Karnataka government jobs; ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ
ಬೆಂಗಳೂರು, ಡಿಸೆಂಬರ್ 27: ಕರ್ನಾಟಕದ ವಿವಿಧ ಇಲಾಖೆಗಳು ಸಿಬ್ಬಂದಿಗಳ ಕೊರತೆ ಎದುರಿಸುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹುದ್ದೆಗಳು ಖಾಲಿ ಇರುವುದರಿಂದ ಕಡತಗಳು ಸರಿಯಾಗಿ ವಿಲೇವಾರಿಯಾಗದೇ ಕೆಲಸಗಳು ವಿಳಂಬವಾಗುತ್ತಿವೆ. ಹಾಗಾದರೆ ಎಷ್ಟು ಹುದ್ದೆಗಳು ಖಾಲಿ ಇವೆ?.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್‌ನಲ್ಲಿ ಈ ಕುರಿತು ಉತ್ತರ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿ. ಎನ್. ಮಂಜೇಗೌಡ ಕೇಳಿದ ಪ್ರಶ್ನೆಗೆ ಸಿಎಂ ಉತ್ತರ ಕೊಟ್ಟಿದ್ದಾರೆ. ವಿವಿಧ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಎಂದು ಅಂಕಿ ಸಂಖ್ಯೆಗಳನ್ನು ನೀಡಿದ್ದಾರೆ.
ಸಿ. ಎನ್. ಮಂಜೇಗೌಡರು ರಾಜ್ಯ ಸರ್ಕಾರದಲ್ಲಿರುವ ಇಲಾಖೆಗಳ ಸಂಖ್ಯೆ ಎಷ್ಟು?. ಎಲ್ಲಾ ವೃಂದದ ಹುದ್ದೆಗಳು ಸೇರಿದಂತೆ ಈ ಇಲಾಖೆಗಳಿಗೆ ಮಂಜೂರಾಗಿರುವ ಹುದ್ದೆಗಳು ಎಷ್ಟು?. ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು?. ಇಲಾಖಾವಾರು ಮಾಹಿತಿ ನೀಡುವುದು ಎಂದು ಕೇಳಿದ್ದರು.
ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ರಾಜ್ಯ ಸರ್ಕಾರದಲ್ಲಿ ಒಟ್ಟು 43 ವಿವಿಧ ಇಲಾಖೆಗಳಿವೆ. 'ಎ' ವೃಂದದಿಂದ 'ಡಿ' ವೃಂದದ ವರೆಗೆ ಒಟ್ಟು ಮಂಜೂರಾದ ಹುದ್ದೆಗಳು 7,69,981. ಭರ್ತಿಯಾಗಿರುವ ಹುದ್ದೆ 5,11,272 ಮತ್ತು ಖಾಲಿ ಇರುವ ಹುದ್ದೆಗಳು 2,58,709 ಎಂದು ಮಾಹಿತಿ ಕೊಟ್ಟಿದ್ದಾರೆ.

ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬಹುದು
ಇಷ್ಟೊಂದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬವಾಗುತ್ತದೆ. ಅಲ್ಲಿಯ ತನಕ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಡೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದೇ ಎಂದು ಸಿ. ಎನ್. ಮಂಜೇಗೌಡರು ಪ್ರಶ್ನಿಸಿದ್ದರು.
ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿಗ್ರೂಪ್-ಸಿ ವೃಂದದ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಂದಾಜು 82,700 ಹುದ್ದೆಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ
ಮುಖ್ಯಮಂತ್ರಿಗಳು ಇಲಾಖಾವಾರು ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ. ಕೃಷಿ ಇಲಾಖೆಗೆ ಮಂಜೂರಾಗಿರುವ ಹುದ್ದೆ 10, 324. ಖಾಲಿ ಇರುವ ಹುದ್ದೆ 6,316. ಪಶುಸಂಗೋಪನೆ ಮಂಜೂರು 18,553, ಖಾಲಿ 9,972. ಹಿಂದುಳಿದ ವರ್ಗಗಳ ಕಲ್ಯಾಣ ಮಂಜೂರು 15,287, ಖಾಲಿ 8063. ಸಹಕಾರ ಮಂಜೂರು 7196, ಖಾಲಿ 4378. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮಂಜೂರು 10,986, ಖಾಲಿ 5738 ಆಗಿದೆ.
ಇ-ಆಡಳಿತ ಮಂಜೂರು 77, ಖಾಲಿ 75. ಪರಿಸರ ಮತ್ತು ಜೀವಶಾಸ್ತ್ರ ಮಂಜೂರು 12, ಖಾಲಿ 4. ಇಂಧನ ಮಂಜೂರು 452, ಖಾಲಿ 245. ಆರ್ಥಿಕ ಮಂಜೂರು 18,892, ಖಾಲಿ 8779. ಮೀನುಗಾರಿಕೆ ಮಂಜೂರು 1401, ಖಾಲಿ 777. ಆಹಾರ ಮತ್ತು ನಾಗರಿಕ ಸರಬರಾಜು ಮಂಜೂರು 2748, ಖಾಲಿ 1187.

ಮಂಜೂರಾದ ಹುದ್ದೆ, ಖಾಲಿ ಇರುವ ಹುದ್ದೆ
ಅರಣ್ಯ ಇಲಾಖೆ ಮಂಜೂರು 13,124, ಖಾಲಿ 4562. ಕೈಮಗ್ಗ ಮತ್ತು ಜವಳಿ ಮಂಜೂರು 82, ಖಾಲಿ 39. ಉನ್ನತ ಶಿಕ್ಷಣ ಮಂಜೂರು 24,785, ಖಾಲಿ 12,674. ಒಳಾಡಳಿತ ಮಂಜೂರು 1,26,913, ಖಾಲಿ 23,557. ತೋಟಗಾರಿಕೆ ಮಂಜೂರು 6,196, ಖಾಲಿ 3092. ವಾರ್ತೆ ಮಂಜೂರು 577, ಖಾಲಿ 319 ಆಗಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮಂಜೂರು 75, ಖಾಲಿ 60. ಕನ್ನಡ ಮತ್ತು ಸಂಸ್ಕೃತಿ ಮಂಜೂರು 596, ಖಾಲಿ 423. ಕಾರ್ಮಿಕ ಮಂಜೂರು 4352, ಖಾಲಿ 2,500. ಕಾನೂನು ಮಂಜೂರು 26,879, ಖಾಲಿ 8370. ಭಾರೀ ಮತ್ತು ಮಧ್ಯಮ ಕೈಗಾರಿಕೆ ಮಂಜೂರು 604, ಖಾಲಿ 353. ಭಾರೀ ನೀರಾವರಿ ಮಂಜೂರು 1404, ಖಾಲಿ 500. ಗಣಿ ಮಂಜೂರು 1155, ಖಾಲಿ 677.

ಖಾಲಿ ಹುದ್ದೆಗಳ ಸಂಖ್ಯೆ, ಇಲಾಖೆಗಳು
ಸಣ್ಣ ನೀರಾವರಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು 2418, ಖಾಲಿ 1095. ಅಲ್ಪ ಸಂಖ್ಯಾತರ ಕಲ್ಯಾಣ ಮಂಜೂರು 5619, ಖಾಲಿ 3633. ಸಂಸದೀಯ ವ್ಯವಹಾರ ಮಂಜೂರು 1613, ಖಾಲಿ 435. ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಜೂರು 2044, ಖಾಲಿ 1282. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮಂಜೂರು 2,81,862, ಖಾಲಿ 66,059. ಲೋಕೋಪಯೋಗಿ ಮಂಜೂರು 6,799, ಖಾಲಿ 2063 ಆಗಿದೆ.
ಕಂದಾಯ ಮಂಜೂರು 32,309, ಖಾಲಿ 10,621. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 28,223 ಖಾಲಿ 10,409. ಪರಿಶಿಷ್ಟ ಜಾತಿಗಳ ಕಲ್ಯಾಣ ಮಂಜೂರು 15,177, ಖಾಲಿ 9,592. ಪರಿಷ್ಟ ಪಂಗಡಗಳ ಕಲ್ಯಾಣ ಮಂಜೂರು 2758, ಖಾಲಿ 2318 ಆಗಿದೆ.

ರೇಷ್ಮೆ, ಸಾರಿಗೆ, ಪ್ರವಾಸೋದ್ಯಮ ಮತ್ತು ಇತರ ಇಲಾಖೆ
ರೇಷ್ಮೆ ಇಲಾಖೆಗೆ ಮಂಜೂರಾದ ಹುದ್ದೆಗಳು 4560, ಖಾಲಿ 2802. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಂಜೂರು 6,838, ಖಾಲಿ 4216. ಸಣ್ಣ ಕೈಗಾರಿಕೆ ಮಂಜೂರು 563, ಖಾಲಿ 356. ಪ್ರವಾಸೋದ್ಯಮ ಮಂಜೂರು 440, ಖಾಲಿ 286. ಸಾರಿಗೆ ಮಂಜೂರು 2806, ಖಾಲಿ 1602. ನಗರಾಭಿವೃದ್ಧಿ ಮಂಜೂರು 1433, ಖಾಲಿ 839. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂಜೂರು 6940, ಖಾಲಿ 3230. ಯುವಜನ ಸೇವೆಗಳು ಮಂಜೂರು 322, ಖಾಲಿ 207. ಆರೋಗ್ಯ & ವೈದ್ಯಕೀಯ ಶಿಕ್ಷಣ ಮಂಜೂರು 74,857, ಖಾಲಿ 34,644 ಆಗಿದೆ.
ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ 34ರಷ್ಟು ಹುದ್ದೆಗಳು ಖಾಲಿ ಇವೆ. ಆದಾಗ್ಯು ಪ್ರಸ್ತುತ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳನ್ನು ಖಾಲಿ ಇರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ-ಕಾರ್ಯಗಳನ್ನು ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications