ 02 ವರ್ಷಗಳ ವಿನಾಯಿತಿ ನೀಡುವಂತೆ ಹಲವಾರು ಮನವಿಗಳು ಬಂದಿದೆ. ಕೋವಿಡ್ 19 ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ವಂಚಿತರಾಗಿರುವ ಹಿನ್ನಲೆ 2022-23 ನೇ ಸಾಲಿನಲ್ಲಿ ಕರೆದಿರುವ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಎರಡು ವರ್ಷಗಳಿಗೆ ಹೆಚ್ಚಿಸಲಾಗಿದೆ. ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಒಂದು ವಾರಗಳ ಕಾಲ ವಿಸ್ತರಿಸುವಂತೆ ಸೂಚನೆ ನೀಡಲಾಗಿದೆ.

ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯೋಮಿತಿಯನ್ನು 25 ರಿಂದ 27 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ 27 ರಿಂದ 29 ವರ್ಷಳಿಗೆ ಹಾಗೂ ಬುಡ ಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸೇವಾ ನಿರತ ಅಭ್ಯರ್ಥಿಗಳ ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳ ವಯಸ್ಸಿಗೆ 35 ಜಾಗೂ ಇತರೆ ಅಭ್ಯರ್ಥಿಗಳಿಗೆ 33 ವರ್ಷಗಳಿಗೆ ಹೆಚ್ಚಿಸಲಾಗಿದೆ.
ಸಶಸ್ತ್ರ ಪಡೆಯ ಪೊಲೀಶ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 31 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 33 ವರ್ಷಗಳನ್ನು ನಿಗಧಿ ಪಡಿಸಲಾಗಿದೆ.












Click it and Unblock the Notifications