ಪ್ರೌಢಶಾಲೆಗಳಿಗೆ ಮತ್ತೆ ಅತಿಥಿ ಶಿಕ್ಷಕರ ನೇಮಕ: ತಿಂಗಳಿಗೆ ಗೌರವ ಧನ ಎಷ್ಟು?
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕ ಸರ್ಕಾರ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ 2ನೇ ಹಂತದಲ್ಲಿ ಅತಿಥಿ ಶಿಕ್ಷಕರನ್ನು ಷರತ್ತಿಗೊಳಪಟ್ಟು ನೇಮಕಾತಿ ಮಾಡಿಕೊಳ್ಳುವ ಕುರಿತು ಆದೇಶವನ್ನು ಹೊರಡಿಸಿದೆ. ಒಟ್ಟು 632 ಅತಿಥಿ ಶಿಕ್ಷಕರನ್ನು ವಿವಿಧ ತಾಲೂಕುಗಳಿಗೆ ಹಂಚಿಕೆ ಮಾಡಿದೆ. ಈ ಕುರಿತು ಕ್ರಮಗಳನ್ನು ಕೈಗೊಂಡು ಅಕ್ಟೋಬರ್ 20ರೊಳಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ. ಬಿ. ಕಾವೇರಿ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಇವರುಗಳಿಗೆ. ರಾಜ್ಯದ ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಇವರುಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಜ್ಞಾಪನಾ ಪತ್ರವು 2024-25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿಯಿರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ರಾಜ್ಯದ ಜಿಲ್ಲಾ ಉಪನಿರ್ದೇಶಕರುಗಳ ಕಛೇರಿಯಿಂದ ಸ್ವೀಕೃತವಾಗಿರುವ ಪತ್ರಗಳನ್ನು ಉಲ್ಲೇಖಿಸಿ ಈ ಆದೇಶವನ್ನು ಹೊರಡಿಸಲಾಗಿದೆ.
ಆದೇಶದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ 2024-2025ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ ವರ್ಗಾವಣೆ ಮೂಲಕ ಖಾಯಂ ಶಿಕ್ಷಕರ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಒಟ್ಟು 8954 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾವಾರು/ ತಾಲ್ಲೂಕುವಾರು ಹಂಚಿಕೆ ಮಾಡಿ ಆದೇಶಿಸಲಾಗಿತ್ತು ಎಂದು ಹೇಳಿದೆ.
2023-24ನೇ ಸಾಲಿನ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಂತರ ಕೆಲವೊಂದು ಜಿಲ್ಲೆಗಳಿಗೆ ಹೆಚ್ಚುವರಿ ಅತಿಥಿ ಶಿಕ್ಷಕರ ಅವಶ್ಯಕತೆ ಇರುತ್ತದೆ ಹಾಗೂ ಕೆಲವೊಂದು ಜಿಲ್ಲೆಗಳಿಗೆ ಕೆಲವು ಅತಿಥಿ ಶಿಕ್ಷಕರ ಅವಶ್ಯಕತೆ ಇರುವುದಿಲ್ಲ. ಅತಿಥಿ ಶಿಕ್ಷಕರ ಮರುಹೊಂದಾಣಿಕೆ ಮಾಡಿಕೊಂಡು ಅದ್ಯರ್ಪಣೆ ಅಥವಾ ಹೆಚ್ಚಿನ ಬೇಡಿಕೆ ಸಲ್ಲಿಸಲು ತಿಳಿಸಲಾಗಿತ್ತು. ಜಿಲ್ಲಾ ಉಪನಿರ್ದೇಶಕರುಗಳು ಅತಿಥಿ ಶಿಕ್ಷಕರ ಹುದ್ದೆಗಳು ಅವಶ್ಯಕತೆ ಇಲ್ಲದ/ ಇರುವ ಕುರಿತು ಪರಿಶೀಲಿಸಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ಅದ್ಯರ್ಪಿಸಿ/ ಹೆಚ್ಚಿನ ಬೇಡಿಕೆಯನ್ನು ಕಛೇರಿಗೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದೆ.
ಅದರಂತೆ ಪರಿಶೀಲಿಸಿ, ಜಿಲ್ಲಾ ಉಪನಿರ್ದೇಶಕರ ಬೇಡಿಕೆ ಅನುಸಾರ ಈಗಾಗಲೇ ಹಂಚಿಕೆ ಮಾಡಿರುವ ಒಟ್ಟು 8954 ಅತಿಥಿ ಶಿಕ್ಷಕರ ಹುದ್ದೆಗಳನ್ನು ಪರಿಷ್ಕರಿಸಿ ಒಟ್ಟು 8968 ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲಾವಾರು/ ತಾಲ್ಲೂಕುವಾರು ಮರು ಹಂಚಿಕೆ ಮಾಡಿ ಆದೇಶಿಸಿದೆ. ಪರಿಷ್ಕರಿಸಿ ಹಂಚಿಕೆ ಮಾಡಿರುವ ಅತಿಥಿ ಶಿಕ್ಷಕರ ಹುದ್ದೆಗಳ ನಮೂನೆಯನ್ನು ಕಳಿಸಿದೆ.
ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವಾಗ ಷರತ್ತುಗಳನ್ನು ಪಾಲಿಸಲು ತಿಳಿಸಿದೆ. ಪ್ರಸ್ತುತ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಸಲು ಅಗತ್ಯವಿರುವ ಅನುದಾನ ವಿವರಗಳನ್ನು ಲಗತ್ತಿಸಿರುವ ನಮೂನೆಯಲ್ಲಿ ದಿನಾಂಕ 20.10.2024 ರೊಳಗೆ [email protected] ಗೆ ಸಲ್ಲಿಸತಕ್ಕದ್ದು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವ ತಾಲೂಕಿಗೆ ಎಷ್ಟು ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ? ಎಂಬ ವಿವರವನ್ನು ನೀಡಲಾಗಿದೆ. ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಒಂದು ತಿಂಗಳಿಗೆ ರೂ.10,500 ರಂತೆ ಗರಿಷ್ಟ 10 ತಿಂಗಳಿಗೆ ಮಾತ್ರ ಗೌರವ ಧನವನ್ನು ನಿಗದಿ ಮಾಡಲಾಗಿದೆ.












Click it and Unblock the Notifications